ಸಾವರ್ಕರ್–ಗೋಡ್ಸೆ ದೈಹಿಕ ಸಂಬಂಧದ ವಿವಾದ: ರಂಜಿತ್ ಸಾವರ್ಕರ್ ಆಸ್ಪತ್ರೆಗೆ!

ಮುಂಬೈ: ಹಿಂದುತ್ವ ಪ್ರತಿಪಾದಕ ವಿನಾಯಕ್ ದಾಮೋದರ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು ಆರೋಗ್ಯದಲ್ಲಿನ ಏರುಪೇರಿನಿಂದಾಗಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರಿಗೆ ತೀವ್ರ ರಕ್ತದೊತ್ತಡ ಉಂಟಾಗಿದ್ದು, ಅದಕ್ಕಾಗಿ ಮುಂಬೈ ಸಮೀಪದ ಮಹಿಮ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಸಾವರ್ಕರ್ ಮತ್ತು ನಾಥೂರಾಮ್ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿ ಪ್ರಕಟಿಸಿರುವ ಕೈಪಿಡಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ವಿಚಾರ ದೇಶಾದ್ಯಂತ ಚರ್ಚೆಗೀಡಾಗಿದೆ. ಇದೇ ಹಿನ್ನೆಲೆಯಲ್ಲಿ ರಂಜಿತ್ ಅವರಿಗೆ ಮಾನಸಿಕ ಒತ್ತಡ ಉಂಟಾಗಿ ರಕ್ತದೊತ್ತಡದಲ್ಲಿ ಏರುಪೇರಾಗಿದೆ ಎಂದು ಹೇಳಲಾಗಿದೆ.
‘ಸಾವರ್ಕರ್ ಅವರನ್ನು ಸಮರ್ಥಿಸಿಕೊಳ್ಳಲು ರಂಜಿತ್ ಅವರು ಟಿ.ವಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಮಾನಸಿಕ ಒತ್ತಡ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಅವರ ರಕ್ತದೊತ್ತಡ ಕಳೆದ ರಾತ್ರಿ 220 ಇತ್ತು. ಹೀಗಾಗಿ ಅವರು ಮಹಿಮ್‌ನ ರಹೇಜಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ,’ ಎಂದು ಮೂಲಗಳು ತಿಳಿಸಿವೆ.
ವೀರ ಸಾವರ್ಕರ್ ಎಷ್ಟು ವೀರ? : ಕಾಂಗ್ರೆಸ್ ಕೈಪಿಡಿ
‘ಹೌ ಬ್ರೇವ್ ವಾಸ್ ವೀರ್ ಸಾವರ್ಕರ್’ ಪುಸ್ತಕವನ್ನು ಭೋಪಾಲ್‌ನ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಅಖಿಲ ಭಾರತ ಕಾಂಗ್ರೆಸ್ ಸೇವಾದಳ ತರಬೇತಿ ಶಿಬಿರದಲ್ಲಿ ಹಂಚಲಾಗಿತ್ತು. ಅದರಲ್ಲಿ, ಸಾವರ್ಕರ್ ಮತ್ತು ನಾಥೂರಾಮ್ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತು ಎಂದು ಹೇಳಲಾಗಿದೆ.
ಕಾಂಗ್ರೆಸ್ ಕೈಪಿಡಿ ವಿರುದ್ಧ ಕೆಂಡಾಮಂಡಲವಾಗಿದ್ದ ರಂಜಿತ್ ಸಾವರ್ಕರ್, ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.