ಮಂಗಳವಾರ, ಏಪ್ರಿಲ್ 7, 2020
19 °C
₹125 ಕೋಟಿ ವೆಚ್ಚದ ಲೆಕ್ಕಾಚಾರ

ಟ್ರಂಪ್ ಭೇಟಿಗೆ ಅಹಮದಾಬಾದ್‌ ಸಿಂಗಾರ| ವೆಚ್ಚ ಕೋಟಿ; ಜನರಿಂದ ಪ್ರಶ್ನೆಗಳ ಚಾಟಿ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌ (ಗುಜರಾತ್‌): ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆಚ್ಚಿನ ಸಾಬರಮತಿ ನದಿಯ ಎರಡೂ ದಂಡೆಗಳಲ್ಲಿ ಹರಡಿಕೊಂಡಿರುವ ಗುಜರಾತಿನ ಅಹಮದಾಬಾದ್‌ ನಗರ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗಮನಕ್ಕಾಗಿ ಸಿಂಗಾರಗೊಳ್ಳುತ್ತಿದೆ.

ಟ್ರಂಪ್‌ ಅವರ ಭಾರತದ ಮೊದಲ ಪ್ರವಾಸ ಇದೇ 24ರಂದು ಇಲ್ಲಿಂದಲೇ ಆರಂಭವಾಗಲಿದ್ದು, ನಗರದ ಸಿಂಗಾರ ಹಾಗೂ ಮುಖಂಡರ ರೋಡ್‌ ಷೋ ಕಾರ್ಯಕ್ರಮಕ್ಕೆಂದೇ ಅಂದಾಜು ₹100ರಿಂದ ₹ 125 ಕೋಟಿ ವ್ಯಯಿಸಲಾಗುತ್ತಿದೆ. ಕ್ರೀಡಾಂಗಣದಲ್ಲಿ ನಡೆಯಲಿರುವ ಬಹಿರಂಗ ಸಭೆಗೂ ಸಾಕಷ್ಟು ಹಣ ವ್ಯಯಿಸಲಾಗುತ್ತಿದೆ. ಆದರೆ, ‘ಯಾವ ಮೂಲದಿಂದ ಈ ಹಣವನ್ನು ಖರ್ಚು ಮಾಡಲಾಗುತ್ತಿದೆ’ ಎಂಬುದನ್ನು ಬಹಿರಂಗಪಡಿಸದೇ ಇರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಟ್ರಂಪ್‌, ಪ್ರಧಾನಿ ಮೋದಿ ಹಾಗೂ ಮೇಯರ್‌ ಬಿಜಲ್‌ ಪಟೇಲ್‌ ಮಾತ್ರ ವೇದಿಕೆ ಹಂಚಿಕೊಳ್ಳಲಿರುವ ಕಾರ್ಯಕ್ರಮಕ್ಕೆ 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣದವರೆಗೆ (ಮೊಟೆರಾದ ಸರ್ದಾರ್‌ ಪಟೇಲ್‌ ಸ್ಟೇಡಿಯಂ) ಲಕ್ಷ ಲಕ್ಷ ಜನರನ್ನು ಕರೆತರಲು ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತಿದೆ.

ಸರ್ದಾರ್‌ ಪಟೇಲ್‌ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮ ಹಾಗೂ ಕ್ರೀಡಾಂಗಣದವರೆಗಿನ 22 ಕಿಲೋ ಮೀಟರ್‌ವರೆಗೆ ಈ ಇಬ್ಬರೂ ಮುಖಂಡರ ರೋಡ್‌ ಷೋ ನಡೆಯಲಿದೆ. ನಂತರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಸಭಾ ಕಾರ್ಯಕ್ರಮಕ್ಕಾಗಿ ಸುತ್ತಮುತ್ತಲಿನ ಒಟ್ಟು 8 ಜಿಲ್ಲೆಗಳ ಹತ್ತಾರು ಸಾವಿರ ಸರ್ಕಾರಿ ಸಿಬ್ಬಂದಿ ಹಗಲಿರುಳೂ ಶ್ರಮಿಸುತ್ತಿದ್ದಾರೆ.

ಗುಜರಾತಿನಾದ್ಯಂತ ಕೆಲಸ ಮಾಡುತ್ತಿರುವ 25 ಸಾವಿರ ಪೊಲೀಸರು ಈಗಾಗಲೇ ಟ್ರಂಪ್‌ ಕಾರ್ಯಕ್ರಮದ ಭದ್ರತೆಗಾಗಿ ನಗರದ ತುಂಬ ಓಡಾಡುತ್ತಿದ್ದಾರೆ.

‘ಟ್ರಂಪ್‌ ಬರುವುದರಿಂದ ನಗರದ ರಸ್ತೆಗಳು ಡಾಂಬರು ಕಂಡಿದ್ದನ್ನು ಬಿಟ್ಟು ಇಲ್ಲಿನ ಜನತೆಗೆ ಬೇರೆ ಯಾವುದೇ ಅನುಕೂಲ ಆಗುತ್ತಿಲ್ಲ. ಬಹುದಿನಗಳ ಬೇಡಿಕೆಯಾದ ಅಮೆರಿಕ ದೂತಾವಾಸ ಕಚೇರಿ ಇಲ್ಲಿ ಆರಂಭ ಆಗಬಹುದು ಎಂಬ ನಿರೀಕ್ಷೆ ಮಾತ್ರ ಇದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು.


ಅಹಮದಾಬಾದ್‌ನ ಇಂದಿರಾ ಸೇತುವೆ ಬಳಿ ಕೊಳೆಗೇರಿ ಕಾಣದಂತೆ ಕಟ್ಟಿರುವ ಗೋಡೆಯಾಚೆ ಇಣುಕಿ ನೋಡುತ್ತಿರುವ ಸ್ಥಳೀಯ ನಿವಾಸಿ

‘ಗೋಡೆ ಏಕೆ? ನಮ್ಮನ್ನು ನೋಡಲಿ ಬಿಡಿ’
ಇದುವರೆಗೆ ಗುಂಡಿಗಳು ತುಂಬಿದ್ದ ಅಹಮದಾಬಾದಿನ ಅನೇಕ ರಸ್ತೆಗಳು ಈಗಷ್ಟೇ ಕಪ್ಪನೆಯ ಡಾಂಬರಿನಿಂದ ಕಂಗೊಳಿಸುತ್ತಿರುವುದು ಢಾಳಾಗಿ ಕಾಣುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗಗಳು ತಲೆ ಎತ್ತುತ್ತಿವೆ. ಅತಿಥಿಯನ್ನು ಬರಮಾಡಿಕೊಳ್ಳುವ ಜನ ಅಚಾನಕ್ಕಾಗಿ ನುಗ್ಗಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸದಂತೆ ತಡೆಯಲು ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ ಅಳವಡಿಸಲಾಗಿದೆ. ದಾರಿಯುದ್ದಕ್ಕೂ ಇರುವ ವೃತ್ತಗಳಲ್ಲಿ 50ಕ್ಕೂ ಹೆಚ್ಚು ವೇದಿಕೆಗಳು ತಲೆ ಎತ್ತುತ್ತಿವೆ. ಆ ವೇದಿಕೆಗಳಲ್ಲಿ ಜನಪದ ನೃತ್ಯ ವೈಭವದ ಮೂಲಕ ಬಹುಪರಾಕ್‌ ಹೇಳಲೆಂದೇ ಸ್ಥಳೀಯ ಹಾಗೂ ವಿವಿಧ ರಾಜ್ಯಗಳ ಕಲಾವಿದರನ್ನು ಗೊತ್ತುಪಡಿಸಲಾಗಿದೆ.

ಮೇಲಾಗಿ ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿರುವ ಎಲ್ಲಾ ಬಗೆಯ ‘ಅಂದಗೇಡಿ ಆಕೃತಿ’ಗಳನ್ನು ಮರೆಮಾಚಲು ಹಸಿರು ಬಣ್ಣದ ಪರದೆಗಳನ್ನು ಅಳವಡಿಸಲಾಗಿದೆ. ಅದಕ್ಕಿಂತ ಮುಖ್ಯವಾಗಿ ಟ್ರಂಪ್‌ ಸಂಚರಿಸುವ ಹಾದಿಯಲ್ಲಿ ಇರುವ ಒಂದೆರಡು ಕೊಳೆಗೇರಿಗಳು ಗೋಚರಿಸದಂತೆ ಗೋಡೆಗಳು ಎದ್ದುನಿಂತಿವೆ.

ಇತ್ತೀಚೆಗೆ ತಲೆ ಎತ್ತಿರುವ ವಿಮಾನ ನಿಲ್ದಾಣದ ರಸ್ತೆಯಲ್ಲಿನ ಇಂದಿರಾ ಸೇತುವೆ ಬಳಿ 80 ವರ್ಷಗಳ ಹಿಂದೆಯೇ ತಲೆ ಎತ್ತಿರುವ ಸರಣಿಯಾ ಆವಾಸ್‌ ಕೊಳೆಗೇರಿಯಲ್ಲಿನ ಬಡತನವು ಸಿರಿವಂತ ದೇಶದ ಅಧ್ಯಕ್ಷರಿಗೆ ಕಾಣಕೂಡದು ಎಂದೇ ಮಹಾನಗರ ಪಾಲಿಕೆ ಧುತ್ತನೇ ರಸ್ತೆಯ ಬದಿಯಲ್ಲಿ ಗೋಡೆಯೊಂದನ್ನು ಕಟ್ಟಿದೆ.

ಮನೆಗಳಲ್ಲಿ ಬಳಸುವ ಈಳಿಗೆ, ಚಾಕು, ಚೂರಿ, ಕತ್ತರಿಗಳಿಗೆ ಸಾಣೆ ಹಿಡಿದು ಚೂಪು ಮಾಡುವ ಕಾಯಕವನ್ನೇ ನೆಚ್ಚಿಕೊಂಡಿರುವ ಈ ಕೊಳೆಗೇರಿಯ 1,200 ಕುಟುಂಬಗಳಿಗೆ ಕುಡಿಯುವ ನೀರು, ರಸ್ತೆ, ಶಾಲೆ, ಚರಂಡಿ ವ್ಯವಸ್ಥೆ ಇಲ್ಲ. ಅವರ ಗುಡಿಸಲುಗಳು ಸುಂದರವಾದ ಸೂರುಗಳಾಗಿ ಬದಲಾಗಿಲ್ಲ.

‘ಡ್ರಂ’ ಬರ್ತಾರೆ ಅಂತ ನಮ್ಮನ್ನೇಕೆ ಮರೆ ಮಾಡ್ತೀರಿ. ಅವರೂ ನಮ್ಮನ್ನು ನೋಡಲಿ, ನಾವೂ ಅವರನ್ನು ನೋಡುತ್ತೇವೆ. ನಾವೂ ಮನುಷ್ಯರೇ ಹೊರತು ಪ್ರಾಣಿಗಳಲ್ಲ. ನಮ್ಮನ್ನು ಮೃಗಾಲಯಗಳಲ್ಲಿ ಇರಿಸುವಂತೆ ಯಾಕೆ ಇರಿಸಲಾಗುತ್ತಿದೆ? ಎಂದು ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ ಎದುರು ಗುಜರಾತಿ ಭಾಷೆಯಲ್ಲೇ ಪ್ರಶ್ನೆ ಕೇಳಿದವರು ಅಲ್ಲಿನ ನಿವಾಸಿ ವಿಕ್ರಂ ರಾಥೋಡ್‌ ಎಂಬ ಯುವಕ.

ಈ ಅನಕ್ಷರಸ್ಥ ಯುವಕನಿಗೆ ಅಮೆರಿಕದ ಅಧ್ಯಕ್ಷರ ಹೆಸರು ಟ್ರಂಪ್‌ ಎಂಬುದೂ ಗೊತ್ತಿಲ್ಲ. ಬದಲಿಗೆ ‘ಡ್ರಂ‘ ಎಂದೇ ತಿಳಿದಿದ್ದಾನೆ. ಆದರೂ, ‘ನಮ್ಮ ಮನೆಗಳೆದುರು ಗೋಡೆ ತಲೆ ಎತ್ತಿದ್ದರಿಂದ ನಾವೇನೂ ತಲೆ ತಗ್ಗಿಸುವಂತಾಗಿಲ್ಲ. ಬದಲಿಗೆ ನಮ್ಮಿಂದ ಮತ ಪಡೆದೂ ನಮಗೆ ಮನೆ ಕಟ್ಟಿಕೊಡದವರು ತಲೆ ಎತ್ತದಂತಾಗಿದೆ’ ಎಂದು ಆ ಯುವಕ ಮಾರ್ಮಿಕವಾಗಿ ಹೇಳಿದ.

ಪ್ರಯೋಜನವಾದರೂ ಏನು?
‘ಪ್ರಚಾರಪ್ರಿಯರಾದ ಟ್ರಂಪ್‌ ಮತ್ತು ಮೋದಿ ಅವರ ಈ ಕಾರ್ಯಕ್ರಮಕ್ಕೆ ನೂರಾರು ಕೋಟಿ ಖರ್ಚು ಮಾಡುತ್ತಿರುವುದು ಏಕೆ? ಉಭಯ ದೇಶಗಳ ನಡುವಣ ವ್ಯಾಪಾರ, ವ್ಯವಹಾರ ವೃದ್ಧಿಯ ಕುರಿತ ಒಪ್ಪಂದಗಳ ಸಾಧ್ಯತೆಯೂ ಇಲ್ಲವೆಂದಾದರೆ ಜನತೆಗೆ ಆಗುತ್ತಿರುವ ಪ್ರಯೋಜನವಾದರೂ ಏನು’ ಎಂದು ಮಾಜಿ ಮುಖ್ಯಮಂತ್ರಿ, ಎನ್‌ಸಿಪಿ ಮುಖಂಡ ಶಂಕರ್‌ ಸಿಂಗ್‌ ವಘೇಲಾ ಪ್ರಶ್ನಿಸಿದ್ದಾರೆ.

ಅಮೆರಿಕದಲ್ಲಿ ನಡೆದಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ‘ಅಬ್‌ ಕಿ ಬಾರ್‌ ಟ್ರಂಪ್‌ ಸರ್ಕಾರ್‌’ ಎಂದು ಬಹಿರಂಗವಾಗಿ ಹೇಳಿ ಬಂದ ಮೋದಿ, ಅದೇ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಇಲ್ಲಿ ಕಾರ್ಯಕ್ರಮ ನಡೆಸಲು ಯಾವ ಮೂಲದಿಂದ ಹಣ ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಅವರು ಸವಾಲೆಸೆದಿದ್ದಾರೆ.

ಟ್ರಂಪ್‌ಗೆ ಭೂರಿ ಭೋಜನ
ನವದೆಹಲಿ:
 ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗಾಗಿ ಭರ್ಜರಿ ಭೂರಿ ಭೋಜನ ಸಿದ್ಧಪಡಿಸಲಾಗುತ್ತಿದೆ.

ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಐಟಿಸಿ ಮೌರ್ಯ ಹೋಟೆಲ್‌ನ ‘ಬುಖಾರಾ’ ರೆಸ್ಟೋರೆಂಟ್‌ನಲ್ಲಿ ಸಾಂಪ್ರದಾಯಿಕ ಆಹಾರಗಳು ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುತ್ತಿದೆ. ಈ ಬಾರಿ ‘ಟ್ರಂಪ್‌ ಥಾಲಿ’ ಹೆಸರಿನಲ್ಲಿ ಭೋಜನ ಸಿದ್ಧಪಡಿಸಲಾಗುತ್ತಿದೆ.

ಇದೇ ರೆಸ್ಟೋರೆಂಟ್‌ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರು ಸೇರಿದಂತೆ ಹಲವು ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರಧಾನಿಗಳಿಗೆ ಆತಿಥ್ಯ ನೀಡಲಾಗಿತ್ತು. ಕಳೆದ 41 ವರ್ಷಗಳಿಂದ ಇಲ್ಲಿನ ‘ಮೆನು’ ಸಹ ಬದಲಾಗಿಲ್ಲ.

ಸಮಿತಿಗೆ ಹಣ: ಪ್ರಿಯಾಂಕಾ ಆಕ್ಷೇಪ
ಟ್ರಂಪ್‌ ಅವರ ಅಹಮದಾಬಾದ್‌ ಭೇಟಿಯ ಕಾರ್ಯಕ್ರಮಗಳ ಉಸ್ತುವಾರಿಗಾಗಿ ರಚಿಸಲಾಗಿರುವ ಸಮಿತಿಗೆ ಹಣ ನೀಡಿರುವುದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

‘ಅಧ್ಯಕ್ಷ ಟ್ರಂಪ್‌ ಅವರ ಕಾರ್ಯಕ್ರಮಗಳಿಗೆ ಸುಮಾರು ₹100 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಹಣವನ್ನು ಸಮಿತಿ ಮೂಲಕ ವೆಚ್ಚ ಮಾಡಲಾಗುತ್ತಿದೆ. ಆದರೆ, ಈ ಸಮಿತಿಯಲ್ಲಿರುವವರಿಗೆ ತಾವು ಸದಸ್ಯರಾಗಿದ್ದೇವೆ ಎನ್ನುವುದೇ ಗೊತ್ತಿಲ್ಲ. ಈ ಸಮಿತಿ ಹೆಸರಿನಲ್ಲಿ ಸರ್ಕಾರ ಏನನ್ನು ಮುಚ್ಚಿಡಲು ಹೊರಟಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು