ಸೋಮವಾರ, ಜೂಲೈ 6, 2020
23 °C

ಲವ್‌ ಜಿಹಾದ್, ಭೂ ಜಿಹಾದ್‌ ಆತಂಕ: ಹಿಂದೂತ್ವವನ್ನು ಮುನ್ನೆಲೆಗೆ ತಂದ ವಿಎಚ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎರಡು ತಿಂಗಳಿನಿಂದ ಹಿನ್ನೆಲೆಗೆ ಸರಿದಿದ್ದ ಹಿಂದುತ್ವ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿರುವ ವಿಶ್ವಹಿಂದೂ ಪರಿಷತ್‌ (ವಿಎಚ್‌ಪಿ), ಹರಿಯಾಣದ ‘ಹಿಂದೂ ವಿರೋಧಿ ಪಿತೂರಿ’ ಹಾಗೂ ದೆಹಲಿಯ ‘ಭೂ ಜಿಹಾದ್‌’ ವಿಚಾರಗಳ ಬಗ್ಗೆ ಧ್ವನಿ ಎತ್ತಿದೆ.

‘ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ಕನಿಷ್ಠ ಆರು ರಾಜ್ಯಗಳಲ್ಲಿ ಹಿಂದೂಗಳು ಮತ್ತು ಅವರ ನಂಬಿಕೆಗಳು ಅಪಾಯದಲ್ಲಿವೆ’ ಎಂದು ವಿಎಚ್‌ಪಿ ಆರೋಪಿಸಿದೆ. ಆಯೋಧ್ಯೆಯಲ್ಲಿ ಲಭಿಸಿರುವ ಪುರಾತತ್ವ ದಾಖಲೆಗಳನ್ನು ಮುಂದಿಟ್ಟುಕೊಂಡು, ‘ಬಾಬರನ ಅನುಯಾಯಿಗಳ’ ಮೇಲೆ ವಾಗ್ದಾಳಿ ನಡೆಸಿದೆ. ಅಷ್ಟೇ ಅಲ್ಲ, ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿರುವ ‘ಪಾತಾಳ ಲೋಕ್‌’ ವೆಬ್‌ ಸರಣಿಯು ‘ಹಿಂದೂ ಫೋಬಿಯಾ’ದಿಂದ ಕೂಡಿದೆ ಎಂದು ಆಕ್ಷೇಪಿಸಿದೆ.

ವಿಶ್ವಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌ ಅವರ ನೇತೃತ್ವದಲ್ಲಿ ಹರಿಯಾಣದ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗ ಪ್ರತಿನಿಧಿಗಳನ್ನೊಳಗೊಂಡ ನಿಯೋಗವೊಂದು ಶನಿವಾರ ಮುಖ್ಯಮಂತ್ರಿ ಮನೋಹರಲಾಲ್‌  ಖಟ್ಟರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಹರಿಯಾಣದ ಮೆವಾತ್‌ನಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅಧ್ಯಯನ ನಡೆಸಲು ವಿಎಚ್‌ಪಿಯು ಕಳುಹಿಸಿದ್ದ ಉನ್ನತ ಮಟ್ಟದ ತನಿಖಾ ಸಮಿತಿಯು ನೀಡಿದ್ದ ವರದಿ ಹಾಗೂ ವರದಿಯಲ್ಲಿ ಸೂಚಿಸಿರುವ ಸಲಹೆಗಳ ಬಗ್ಗೆ ನಿಯೋಗವು ಮುಖ್ಯಮಂತ್ರಿಯ ಗಮನ ಸೆಳೆದಿದೆ.  ಹಿಂದೂಗಳಿಗೆ ವಿಶೇಷವಾಗಿ ದಲಿತರು ಮತ್ತು ಮಹಿಳೆಯರಿಗೆ ಮೆವಾತ್‌, ಮಸಣವಾಗಿ ಪರಿಣಮಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘103 ಗ್ರಾಮಗಳು ಸಂಪೂರ್ಣವಾಗಿ ಹಿಂದೂಗಳಿಂದ ಮುಕ್ತವಾಗಿವೆ. 82ಕ್ಕೂ ಹೆಚ್ಚು ಗ್ರಾಮಗಳಲ್ಲಿ ಐದಕ್ಕೂ ಕಡಿಮೆ ಹಿಂದೂ ಕುಟುಂಬಗಳಿವೆ’ ಎಂದಿರುವ ವಿಎಚ್‌ಪಿಯು, ಹರಿಯಾಣದಲ್ಲಿ ಹೆಚ್ಚುತ್ತಿರುವ ‘ಲವ್‌ ಜಿಹಾದ್‌’ ಹಾಗೂ ‘ಮತಾಂತರ’ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.

ಹರಿಯಾಣದಲ್ಲಿ ‘ಲವ್‌ ಜಿಹಾದ್‌’ ವಿಚಾರವನ್ನು ಎತ್ತಿದ್ದರೆ, ದೆಹಲಿಯಲ್ಲಿ ‘ಭೂ ಜಿಹಾದ್‌’ ಅನ್ನು ಮುಂದಿಟ್ಟುಕೊಂಡು ಲೆಫ್ಟಿನೆಂಟ್‌ ಗೌರ್ನರ್‌ ಅನಿಲ್‌ ಬೈಜಲ್‌ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದೆ.

‘ಡಿಡಿಎಗೆ ಸೇರಿದ ಇಂದ್ರಪ್ರಸ್ಥ ಪಾರ್ಕ್‌ನ ಪ್ರದೇಶವನ್ನು ದೆಹಲಿ ವಕ್ಫ್‌ ಬೋರ್ಡ್‌ ಒತ್ತುವರಿ ಮಾಡಿಕೊಂಡಿದೆ. ದೆಹಲಿಯ ಈ ಪ್ರತಿಷ್ಠಿತ ಪ್ರದೇಶವನ್ನು ಕೋವಿಡ್‌–19ರ ಸ್ಮಶಾನವಾಗಿಸಲು ಸಂಚು ರೂಪಿಸಲಾಗುತ್ತಿದೆ’ ಎಂದು ವಿಎಚ್‌ಪಿಯ ರಾಷ್ಟ್ರೀಯ ವಕ್ತಾರ ವಿನೋದ್‌ ಬನ್ಸಲ್‌ ಆರೋಪಿಸಿದ್ದಾರೆ.

ಬಿಹಾರದಲ್ಲಿ ಹಿಂದೂಗಳ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ವಿಎಚ್‌ಪಿಯು ಈ ಹಿಂದೆ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿತ್ತು. ಸೀತೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದೆ ಎಂದು ಒಡಿಶಾ ಸರ್ಕಾರಗಳ ವಿರುದ್ಧ ಹರಿಹಾಯ್ದಿತ್ತು. ತಮಿಳುನಾಡು ಸರ್ಕಾರವು ಹಿಂದೂ ದೇವಸ್ಥಾನಗಳಿಗೆ ಸೇರಿದ ಹಣವನ್ನು ಕಬಳಿಸುತ್ತಿದೆ ಎಂದು ಇತ್ತೀಚೆಗೆ ಆರೋಪಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು