ಮಂಗಳವಾರ, ಆಗಸ್ಟ್ 16, 2022
28 °C

ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ನಿರ್ಮಾಣ ಹಂತದ ಫ್ಲೈಓವರ್‌ಗಳು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ, ಸಿಲಿಗುರಿ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಹೆದ್ದಾರಿ 28ರಲ್ಲಿ ಮತ್ತು ಪಶ್ಚಿಮ ಬಂಗಾಳದ ಸಿಲಿಗುರಿ ಬಳಿ ಹೆದ್ದಾರಿ–31ಡಿಯಲ್ಲಿ ನಿರ್ಮಾಣ ಹಂತದ ಫ್ರೈಓವರ್‌ಗಳ ಒಂದೊಂದು ಭಾಗಗಳು ಶನಿವಾರ ಬೆಳಿಗ್ಗೆ ಕುಸಿದಿವೆ. ಈ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಗಾಯಗೊಂಡಿದ್ದಾರೆ.

ಬಸ್ತಿ ಜಿಲ್ಲೆಯಲ್ಲಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳ್ಳಂಬೆಳಿಗ್ಗೆ ಘಟನೆ ನಡೆದಿದ್ದು, ಹೆಚ್ಚಿನ ಕೆಲಸಗಾರರು ಸ್ಥಳದಲ್ಲಿ ಇಲ್ಲದೇ ಇದ್ದುದರಿಂದ ಹೆಚ್ಚಿನ ಅಪಾಯ ಸಭವಿಸಿಲ್ಲ.

ಫ್ಲೈಓವರ್‌ನ ನಿರ್ಮಾಣಕ್ಕೆ ಹಾಕಲಾಗಿದ್ದ ದೊಡ್ಡ ಗಾತ್ರದ ಬೀಮ್‌ಗಳು ಮುರಿದು ನೆಲಕ್ಕೆ ಬಿದ್ದಿವೆ. ಬೀಮ್‌ಗಳು ಮುರಿದಿರುವುದೇ ಇದಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕಳೆದ ಎರಡು ವಾರಗಳಿಂದ ಈ ಪ್ರದೇಶದಲ್ಲಿ ನಿರಂತರ ಮಳೆ ಬೀಳುತ್ತಿದೆ.

ಮುರಿದು ಬಿದ್ದಿರುವ ಅವಶೇಷಗಳ ಅಡಿ ಇಬ್ಬರು ಸಿಲುಕಿದ್ದಾರೆ. ರಾಜ್ಯ ರಾಜಧಾನಿ ಲಖನೌನಿಂದ 205 ಕಿ.ಮೀ. ದೂರಲ್ಲಿ ಈ ಘಟನೆ ಸಂಭವಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಚುರುಕಾಗಿ ರಕ್ಷಣಾ ಕಾರ್ಯ ನಡೆಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಹೇಳಿದ್ದು, ಹೆದ್ದಾರಿ ಸಂಚಾರಕ್ಕೆ ಅಡಚಣೆಯಾಗದು ಎಂದು ತಿಳಿಸಿದ್ದಾರೆ.

ಕಳೆದ ವಾರ ಭಾರಿ ಮಳೆಯ ಕಾರಣ ಆಗ್ರಾ–ಲಖನೌ ಎಕ್ಸ್‌ಪ್ರೆಸ್‌ ವೇ ಮೇಲಿಂದ ನಾಲ್ವರಿದ್ದ ಕಾರು ಸರ್ವೀಸ್‌ ರಸ್ತೆಗೆ ಬಿದ್ದಿತ್ತು. 

ಮೇ ತಿಂಗಳಲ್ಲಿ ವಾರಣಾಸಿಯಲ್ಲಿ ನಿರ್ಮಾಣ ಹಂತದ ಫ್ಲೈಓವರ್‌ನ ಒಂದು ಭಾಗ ಕುಸಿದು, ಹಲವು ಜನ ಮೃತಪಟ್ಟಿದ್ದರು.

ರೈಲ್ವೆ ಫ್ರೈಓವರ್‌ ಕುಸಿತ
ಪಶ್ಚಿಮ ಬಂಗಾಳದ ಸಿಲಿಗುರಿ ಬಳಿ ಹೆದ್ದಾರಿ 31ಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಫ್ಲೈಓವರ್‌ ಶನಿವಾರ ಬೆಳಿಗ್ಗೆ ಕುಸಿದಿದೆ. ಸಾವು ನೋವು ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಅವಶೇಷಗಳ ತೆರವು ಮತ್ತು ಪುನರ್‌ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು