ಪಂಜಾಬ್: ಕಟ್ಟೆಚ್ಚರದ ಮಧ್ಯೆಯೂ ದಾಳಿ

7
ದಾಳಿ ನಡೆಸಿದ್ದು ಭಯೋತ್ಪಾದಕರೇ ಎಂಬುದರ ಬಗ್ಗೆ ತನಿಖಾಧಿಕಾರಿಗಳ ಶಂಕೆ

ಪಂಜಾಬ್: ಕಟ್ಟೆಚ್ಚರದ ಮಧ್ಯೆಯೂ ದಾಳಿ

Published:
Updated:
Deccan Herald

ಚಂಡೀಗಡ: ರಾಜ್ಯಕ್ಕೆ ಭಯೋತ್ಪಾದಕರು ನುಸುಳಿದ್ದಾರೆ ಎಂಬ ಮಾಹಿತಿ ಇದ್ದ ಕಾರಣ ಒಂದು ವಾರದಿಂದ ಪಂಜಾಬ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಇದರ ಮಧ್ಯೆಯೇ ಅಮೃತಸರದ ಹೊರವಲಯದಲ್ಲಿ ದಾಳಿ ನಡೆದಿದೆ.

‘ದಾಳಿ ನಡೆಸಿದ್ದು ಯಾರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿಲ್ಲ. ಆದರೆ ಈಗ ಲಭ್ಯವಿರುವ ಮಾಹಿತಿಗಳು ಮತ್ತು ಸಾಕ್ಷ್ಯಗಳು ಇದು ಭಯೋತ್ಪಾದಕರ ಕೃತ್ಯವೇ ಹೌದು ಎಂದು ಹೇಳುತ್ತವೆ’ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಸುರೇಶ್ ಅರೋರಾ ಹೇಳಿದ್ದಾರೆ.

‘ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಫಿರೋಜ್‌ಪುರದ ಮೂಲಕ ಜೈಷ್‌ ಎ ಮೊಹಮ್ಮದ್ (ಜೆಇಎಂ) ಸಂಘಟನೆಯ ಏಳು ಉಗ್ರರು ಪಂಜಾಬ್‌ಗೆ ನುಸುಳಿದ್ದಾರೆ. ಅಮೃತಸರದ ಮೂಲಕ ಅವರು ದೆಹಲಿಗೆ ತೆರಳಲು ಯೋಜನೆ ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಾಲ್ಕು ದಿನಗಳ ಹಿಂದಷ್ಟೇ ಪಠಾಣ್‌ಕೋಟ್‌ನಿಂದ ನಾಲ್ವರು ಬಂದೂಕುಧಾರಿಗಳು ಎಸ್‌ಯುವಿಯೊಂದನ್ನು ಅಪಹರಿಸಿದ್ದರು. ಅವರು ಪ್ರವಾಸಕ್ಕೆಂದು ಟ್ಯಾಕ್ಸಿ ತೆಗೆದುಕೊಂಡಿದ್ದರು. ಮಾಧೋಪುರ ತಲುಪಿದಾಗ ಚಾಲಕನಿಗೆ ಬಂದೂಕು ತೋರಿಸಿ, ಎಸ್‌ಯುವಿಯನ್ನು ಅಪಹರಿಸಿದ್ದರು. ಅವರು ಭಯೋತ್ಪಾದಕರೇ ಅಥವಾ ದರೋಡೆಕೋರರೇ ಎಂಬುದರ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿತ್ತು’ ಎಂದು ಮೂಲಗಳು ಹೇಳಿವೆ.

‘ರಾಜ್ಯಕ್ಕೆ ನುಸುಳಿರುವ ಜೆಇಎಂ ಉಗ್ರರಿಗೂ, ಎಸ್‌ಯುವಿ ಅಪಹರಿಸಿದವರಿಗೂ ಮತ್ತು ಗ್ರನೇಡ್ ದಾಳಿ ನಡೆಸಿದವರಿಗೂ ಸಂಬಂಧವಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ದಾಳಿಯ ಸ್ಥಳದಲ್ಲಿ ಯಾವುದೇ ಬಲವಾದ ಸಾಕ್ಷ ಅಥವಾ ಸುಳಿವು ಲಭ್ಯವಾಗಿಲ್ಲ. ನಿರಂಕಾರಿ ಭವನದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ದಾಳಿಕೋರರು ಸಿಖ್ಖರ ಪೇಟವನ್ನು ಧರಿಸಿದ್ದರು ಎಂಬುದಷ್ಟೇ ತಿಳಿದುಬಂದಿದೆ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ನಿರಂಕಾರಿ ಪಂಥದ ಬಗ್ಗೆ ಸಿಖ್ಖರ ವಿರೋಧವಿದೆ. ಹೀಗಾಗಿ ಸಿಖ್ಖರ ಪೇಟ ಧರಿಸಿದರೆ ತನಿಖೆಯ ಹಾದಿ ತಪ್ಪಿಸಬಹುದು ಎಂಬುದೂ ದಾಳಿಕೋರರ ಉದ್ದೇಶವಾಗಿರಬಹುದು. ಆದರೂ ಎಲ್ಲಾ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಭದ್ರತೆ ಹೆಚ್ಚಳಕ್ಕೆ ಸೂಚನೆ: ದಾಳಿಯ ನಂತರ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಭದ್ರತೆಯನ್ನು ಹೆಚ್ಚಿಸುವಂತೆ ಸೂಚಿಸಿದ್ದಾರೆ. 

ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಅಮರಿಂದರ್ ಅವರಿಗೆ ಕರೆ ಮಾಡಿ ದಾಳಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ತನಿಖೆಗೆ ಎಲ್ಲಾ ಸ್ವರೂಪದ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಬಂದೂಕು ತೋರಿಸಿ ಒಳನುಗ್ಗಿದರು
‘ನಿರಂಕಾರಿ ಭವನದ ಗೇಟಿನಲ್ಲಿ ಮಹಿಳಾ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಆ ಮಹಿಳೆಯನ್ನು ಹೆದರಿಸಿ ದಾಳಿಕೋರರು ಒಳನುಗ್ಗಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ಬೈಕ್‌ನಲ್ಲಿ ಬಂದಿದ್ದ ಇಬ್ಬರು ದಾಳಿಕೋರರು ಮಹಿಳೆಯ ಹಣೆಗೆ ಬಂದೂಕು ಇಟ್ಟು ಒಳನುಗ್ಗಿದ್ದರು. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲೇ ಜನರ ಗುಂಪಿನ ಮೇಲೆ ಗ್ರನೇಡ್ ಎಸೆದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

‘ಗ್ರನೇಡ್ ಸ್ಫೋಟದಿಂದ ಜನರು ಗಾಬರಿಗೊಂಡಿದ್ದರು. ದಾಳಿಕೋರರ ಕೈಯಲ್ಲಿ ಬಂದೂಕು ಇದ್ದುದ್ದರಿಂದ ಯಾರೂ ಅವರನ್ನು ಹಿಡಿಯುವ ಪ್ರಯತ್ನ ಮಾಡಲಿಲ್ಲ. ಬಂದೂಕು ತೋರಿಸುತ್ತಲೇ ಅವರು ಪರಾರಿಯಾದರು’ ಎಂದು ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !