ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿಕೊಂಡ ಕಾವೇರಿ, ಲಕ್ಷ್ಮಣತೀರ್ಥ ನದಿ

ತೀರ್ಥಹಳ್ಳಿ ಸಮೀಪದ ಭಾರತೀಪುರ ಬಳಿ ರಸ್ತೆಗೆ ಜಾರಿದ ಗುಡ್ಡ, ಬೈಲಹೊಂಗಲ ಬಳಿ ಕೊಚ್ಚಿಹೋದ ಬ್ಯಾರೇಜ್‌
Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯಿಂದ ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಮತ್ತಷ್ಟು ಮೈದುಂಬಿಕೊಂಡು ಹರಿಯುತ್ತಿವೆ.

ದಕ್ಷಿಣ ಕೊಡಗಿನ ಶ್ರೀಮಂಗಲ, ಇರ್ಪು, ಕುಟ್ಟ, ಬಿರುನಾಣಿ, ಬಾಳೆಲೆ, ಹುದಿಕೇರಿ, ಪೊನ್ನಂಪೇಟೆ ಭಾಗದಲ್ಲಿ ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ಲಕ್ಷ್ಮಣತೀರ್ಥ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹರಿಹರ– ಬಲ್ಲೇಮಂಡೂರು ಬಳಿ ಸೇತುವೆ ಮೇಲೆ ನದಿ ನೀರು ಬಂದಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನದಿಯ ಎಡ ಭಾಗದ ಭತ್ತದ ಗದ್ದೆಗಳು ಜಲಾವೃತಗೊಂಡಿದ್ದು ಸಾಗರದಂತೆ ಗೋಚರಿಸುತ್ತಿವೆ.

ಕೊಟ್ಟಗೇರಿ, ಬಾಳೆಲೆ, ದೋಣಿ ಕಡವು ರಸ್ತೆ ಕುಸಿದಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಭಾರಿ ಮಳೆ ಸುರಿಯುತ್ತಿರುವ ವಿರಾಜಪೇಟೆ ಹಾಗೂ ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಶಾಲೆಗಳಿಗೆ ಮಾತ್ರ ಮಂಗಳವಾರ ರಜೆ ನೀಡಲಾಗಿತ್ತು. ಭಾಗಮಂಡಲ, ನಾಪೋಕ್ಲು, ತಲಕಾವೇರಿಯಲ್ಲಿ ಬಿಡುವು ನೀಡುತ್ತಾ ಮಳೆ ಆಗುತ್ತಿರುವ ಪರಿಣಾಮ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ತಗ್ಗಿದೆ.

ವಿರಾಜಪೇಟೆಯಲ್ಲಿ ಸುರಿದ ಮಳೆಗೆ ನೆಹರೂನಗರದಲ್ಲಿ ಗುಡ್ಡವೊಂದು ಕುಸಿದಿದೆ.

ಹಾಸನ ಜಿಲ್ಲೆ ಸಕಲೇಶಪುರ, ಆಲೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಬಿರುಸಾಗಿದ್ದು, ಹೇಮಾವತಿ ನದಿಯಲ್ಲಿ ಹರಿವು ಏರಿದೆ. ನದಿ ಪಾತ್ರದ ತಗ್ಗು ಪ್ರದೇಶಗಳೆಲ್ಲವೂ ಜಲಾವೃತಗೊಂಡಿವೆ. ಸಕಲೇಶಪುರ ಪಟ್ಟಣದ ಹೊಳೆ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಬಾಗಿಲು ಭಾಗಶಃ ಮುಳುಗುವವರೆಗೂ ನೀರಿನ ಮಟ್ಟ ಏರಿದೆ.

ಭತ್ತದ ಗದ್ದೆಗಳು ಜಲಾವೃತಗೊಂಡು ಇಡೀ ಪಟ್ಟಣ ದ್ವೀಪವಾಗಿದೆ. ಮೂಡಿಗೆರೆ– ಸಕಲೇಶಪುರ ನಡುವೆ ವೆಂಕಟಹಳ್ಳಿ ಬಳಿ ಭಾರೀ ಮರವೊಂದು ರಸ್ತೆಗೆ ಉರುಳಿದೆ. ಜೊತೆಗೆ ಮಣ್ಣು ಕುಸಿದಿದ್ದು, 4 ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸಕಲೇಶಪುರ ತಾಲ್ಲೂಕಿನಲ್ಲಿ ಶಾಲೆಗಳಿಗೆ ಮಂಗಳವಾರ ರಜೆ ನೀಡಲಾಗಿತ್ತು.

(ಸಕಲೇಶಪುರ ಹಾಗೂ ಮೂಡಿಗೆರೆ ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜೀವನದಿ ಹೇಮಾವತಿ ನೀರಿನ ಹರಿವು ಹೆಚ್ಚಾಗಿದ್ದು, ಇಲ್ಲಿಯ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನದ ಬಾಗಿಲು ವರೆಗೆ ನೀರು ಉಕ್ಕಿರುವುದು ಪ್ರಜಾವಾಣಿ ಚಿತ್ರ: ಜಾನೇಕೆರೆ ಆರ್. ಪರಮೇಶ್ (ಎಡಚಿತ್ರ) ಬೈಲಹೊಂಗಲ ತಾಲ್ಲೂಕಿನ ಬೇವಿನಕೊಪ್ಪ–ಸಂಗೊಳ್ಳಿ ಗ್ರಾಮಗಳ ನಡುವೆ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಗಿರುವುದು)

ವಾಹನ ಸಂಚಾರಕ್ಕೆ ಅಡ್ಡಿ: ಶಿವಮೊಗ್ಗ- ತೀರ್ಥಹಳ್ಳಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಭಾರತೀಪುರ ಬಳಿ ಸೋಮವಾರ ರಾತ್ರಿ ರಸ್ತೆಗೆ ಗುಡ್ಡ ಜರಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ.

ಪಟ್ಟಣದ ಕುರುವಳ್ಳಿಯಲ್ಲಿನ ಶಿಲ್ಪಕಲಾ ಸಂಗಮ ಕೇಂದ್ರದ ಬಳಿಯ ಗುಡ್ಡ ಜರಿದು ಶಿಲ್ಪಕಲಾ ಕೇಂದ್ರಕ್ಕೆ ಹಾನಿ ಆಗಿದೆ. ಶಿಲ್ಪಕಲಾ ಸಂಗಮ ಕೇಂದ್ರದಲ್ಲಿದ್ದ ಯುವಶಿಲ್ಪಿ ಜಗದೀಶ್ ಅಪಾಯದಿಂದ ಪಾರಾಗಿದ್ದಾರೆ.

ಮಂಗಳವಾರ ಮುಂಜಾನೆಯಿಂದ ಮಳೆ ತಗ್ಗಿದೆ. ಸೋಮವಾರ ಬಿದ್ದ ಮಳೆಯ ಪರಿಣಾಮ ತುಂಗಾ ನದಿ ತುಂಬಿ ಹರಿಯುತ್ತಿದೆ. ತುಂಗಾ ನದಿಯಲ್ಲಿನ ಪುರಾಣ ಪ್ರಸಿದ್ಧ ರಾಮಮಂಟಪ ಮುಳುಗುವ ಹಂತದಲ್ಲಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಇದುವರೆಗೆ 745 ಮಿ.ಮೀ. ಮಳೆಯಾಗಿದೆ. ವಾಡಿಕೆ ಮಳೆ 385 ಮಿ.ಮೀ. ಆಗಿದ್ದು, ಹೆಚ್ಚುವರಿಯಾಗಿ 360 ಮಿ.ಮೀ. ಮಳೆಯಾದಂತಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.

ಕೊಚ್ಚಿ ಹೋದ ಬ್ಯಾರೇಜ್: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಬೇವಿನಕೊಪ್ಪ–ಸಂಗೊಳ್ಳಿ ಗ್ರಾಮಗಳ ನಡುವೆ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ಯಾರೇಜ್‌/ಸೇತುವೆ ಸೋಮವಾರ ರಾತ್ರಿ ಕೊಚ್ಚಿ ಹೋಗಿದ್ದು, ಎರಡೂ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮೂರು ದಿನಗಳಿಂದ ಭಾರೀ ಮಳೆಯಾಗಿದ್ದರಿಂದ ನದಿಯ ಒಳಹರಿವು ಹೆಚ್ಚಳವಾಗಿತ್ತು. ಆದರೆ ಬ್ಯಾರೇಜ್‌ ಗೇಟ್‌ ತೆಗೆದಿರಲಿಲ್ಲ. ನೀರಿನ ಒತ್ತಡಕ್ಕೆ ಸೇತುವೆ ಕೊಚ್ಚಿ ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಷಯ ತಿಳಿದು ಮಂಗಳವಾರ ಸ್ಥಳಕ್ಕೆ ಬಂದ ನೀರಾವರಿ ಇಲಾಖೆ ಸಿಬ್ಬಂದಿ, ಬ್ಯಾರೇಜ್‌ ಗೇಟ್‌ ತೆರೆದು ನೀರು ಹರಿದು ಹೋಗಲು ಅನುವು ಮಾಡಿದರು.

ಹಾವೇರಿ ಜಿಲ್ಲೆ ಗುತ್ತಲ ಸಮೀಪದ ಕಂಚಾರಗಟ್ಟಿ ಗ್ರಾಮದ ಹತ್ತಿರ ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತುಂಗಾ ಅಣೆಕಟ್ಟೆಯಿಂದ ನೀರನ್ನು ಹೊರಬಿಡುತ್ತಿರುವುದರಿಂದ ಮಂಗಳವಾರ ಬೆಳಿಗ್ಗೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಂಚಾರಗಟ್ಟಿ, ಹರಳಹಳ್ಳಿ, ಹಾವನೂರ, ಹಾಂವಶಿ, ಶಾಕಾರ, ಹುರಳಿಹಾಳ ಮತ್ತು ಗಳಗನಾಥ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.

(ಬೈಲಹೊಂಗಲ ತಾಲ್ಲೂಕಿನ ಬೇವಿನಕೊಪ್ಪ–ಸಂಗೊಳ್ಳಿ ಗ್ರಾಮಗಳ ನಡುವೆ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ರಿಡ್ಜ್‌/ಸೇತುವೆ ಕೊಚ್ಚಿ ಹೋಗಿರುವುದು)

24 ಗಂಟೆಯ ಅವಧಿಯಲ್ಲಿ ಆದ ಮಳೆ ಪ್ರಮಾಣ (ಮೀ.ಮಿ ನಲ್ಲಿ)

ಹುದಿಕೇರಿ ; 216

ತೀರ್ಥಹಳ್ಳಿ ; 213.8

ಶ್ರೀಮಂಗಲ ;179

ಶಾಂತಳ್ಳಿ ; 171

ನಾಪೋಕ್ಲು ;126

ಭಾಗಮಂಡಲ ;82.80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT