ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ಕಿ ಕೌಶಲ್‌, ಆಯುಷ್ಮಾನ್‌ ಖುರಾನಾಗೆ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
Last Updated 24 ಡಿಸೆಂಬರ್ 2019, 2:16 IST
ಅಕ್ಷರ ಗಾತ್ರ

ನವದೆಹಲಿ:66ನೇ ಆವೃತ್ತಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೋಮವಾರ ಪ್ರದಾನ ಮಾಡಿದರು.

ತೆಲುಗು ಮತ್ತು ತಮಿಳಿನ ಹೆಸರಾಂತ ನಟಿ ಸಾವಿತ್ರಿ ಅವರ ಜೀವನವನ್ನು ಆಧರಿಸಿದ ‘ಮಹಾನಟಿ’ (ತೆಲುಗು) ಚಿತ್ರದ ಅಭಿನಯಕ್ಕಾಗಿ ಕೀರ್ತಿ ಸುರೇಶ್‌ ಅವರಿಗೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಭಾರತ– ಪಾಕ್‌ ಗಡಿಯಲ್ಲಿನ ಉರಿಯ ಮೇಲೆ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ನಡೆಸಿದ ನಿರ್ದಿಷ್ಟ ದಾಳಿಯ ನೈಜ ಘಟನೆಯನ್ನು ಆಧರಿಸಿದ ‘ಉರಿ– ದಿ ಸರ್ಜಿಕಲ್‌ ಸ್ಟ್ರೈಕ್‌’ ಹಿಂದಿ ಚಿತ್ರದಲ್ಲಿನ ಅಭಿನಯಕ್ಕೆ ವಿಕ್ಕಿ ಕೌಶಲ್‌ ಹಾಗೂಹಿಂದಿಯ ‘ಅಂಧಾಧುನ್‌’ ಚಿತ್ರದ ಅಭಿನಯಕ್ಕಾಗಿ ಆಯುಷ್ಮಾನ್‌ ಖುರಾನಾ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಯಿತು.ಕನ್ನಡಕ್ಕೆ11 ವಿಭಾಗಗಳಲ್ಲಿ ಪ್ರಶಸ್ತಿಗಳು ದೊರೆತಿವೆ.

‘ಈ ವರ್ಷದ ಚಲನಚಿತ್ರಗಳು ಭಾವನಾತ್ಮಕವಾಗಿ ಮೂಡಿಬಂದಿವೆ. ಸಂಪ್ರದಾಯಗಳಿಗೆ ಆಧುನಿಕ ಸ್ಪರ್ಶ ನೀಡುವ ಪ್ರಯತ್ನಗಳನ್ನೂ ಕೆಲವು ಚಿತ್ರಗಳಲ್ಲಿ ಕಾಣಬಹುದು’ ಎಂದು ನಾಯ್ಡು ಹೇಳಿದರು.

‘ಭಾರತೀಯ ಸಿನೆಮಾ ಪ್ರಬಲ ಮಾಧ್ಯಮವಾಗಿದೆ. ಇತರೆ ದೇಶಗಳಿಗೆ ಹೋದಾಗ ಇದರ ಪ್ರಭಾವ ಕಾಣಬಹುದು. ಒಂದು ದೇಶದ ಸಂಸ್ಕೃತಿ ಮತ್ತು ಕಲೆ ಆ ರಾಷ್ಟ್ರದ ಶಕ್ತಿಯಾಗಿದ್ದು, ಅದನ್ನು ನಾವು ಒಟ್ಟಾರೆಯಾಗಿ ಜಗತ್ತಿಗೆ ತೋರ್ಪಡಿಸುವ ಅಗತ್ಯವಿದೆ’ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.

‘ಉರಿ– ದಿ ಸರ್ಜಿಕಲ್‌ ಸ್ಟ್ರೈಕ್‌’ ಚಿತ್ರದ ನಿರ್ದೇಶಕ ಆದಿತ್ಯ ಧರ್‌ ಅವರಿಗೆ ಅತ್ಯುತ್ತಮ ನಿರ್ದೇಶಕ,ಮರಾಠಿಯ ‘ಚುಂಬಕ್‌’ ಚಿತ್ರದ ಅಭಿನಯಕ್ಕೆ ಸ್ವಾನಂದ್‌ ಕಿರ್ಕಿರೆ ಅವರು ಅತ್ಯುತ್ತಮ ಪೋಷಕ ನಟ,ಅಭಿಷೇಕ್‌ ಶಾ ನಿರ್ದೇಶನದ ಗುಜರಾತಿ ಭಾಷೆಯ ‘ಹೆಲಾರೊ’ ಅತ್ಯುತ್ತಮ ಚಿತ್ರ,ಅಮಿತ್‌ ಶರ್ಮಾ ನಿರ್ದೇಶನದ ಹಿಂದಿಯ ‘ಬಧಾಯಿ ಹೋ’ ಅತ್ಯುತ್ತಮ ಮನರಂಜನಾತ್ಮ ಚಿತ್ರ , ಇದೇ ಚಿತ್ರ ಅಭಿನಯಕ್ಕಾಗಿ ಸುರೇಖಾ ಸಿಕ್ರಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಮಾಜಿಕ ಕಳಕಳಿ ಬೀರುವ ಚಿತ್ರವಾಗಿ ಆರ್‌.ಬಾಲ್ಕಿ ನಿರ್ದೇಶನದ ಮತ್ತು ಸಹ ನಿರ್ಮಾಪಕರೂ ಆಗಿರುವ ನಟ ಅಕ್ಷಯ್‌ ಕುಮಾರ್‌ ಅವರ ಹಿಂದಿಯ ‘ಪ್ಯಾಡ್‌ಮನ್‌’, ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಅತ್ಯುತ್ತಮ ಚಿತ್ರವಾಗಿ ಆದಿನಾಥ ಕೊಠಾರೆ ನಿರ್ದೇಶನದ ಮರಾಠಿಯ ‘ಪಾನಿ’ ಚಿತ್ರಗಳು ಪ್ರಶಸ್ತಿ ಪಡೆದಿವೆ.ಹಿಂದಿಯ ‘ಪದ್ಮಾವತ್‌’ ಚಿತ್ರದ ಸಂಜಯ್‌ ಲೀಲಾ ಬನ್ಸಾಲಿ ಅವರಿಗೆ ಉತ್ತಮ ಸಂಗೀತ ನಿರ್ದೇಶಕ, ಅರಿಜಿತ್‌ ಸಿಂಗ್‌ಗೆ ಅತ್ಯುತ್ತಮ ಹಿನ್ನೆಲೆ ಗಾಯಕ, ಕೃತಿ ಮಹೇಶ್‌ ಮತ್ತು ಜ್ಯೋತಿ ತೋಮರ್‌ ಅವರಿಗೆ ಅತ್ಯುತ್ತಮ ನೃತ್ಯ ನಿರ್ದೇಶಕರ ಪ್ರಶಸ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT