ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ: ಮೂವರ ಬಂಧನ

ಶನಿವಾರ, ಮಾರ್ಚ್ 23, 2019
24 °C

ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ: ಮೂವರ ಬಂಧನ

Published:
Updated:

ನವದೆಹಲಿ: ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಮೊಬೈಲ್‌ ಫೋನ್‌ ಟವರ್‌ಗಳನ್ನು ಸ್ಥಾಪಿಸುವುದಾಗಿ ದೇಶದಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಜನರನ್ನು ನಂಬಿಸಿ, ಸುಮಾರು ₹1.50 ಕೋಟಿ ವಂಚಿಸಿದ್ದ ಮೂವರು ಆರೋಪಿಗಳನ್ನು ಬುಧವಾರ ಪೊಲೀಸರು 
ಬಂಧಿಸಿದ್ದಾರೆ.

ಸಂಜಯ್‌ಕುಮಾರ್‌ (26), ಸಂತೋಷ್‌ಕುಮಾರ್‌ (29) ಮತ್ತು ಅರ್ಜುನ್‌ ಪ್ರಸಾದ್‌ (26) ಬಂಧಿತರು. ಮಾನೆಸರ್ ಮತ್ತು ಫರೀದಾಬಾದ್‌ನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ, ಇವರನ್ನು ಬಂಧಿಸಲಾಯಿತು ಎಂದು ದ್ವಾರಕದ ಡಿಸಿಪಿ ಆಂಟೊ ಆಲ್ಫಾನ್ಸ್‌ ಹೇಳಿದ್ದಾರೆ. 

ಆರೋಪಿಗಳು ನಕಲಿ ವೆಬ್‌ಸೈಟ್‌ ಮೂಲಕ ಜನರನ್ನು ವಂಚಿಸಿದ್ದಾರೆ. ಆರೋಪಿ ಸಂಜಯ್‌ ಎಂಬಾತ ಸಂಜಯ್‌ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ ಸ್ವಂತ ಟೆಲಿಫೋನ್‌ ಕಂಪನಿ ಶುರು ಮಾಡಿದ್ದ. ವಿಚಾರಣೆ ವೇಳೆ ಸುಮಾರು 200 ಜನರು, ಆರೋಪಿಗಳಿಂದ ವಂಚನೆಗೆ ಒಳಗಾಗಿರುವ ಬಗ್ಗೆ ಒಪ್ಪಿಕೊಂಡಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.

ವಂಚನೆಗೆ ಒಳಗಾದವರಲ್ಲಿ ಒಬ್ಬರಾದ ಡಾಬ್ರಿ ನಿವಾಸಿ ಲೋಕೇಂದ್ರ ಕುಮಾರ್‌, ಇಂಟರ್‌ನೆಟ್‌ನಲ್ಲಿ www.reliancejiotower.net ವೆಬ್‌ಸೈಟ್‌ ಇತ್ತು. ಅದರಲ್ಲಿದ್ದ ಮೊಬೈಲ್‌ ಸಂಖ್ಯೆ ಸಂಪರ್ಕಿಸಿದಾಗ ಮೊಬೈಲ್‌ ಟವರ್‌ ಸ್ಥಾ‍ಪನೆ ಸಂಬಂಧ ಅರ್ಜಿ ನಮೂನೆ ತುಂಬಲು ಹೇಳಿದ್ದರು. ಅರ್ಜಿ ಭರ್ತಿ ಮಾಡಿದ ನಂತರ ‘ಟವರ್‌ ಸ್ಥಾಪನೆಗೆ ಸಮ್ಮತಿ ಪತ್ರ’ವನ್ನು ಇಮೇಲ್‌ ಮೂಲಕ ರವಾನಿಸಿದ್ದರು. ‌

ನಂತರ ಭದ್ರತಾ ಠೇವಣಿ ಹೆಸರಿನಲ್ಲಿ ₹14,413 ಹಣಕ್ಕೆ ಬೇಡಿಕೆ ಇಟ್ಟು, ಆರೋಪಿ ಅರ್ಜುನ್‌ ಪ್ರಸಾದ್‌ ಹೊಂದಿದ್ದ ಆಂಧ್ರ ಬ್ಯಾಂಕಿನ ಖಾತೆಗೆ ಜಮೆ ಮಾಡಿಸಿಕೊಂಡಿದ್ದರು. ಅನುಮಾನ ಬಂದು ಹಣ ವಾಪಸ್‌ ಕೇಳಿದಾಗ ಆರೋಪಿಗಳು ಹಣ ಹಿಂತಿರುಗಿಸಲು ನಿರಾಕರಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ದೆಹಲಿ ಸೈಬರ್‌ ಸೆಲ್‌ ಪೊಲೀಸ್‌ ತನಿಖೆ ನಡೆಸಿದಾಗ, ಆರೋಪಿಗಳು ನಕಲಿ ವಿಳಾಸ ನೀಡಿ ಬ್ಯಾಂಕ್‌ ಖಾತೆ ತೆರೆದಿರುವುದು ಮತ್ತು ನಕಲಿ ವೆಬ್‌ಸೈಟ್‌ ತೆರೆದಿರುವುದು ಐಪಿ ಲಾಗ್‌ನಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !