ಸೋಮವಾರ, ಫೆಬ್ರವರಿ 24, 2020
19 °C

ನನಗೂ, ಸಿದ್ಧಾರ್ಥರಿಗೂ ಪರೋಕ್ಷ ಸಂಬಂಧವಿದೆ: ವಿಜಯ್‌ ಮಲ್ಯ ಟ್ವೀಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಫೆ ಕಾಫಿ ಡೇ ಹರಿಕಾರ ವಿ.ಜಿ.ಸಿದ್ಧಾರ್ಥ ಅವರ ವಿಷಯ ತಿಳಿಯುತ್ತಿದ್ದಂತೆ, ಅವರ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಮದ್ಯದ ದೊರೆ ವಿಜಯ್‌ ಮಲ್ಯ, ನಾವಿಬ್ಬರೂ ಒಂದೇ ದೋಣಿಯಲ್ಲಿನ ಪ್ರಯಾಣಿಕರು ಎನ್ನುವ ಭಾವಾರ್ಥದ ಮಾತುಗಳನ್ನಾಡಿದ್ದಾರೆ.

ಸಿದ್ಧಾರ್ಥ ಪ್ರಕರಣವನ್ನೇ ಗುರಿಯಾಗಿಸಿಕೊಂಡು ಮಲ್ಯ ಅವರು, ಈ ದೇಶದಲ್ಲಿನ ಸರ್ಕಾರಿ ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳ ಮೇಲೆ ಹರಿಹಾಯ್ದಿದ್ದಾರೆ. 

‘ಸಿದ್ಧಾರ್ಥ ಅವರು ತಮ್ಮ ‘ಕೆಫೆ ಕಾಫಿ ಡೇ’ಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿಗೆ ಬರೆದ ಪತ್ರವನ್ನು ಓದಿ, ನಾನು ಬೇಸರಗೊಂಡಿದ್ದೇನೆ. ಈ ಬ್ಯಾಂಕ್‌ಗಳು, ಸರ್ಕಾರಿ ಸಂಸ್ಥೆಗಳು ಯಾರನ್ನೇ ಆದರೂ ಜಿಗುಪ್ಸೆಗೊಳಿಸುತ್ತದೆ. ನನ್ನ ವಿಷಯವನ್ನೇ ನೋಡಿ, ಸಾಲ ಮರುಪಾವತಿ ಮಾಡುತ್ತೇನೆ ಎಂದರೂ ಏನೆಲ್ಲ ಮಾಡುತ್ತಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

 

ಮತ್ತೊಂದು ಟ್ವೀಟ್‌ನಲ್ಲಿ ವಿದೇಶಗಳಲ್ಲಿ ಅಲ್ಲಿನ ಸರ್ಕಾರ ಮತ್ತು ಬ್ಯಾಂಕ್‌​ಗಳು ಸಾಲಗಾರರು ಮಾಡಿದ ಸಾಲ ತೀರಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ ನನ್ನ ವಿಚಾರದಲ್ಲಿ ಇದು ತದ್ವಿರುದ್ಧವಾಗಿದೆ. ನಾನು ಸಾಲ ತೀರಿಸಲು ಮಾಡಿದ ಪ್ರತಿ ಪ್ರಯತ್ನದಲ್ಲೂ ಸರ್ಕಾರ ಮತ್ತು ಬ್ಯಾಂಕ್‌​ಗಳು ತಡೆಗೋಡೆಯಾಗಿವೆ ಎಂದು ಹೇಳಿದ್ದಾರೆ.

 

ಮೂರು ದಶಕಗಳಿಂದ ಭಾರತದ ಬಹುದೊಡ್ಡ ಮದ್ಯ ಕಂಪನಿಯನ್ನು ನಿರ್ವಹಿಸಿ ರಾಜ್ಯದ ಖಜಾನೆಗೆ ಸಾವಿರಕೋಟಿಯಷ್ಟು ಹಣ ಸಂಭಾವನೆ ನೀಡಿದ್ದೇನೆ. ಕಿಂಗ್ ಫಿಷರ್ ವಿಮಾನ ಸಂಸ್ಥೆ ಕೂಡಾ ಸಾಕಷ್ಟು ಹಣವನ್ನು ಸಂಭಾವನೆ ನೀಡಿದೆ. ಉತ್ತಮವಾಗಿದ್ದ ವಿಮಾನ ಸಂಸ್ಥೆ ನಷ್ಟವಾಯಿತು ಎಂದು ಈ ಹಿಂದೆ ಮಲ್ಯ ಟ್ವೀಟ್‌ ಮಾಡಿದ್ದರು. 

ವಿಮಾನ ಇಂಧನ ದರ ಏರಿಕೆಯಾಗಿರುವ ಕಾರಣ ವಿಮಾನ ಸಂಸ್ಥೆ ಆರ್ಥಿಕ ಮುಗ್ಗಟ್ಟು ಅನುಭವಿಸಿದೆ. ಕಚ್ಛಾ ತೈಲ ಬ್ಯಾರೆಲ್‍ಗೆ 140 ಡಾಲರ್‌ವರೆಗೆ ದರ ಏರಿಕೆ ಮಾಡಿದಾಗ, ಕಿಂಗ್ ಫಿಷರ್‌ಗೆ ಆರ್ಥಿಕ ಸಮಸ್ಯೆ ಕಂಡು ಬಂತು. ಸಾಲದ ಹೊರೆ ಹೆಚ್ಚಾಯಿತು. ಹಾಗಾಗಿ ಬ್ಯಾಂಕ್ ಸಾಲವೂ ಏರಿಕೆಯಾಗುತ್ತಾ ಬಂತು ಎಂದು ಟ್ವೀಟ್‌ನಲ್ಲಿ ವಿವರಿಸಿದ್ದರು.

 

ನಾನು ಸಾಲ ಪಡೆದಿರುವ ಮೊತ್ತವನ್ನು ಮರು ಪಾವತಿಸಲು ನಾನು ಸಿದ್ಧನಿದ್ದೇನೆ. ಬ್ಯಾಂಕ್ ಮತ್ತು ಸರ್ಕಾರ ಅದನ್ನು ದಯಮಾಡಿ ಸ್ವೀಕರಿಸಬೇಕು ಎಂದು ನಾನು ವಿನಂತಿಸುತ್ತೇನೆ. ಅದನ್ನು ಸ್ವೀಕರಿಸಲು ಸಿದ್ಧವಿಲ್ಲದಿದ್ದರೆ ಕಾರಣವೇನು?. ಬ್ಯಾಂಕ್‍ಗೆ ಸಾಲ ಮರುಪಾವತಿ ಮಾಡದೆ ಪರಾರಿಯಾದವ ಎಂದು ರಾಜಕಾರಣಿಗಳೂ, ಮಾಧ್ಯಮದವರೂ ಬಿಂಬಿಸುತ್ತಿದ್ದಾರೆ. ಇದೆಲ್ಲವೂ ಸುಳ್ಳು. ನಾನು ಹಣ ಪಾವತಿ ಮಾಡುತ್ತೇನೆ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಹೇಳಿದ್ದೆ, ಅದು ಯಾಕೆ ಯಾರಿಗೂ ಕೇಳಿಸುವುದಿಲ್ಲ? ಎಂದು ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದರು.

 

ಸಾಲ ಮರುಪಾವತಿ ಮಾಡದೇ ಇರುವ ಮಲ್ಯ ವಿರುದ್ಧ 2016ರಲ್ಲಿ ಬ್ಯಾಂಕ್‍ಗಳು ಕ್ರಮ ತೆಗೆದುಕೊಳ್ಳಲು ಮುಂದಾದ ವೇಳೆ ಮಲ್ಯ ದೇಶ ಬಿಟ್ಟು ಪರಾರಿಯಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು