ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ಪ್ರಕರಣ ತನಿಖೆಗೆ ಎಸ್‌ಐಟಿ

Last Updated 9 ಡಿಸೆಂಬರ್ 2019, 19:29 IST
ಅಕ್ಷರ ಗಾತ್ರ

ಹೈದರಾಬಾದ್‌: ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ, ಸಜೀವ ದಹನ ಮಾಡಿದ್ದ ನಾಲ್ವರು ಆರೋಪಿಗಳ ಎನ್‌ಕೌಂಟರ್‌ ತನಿಖೆಗಾಗಿ ತೆಲಂಗಾಣ ಸರ್ಕಾರವು ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿದೆ.

‘ಆರೋಪಿಗಳ ಸಾವಿಗೆ ಕಾರಣವಾದ ಅಂಶಗಳು ಮತ್ತು ಸನ್ನಿವೇಶಗಳನ್ನು ನಿಖರವಾಗಿ ಪತ್ತೆಮಾಡಿ ಸತ್ಯವನ್ನು ಬಹಿರಂಗಗೊಳಿಸಬೇಕಾಗಿದೆ. ಇದಕ್ಕಾಗಿ ವಿಸ್ತೃತ ತನಿಖೆ ನಡೆಸುವುದು ಅಗತ್ಯ. ಆ ಉದ್ದೇಶದಿಂದ ರಚಕೊಂಡ ಪೊಲೀಸ್‌ ಆಯುಕ್ತ ಮಹೇಶ್‌ ಎಂ. ಭಾಗವತ್‌ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು ರಚಿಸಲಾಗಿದೆ. ಈ ತಂಡವು ಶೀಘ್ರದಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ಸರ್ಕಾರವು ಭಾನುವಾರ ಹೊರಡಿಸಿದ್ದ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನಿಖೆಗೆ ಆದೇಶಿಸಿದೆ. ಏಳು ಮಂದಿ ಸದಸ್ಯರ ತಂಡ ಈಗಾಗಲೇ ತನಿಖೆ ಆರಂಭಿಸಿದೆ.

ಪಿಐಎಲ್‌ ಬಗ್ಗೆ ಬುಧವಾರ ನಿರ್ಧಾರ: ಎನ್‌ಕೌಂಟರ್‌ ಘಟನೆ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಎತ್ತಿಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಬುಧವಾರ ತೀರ್ಮಾನಿಸಲಿದೆ.

ವಕೀಲರಾದ ಜಿ.ಎಸ್‌. ಮಣಿ ಮತ್ತು ಎಂ.ಎಲ್‌. ಶರ್ಮಾ ಎಂಬುವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಪಿಐಎಲ್‌ಗಳನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ಬುಧವಾರ ಈ ಕುರಿತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ.

ಹೈದರಾಬಾದ್‌ನಲ್ಲಿ ನಡೆದಿರುವುದು ನಕಲಿ ಎನ್‌ಕೌಂಟರ್‌. ಇದರಲ್ಲಿ ಭಾಗಿಯಾದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ವಕೀಲರು ಒತ್ತಾಯಿಸಿದ್ದರು.

‘ವಿಳಂಬವೂ ಅಪಾಯಕಾರಿ’

ನವದೆಹಲಿ: ‘ದಿಢೀರ್‌ ನ್ಯಾಯದಾನ ಸಾಧ್ಯವಿಲ್ಲ ಎಂಬುದು ನಿಜ. ಆದರೆ ನ್ಯಾಯದಾನದಲ್ಲಿ ಅತಿಯಾದ ವಿಳಂಬವಾದರೆ ಜನರು ತಾಳ್ಮೆ ಕಳೆದುಕೊಂಡು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ’ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

‘ದಿಢೀರ್‌ ನ್ಯಾಯದಾನದಿಂದ ನ್ಯಾಯವು ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅವರು ಹೇಳಿದ ಮರುದಿನವೇ ಉಪರಾಷ್ಟ್ರಪತಿ ಈ ಹೇಳಿಕೆ ನೀಡಿದ್ದಾರೆ.

‘ಪ್ರಜಾತಂತ್ರದ ಸ್ತಂಭಗಳು’ ವಿಷಯವನ್ನು ಕುರಿತು ವೀರೇಂದ್ರಭಾರತಿ ಸ್ಮಾರಕ ಉಪನ್ಯಾಸ ನೀಡಿದ ನಾಯ್ಡು, ‘ನ್ಯಾಯಾಂಗ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸಬೇಕಾದರೆ ನ್ಯಾಯಾಲಯದ ಕಲಾಪಗಳನ್ನು ಸ್ಥಳೀಯ ಭಾಷೆಯಲ್ಲಿ ನಡೆಸುವುದು ಅಗತ್ಯ’ ಎಂದರು.


ಜಗನ್‌ ಅಭಿನಂದನೆ

ಅಮರಾವತಿ (ಪಿಟಿಐ): ಅತ್ಯಾಚಾರದ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್‌ ಸಂತಸ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಅವರು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರನ್ನು ಅಭಿನಂದಿಸಿದ್ದಾರೆ.

ಮಹಿಳೆಯರ ಸುರಕ್ಷತೆಯ ಬಗ್ಗೆ ವಿಧಾನಸಭೆಯಲ್ಲಿ ಸೋಮವಾರ ಭಾವುಕರಾಗಿ ಮಾತನಾಡಿದ ಅವರು, ‘ವೈದ್ಯೆಯ ಮೇಲಿನ ಅತ್ಯಾಚಾರ ಘಟನೆ ನನಗೆ ತೀವ್ರ ಸಂಕಟ ತಂದಿದೆ. ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿ, ಇಂಥ ಘಟನೆಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ತಿಳಿಯದಾಗಿದೆ. ಆರೋಪಿಗಳಿಗೆ ಎಂಥ ಶಿಕ್ಷೆ ನೀಡಿದರೆ ಪಾಲಕರ ಮನಸ್ಸಿಗೆ ಶಾಂತಿ ಲಭಿಸಬಹುದು ಎಂಬ ಬಗ್ಗೆಯೂ ನಾವು ಯೋಚಿಸಬೇಕು. ಒಂದು ಘಟನೆ ನಡೆದಿದೆ, ಮಾಧ್ಯಮಗಳು ಅದನ್ನು ವರದಿ ಮಾಡಿವೆ. ತೆಲಂಗಾಣ ಸರ್ಕಾರ ಕ್ರಮ ಕೈಗೊಂಡಿದೆ. ತೆಲಂಗಾಣ ಪೊಲೀಸರಿಗೆ ಅಭಿನಂದನೆಗಳು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT