ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌–ಮೋದಿ ಜುಗಲ್‌ಬಂದಿ

ಅಮೆರಿಕ ಅಧ್ಯಕ್ಷರ ಎರಡು ದಿನಗಳ ಭೇಟಿ l ಅಹಮದಾಬಾದ್‌ನಲ್ಲಿ ಸಾರ್ವಜನಿಕ ರ್‍ಯಾಲಿ ಇಂದು
Last Updated 24 ಫೆಬ್ರುವರಿ 2020, 3:50 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ಬೆಳಿಗ್ಗೆ 11.40ರ ಹೊತ್ತಿಗೆ ಅಹಮದಾಬಾದ್‌ಗೆ ಬರಲಿದ್ದಾರೆ. ಈ ಭೇಟಿಯ ಫಲಶ್ರುತಿಯ ಬಗ್ಗೆ ಎರಡೂ ದೇಶಗಳಲ್ಲಿ ಬಾರಿ ಕುತೂಹಲ ಇದೆ.

ಮೊಟೆರಾದಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮದಲ್ಲಿ ಟ್ರಂಪ್‌ ಭಾಗಿಯಾಗಲಿದ್ದಾರೆ. ಇದು ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಟ್ರಂಪ್‌ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದಕ್ಕೂ ಮೊದಲು, ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಮೊಟೆರಾ ಸ್ಟೇಡಿಯಂವರೆಗೆ ರೋಡ್‌
ಷೋ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಟ್ರಂಪ್‌ ಅವರನ್ನು ಸ್ವಾಗತಿಸಲಿದ್ದಾರೆ. ಈ ರೋಡ್‌ಷೋದಲ್ಲಿ ಎಷ್ಟು ಜನರು ಸೇರಲಿದ್ದಾರೆ ಎಂಬುದೇ ಇತ್ತೀಚಿನ ದಿನಗಳಲ್ಲಿ ದೊಡ್ಡ ಚರ್ಚೆಯಾಗಿತ್ತು. ಸುಮಾರು ಒಂದು ಕೋಟಿ ಜನರು ತಮ್ಮನ್ನು ಸ್ವಾಗತಿಸಲು ಸೇರಲಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಟ್ರಂಪ್‌ ಶುಕ್ರವಾರ ಹೇಳಿದ್ದರು.

ಭಾರತಕ್ಕೆ ಬರುವುದಕ್ಕಾಗಿ ವಾಷಿಂಗ್ಟನ್‌ನಲ್ಲಿ ವಿಮಾನ ಏರುವ ಮೊದಲೂ ಟ್ರಂಪ್‌ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.‘ಭಾರತದ ಜನರ ಜತೆಗೆ ಸಮಯ ಕಳೆಯುವುದನ್ನು ಎದುರು ನೋಡುತ್ತಿದ್ದೇನೆ. ಲಕ್ಷಾಂತರ ಜನರು ನಮ್ಮ ಜತೆಗೆ ಇರಲಿದ್ದಾರೆ. ಪ್ರಧಾನಿ ಮೋದಿ ಜತೆಗೆ ನನ್ನ ಸಂಬಂಧ ಅತ್ಯುತ್ತಮವಾಗಿದೆ. ಅವರು ನನ್ನ ಗೆಳೆಯ’ಎಂದು ಟ್ರಂಪ್‌ ಹೇಳಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ, ಅಮೆರಿಕದ ಜತೆಗೆ ವಾಣಿಜ್ಯ ಒಪ್ಪಂದದ ಕುರಿತು ಚರ್ಚೆ ನಡೆಸಲು ಭಾರತ ಬಯಸಿದೆ. ಆದರೆ, ವ್ಯಾಪಾರದ ವಿಚಾರ ಚರ್ಚೆ ಆಗುವುದಿಲ್ಲ ಎಂದು ಟ್ರಂಪ್‌ ಇತ್ತೀಚೆಗೆ ಹೇಳಿದ್ದರು. ಭಾರತದ ಪ್ರಸ್ತಾವಿತ ಹೊಸ ಸುಂಕವು ವ್ಯಾಪಾರ ಮಾತುಕತೆಯನ್ನು ಸಂಕೀರ್ಣಗೊಳಿಸಿದೆ ಎಂದೂ ಕೊಲೆರಾಡೊದಲ್ಲಿ ಕಳೆದ ವಾರ ಹೇಳಿದ್ದರು. ಹಾಗಿದ್ದರೂ ‘ವ್ಯಾಪಾರದ ವಿಚಾರ ಚರ್ಚೆಗೆ ಬರಲಿದೆ’ ಎಂದೂ ಹೇಳಿದ್ದರು.

ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮೋದಿ ಜತೆಗೆ ಟ್ರಂಪ್‌ ಚರ್ಚಿಸುವ ಸಾಧ್ಯತೆ ಇದೆ. ‘ಎರಡೂ ದೇಶಗಳು ಹೊಂದಿರುವ ಪ್ರಜಾತಂತ್ರದ ಪರಂಪರೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತು ಸಾರ್ವಜನಿಕ ಸಭೆ ಮತ್ತು ಮುಖಾಮುಖಿ ಚರ್ಚೆಯಲ್ಲಿ ಟ್ರಂಪ್‌ ಮಾತನಾಡಲಿ
ದ್ದಾರೆ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ. ಈ ವಿಚಾರದ ಚರ್ಚೆಯು ಪ್ರಧಾನಿ ಮೋದಿಗೆ ಇರುಸುಮುರುಸು ಉಂಟು ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಮೆರಿಕದ ಆರ್ಥಿಕತೆಯನ್ನು ಬಲಪಡಿಸುವುದೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿ ಉದ್ದೇಶ. ಅವರ ಭೇಟಿಯಿಂದ ಭಾರತಕ್ಕೆ ಲಾಭವಾಗುತ್ತದೆ ಎಂದು ನನಗೆ ಅನಿಸುತ್ತಿಲ್ಲ
-ಸುಬ್ರಮಣಿಯನ್‌ ಸ್ವಾಮಿ

ಬಿಜೆಪಿಯ ರಾಜ್ಯಸಭಾ ಸದಸ್ಯ

ಭಾರತಕ್ಕೆ ಟ್ರಂಪ್‌ ಭೇಟಿ ನೀಡುತ್ತಿರುವುದು ನಮ್ಮನ್ನು ಚಿಂತೆಗೀಡು ಮಾಡಿದೆ. ಅಮೆರಿಕದ ರೈತರಿಗೆ ವಿನಾಯಿತಿ ಕೇಳುವ ಸಲುವಾಗಿಯೇ ಅವರು ಭೇಟಿ ನೀಡುತ್ತಿದ್ದಾರೆ
-ಸೀತಾರಾಂ ಯೆಚೂರಿ ಸಿಪಿಎಂ ಪ್ರಧಾನ ಕಾರ್ಯದರ್ಶಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಪ್ರವಾಸ ಕೈಗೊಂಡಿರುವುದು ಗೌರವ ತರುವಂತಹ ವಿಷಯ. ಅವರನ್ನು ಸ್ವಾಗತಿಸಲು ಭಾರತ ಉತ್ಸುಕವಾಗಿದೆ

-ನರೇಂದ್ರ ಮೋದಿ
ಪ್ರಧಾನಿ

ಇದು ಬಹಳ ದೊಡ್ಡ ಕಾರ್ಯಕ್ರಮ. ಭಾರತವು ಹಿಂದೆಂದೂ ಕಂಡಿರದಷ್ಟು ದೊಡ್ಡ ಕಾರ್ಯಕ್ರಮ. ಹಾಗೆಂದು ನನಗೆ ಮೋದಿ ಹೇಳಿದ್ದಾರೆ
-ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷ

**************

ದೆಹಲಿಗೆ ಸರ್ಪಗಾವಲು

-ಟ್ರಂಪ್‌ ಸೋಮವಾರ ಸಂಜೆ ದೆಹಲಿ ತಲುಪಲಿದ್ದಾರೆ. ಹಾಗಾಗಿ, ದೆಹಲಿಯಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಟ್ರಂಪ್‌ ನೇತೃತ್ವದ ನಿಯೋಗ ಸಾಗುವ ದಾರಿಯುದ್ದಕ್ಕೂ ‘ಶಾರ್ಪ್‌ ಶೂಟರ್‌’ಗಳನ್ನು ನಿಯೋಜಿಸಲಾಗಿದೆ

- ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಟ್ರಂಪ್‌ ತಂಗಲಿದ್ದಾರೆ. ಟ್ರಂಪ್‌ ನಿರ್ಗಮಿಸುವ ತನಕ ಈ ಹೋಟೆಲ್‌ಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹೋಟೆಲ್‌ನ ಎಲ್ಲ 438 ಕೊಠಡಿಗಳನ್ನು ಈ ನಿಯೋಗಕ್ಕಾಗಿ ಕಾಯ್ದಿರಿಸಲಾಗಿದೆ

- ಹೋಟೆಲ್‌ ಇರುವ ಸರ್ದಾರ್‌ ಪಟೇಲ್‌ ಮಾರ್ಗದ ಸಿ.ಸಿ.ಟಿ.ವಿ. ಕ್ಯಾಮೆರಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಕತ್ತಲಿನಲ್ಲಿಯೂ ದೃಶ್ಯ ಸೆರೆಹಿಡಿಯಬಲ್ಲ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಾಯುಪಡೆಯ ವಿಮಾನಗಳು ಈ ಪ್ರದೇಶದ ಮೇಲೆ ನಿಗಾ ಇರಿಸಲಿವೆ

- ಅಮೆರಿಕದ ಸೀಕ್ರೆಟ್‌ ಸರ್ವಿಸ್‌ನ ಏಜೆಂಟರು ಈಗಾಗಲೇ ಭಾರತ ತಲುಪಿದ್ದು ಭದ್ರತೆಯ ಬಗ್ಗೆ ಭಾರತದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ

- ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮ ಮತ್ತು ಮೊಟೆರಾ ಕ್ರೀಡಾಂಗಣಕ್ಕೆ ಟ್ರಂಪ್‌ಸಾಗುವ ದಾರಿಯಲ್ಲಿ ಅವರನ್ನು ಸ್ವಾಗತಿಸಲು ಕನಿಷ್ಠ 50 ಸಾವಿರ ಜನ ಸೇರಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ

- ಭಾರತಕ್ಕೆ ಡೊನಾಲ್ಡ್‌ ಟ್ರಂಪ್‌ ಭೇಟಿ ನೀಡುತ್ತಿರುವುದನ್ನು ವಿರೋಧಿಸಿ ಸಿಪಿಎಂ ಹಾಗೂ ಸಿಪಿಐ ಫೆ. 24 ಮತ್ತು 25ರಂದು ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿವೆ‌

- ‘ಉದ್ಯೋಗ ಅರಸಿ ಅಮೆರಿಕಕ್ಕೆ ತೆರಳುವವರಿಗೆ ಅಗತ್ಯವಿರುವ ಎಚ್‌–1ಬಿ ವೀಸಾ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಹೀಗಾಗಿ ವೀಸಾ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಕುರಿತಂತೆ ಪ್ರಧಾನಿ ಮೋದಿ ಅವರು ಟ್ರಂಪ್‌ ಅವರಲ್ಲಿ ಪ್ರಸ್ತಾಪಿಸುವರೇ’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ

**************

ಟ್ರಂಪ್ ಪ್ರವಾಸ
ಫೆ.24 ಸೋಮವಾರ

11.40 (ಬೆಳಿಗ್ಗೆ): ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ

12.15: ಅಹಮದಾಬಾದ್‌ನ ಸಾಬರಮತಿ ಆಶ್ರಮಕ್ಕೆ ಭೇಟಿ

1.05: ಮೊಟೆರಾ ಕ್ರೀಡಾಂಗಣದಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ

5.15 (ಸಂಜೆ): ಆಗ್ರಾದ ತಾಜ್‌ಮಹಲ್‌ಗೆ ಭೇಟಿ

6.45: ದೆಹಲಿಗೆ ಪ್ರಯಾಣ


ಫೆ. 25 ಮಂಗಳವಾರ:

10.00 (ಬೆಳಿಗ್ಗೆ): ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ

10.30: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ನಮನ

11.00: ಹೈದರಾಬಾದ್ ಹೌಸ್‌ನಲ್ಲಿ ಟ್ರಂಪ್–ಮೋದಿ ಮಾತುಕತೆ

7.30 (ಸಂಜೆ):ರಾಷ್ಟ್ರಪತಿ ಭವನದಲ್ಲಿ ರಾಮನಾಥ ಕೋವಿಂದ್ ಭೇಟಿ

10.00: ನಿರ್ಗಮನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT