ಗುರುವಾರ , ಏಪ್ರಿಲ್ 9, 2020
19 °C

ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಉಪದೇಶ ನೀಡಿದ ಶಾಲಾ ಪ್ರಾಂಶುಪಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Video grab

ಮೌ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಾಲೆಯೊಂದರ ಪ್ರಾಂಶುಪಾಲರಾದ ಪ್ರವೀಣ್ ಮಾಲ್, ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮೌ ಜಿಲ್ಲೆಯಲ್ಲಿರುವ ಹರಿವಂಶ್ ಮೆಮೊರಿಯಲ್ ಇಂಟರ್ ಕಾಲೇಜ್‌ನ ಮ್ಯಾನೇಜರ್ ಮತ್ತು ಪ್ರಾಂಶುಪಾಲರಾಗಿದ್ದಾರೆ ಪ್ರವೀಣ್ ಮಾಲ್. ಉತ್ತರ ಪ್ರದೇಶ ಸೆಕೆಂಡರಿ ಎಜ್ಯುಕೇಷನ್ ಬೋರ್ಡ್ (ಯುಪಿಎಸ್‌ಇಬಿ) ಪರೀಕ್ಷೆ ಮಂಗಳವಾರ ಆರಂಭವಾಗಿದ್ದು, ಪರೀಕ್ಷೆಗೆ ಮುನ್ನ ಈ ರೀತಿ ಉಪದೇಶ ನೀಡಲಾಗಿದೆ.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರವೀಣ್, ಪರೀಕ್ಷೆಯಲ್ಲಿ ಯಾವ ರೀತಿ ನಕಲು ಹೊಡೆಯಬೇಕು ಮತ್ತು ನಕಲು ಹೊಡೆಯದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ನನ್ನ ವಿದ್ಯಾರ್ಥಿಗಳು ಯಾರೂ ಫೇಲಾಗುವುದಿಲ್ಲ. ಯಾರೂ ಭಯ ಪಡಬೇಡಿ. ನೀವು  ಪರಸ್ಪರ ಮಾತನಾಡಿಕೊಂಡು ಪರೀಕ್ಷೆ ಬರೆಯಿರಿ. ನೀವು ಪರೀಕ್ಷೆ ಬರೆಯಲಿರುವ ಸರ್ಕಾರಿ ಶಾಲೆಯ ಶಿಕ್ಷಕರು ನನ್ನ ಗೆಳೆಯರು. ನಕಲು ಹೊಡೆಯುವಾಗ ನೀವು ಸಿಕ್ಕಿಹಾಕಿಕೊಂಡರೆ ಅಥವಾ ಯಾರಾದರೂ ನಿಮ್ಮ ಕೆನ್ನೆಗೆರಡು ಬಾರಿಸಿದರೆ ಸುಮ್ಮನಿದ್ದು ಬಿಡಿ.

ಯಾವುದೇ  ಪ್ರಶ್ನೆಗೆ ಉತ್ತರ ಬರೆಯದೇ ಇರಬೇಡಿ. ನಿಮ್ಮ ಉತ್ತರ ಪತ್ರಿಕೆಯಲ್ಲಿ ₹100 ಒಂದು ನೋಟು ಇಟ್ಟು  ಬಿಡಿ. ಶಿಕ್ಷಕರು ನಿಮಗೆ ಕಣ್ಮುಚ್ಚಿ ಅಂಕ ನೀಡುತ್ತಾರೆ. ನಾಲ್ಕು ಅಂಕದ ಪ್ರಶ್ನೆಗೆ ನೀವು ತಪ್ಪು ಉತ್ತರ ಬರೆದಿದ್ದರೂ ಅವರು ನಿಮಗೆ 3 ಅಂಕ ನೀಡುತ್ತಾರೆ ಎಂದು ಹೇಳಿದ ಪ್ರವೀಣ್, ಜೈ ಹಿಂದ್ ಜೈ ಭಾರತ್ ಎಂದು ಹೇಳುವ ಮೂಲಕ ಮಾತು ಮುಗಿಸುತ್ತಾರೆ.

 ಪ್ರವೀಣ್ ಮಾತನಾಡುತ್ತಿರುವುದನ್ನು ವಿದ್ಯಾರ್ಥಿಗಳೇ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು.

ಪ್ರವೀಣ್ ಬಂಧನ: ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಲಹೆ ನೀಡಿದ  ಪ್ರಾಂಶುಪಾಲರದ್ದು ಬಂಧಿಸಲಾಗಿದೆ ಎಂದು ಮೌ ಜಿಲ್ಲಾ ಮೆಜಿಸ್ಟ್ರೇಟ್ ಗ್ಯಾನ್ ಪ್ರಕಾಶ್ ತ್ರಿಪಾಠಿ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು