ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ ದುರಂತ: ಪ್ರಜ್ಞೆ ತಪ್ಪಿದ್ದ ಜನರನ್ನು ಕಾಪಾಡಲು ಮನೆಗಳ ಬಾಗಿಲು ಒಡೆಯಬೇಕಾಯಿತು

ವಿಶಾಖಪಟ್ಟಣ ಅನಿಲ ದುರಂತ
Last Updated 7 ಮೇ 2020, 11:07 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ವಿಷಾನಿಲ ಸೋರಿಕೆ ವಿಷಯ ತಿಳಿದ ಭದ್ರತಾ ಸಿಬ್ಬಂದಿ ಎಲ್‌ಜಿ ಪಾಲಿಮರ್ಸ್‌ ಕಾರ್ಖಾನೆಯ ಸುತ್ತಮುತ್ತಲಿನ ಹಳ್ಳಿಗಳಿಗೆ ಧಾವಿಸಿದಾಗ ಮನೆಗಳ ಬಾಗಿಲು ತೆಗೆಯಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಬಹುತೇಕರು ಪ್ರಜ್ಞೆ ತಪ್ಪಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

‘ಜನರ ಜೀವ ಕಾಪಾಡಲು ಭದ್ರತಾ ಸಿಬ್ಬಂದಿ ಹಲವು ಮನೆಗಳ ಬಾಗಿಲು ಒಡೆದು ಒಳ ಪ್ರವೇಶಿಸಬೇಕಾಯಿತು. ಸತ್ತ 9 ಮಂದಿಯ ಪೈಕಿ ಇಬ್ಬರು ಅರೆಪ್ರಜ್ಞಾವಸ್ಥೆಯಲ್ಲಿ ಬಾವಿಗೆ ಬಿದ್ದವರಿದ್ದಾರೆ’ ಎಂಬ ಆಂಧ್ರ ಪ್ರದೇಶದ ಡಿಜಿಪಿ ಗೌತಮ್ ಸಾವಂಗ್‌ ಅವರ ಹೇಳಿಕೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿವೆ.

ಮಧ್ಯರಾತ್ರಿ 2.30ರ ಹೊತ್ತಿಗೆ ಕಾರ್ಖಾನೆಯಿಂದ ಅನಿಲ ಸೋರುತ್ತಿರುವ ಸಂಗತಿ ಬೆಳಕಿಗೆ ಬಂತು. ಘಟಕದ ಸುತ್ತಲಿನ ಹಳ್ಳಿಗಳಿಗೆ ಧಾವಿಸಿದ ರಕ್ಷಣಾ ಸಿಬ್ಬಂದಿಯ ಕಣ್ಣಿಗೆ ಬೀದಿಬೀದಿಗಳಲ್ಲಿ ಪ್ರಜ್ಞೆ ತಪ್ಪಿದ ಜನರು ಕಾಣಸಿಕ್ಕರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸುತ್ತಮುತ್ತಲ ಗ್ರಾಮಸ್ಥರು ನಸುಕಿನ 3.30ಕ್ಕೆ ಮಾಹಿತಿ ನೀಡಿದರು. ಪೊಲೀಸ್‌ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದರಾದರೂ, ಅಲ್ಲಿನ ದೃಶ್ಯ ಕಂಡು ಹಿಮ್ಮೆಟ್ಟಿದರು. ಗಾಳಿಯಲ್ಲಿ ವಿಷಾನಿಲ ಇರುವುದು ನಮ್ಮ ಅನುಭವಕ್ಕೂ ಬಂತು. ಹೆಚ್ಚು ಹೊತ್ತು ಅಲ್ಲಿರಲುನಮಗೂ ಸಾಧ್ಯವಾಗಲಿಲ್ಲ ಎಂದು ಅವರು ಮಾಹಿತಿ ನೀಡಿದರು.

ಅನಿಲ ದುರಂತದ ನಂತರ ಎಚ್ಚೆತ್ತುಕೊಂಡಿರುವ ಆಂಧ್ರ ಸರ್ಕಾರ ಲಾಕ್‌ಡೌನ್‌ ನಂತರ ಕಾರ್ಖಾನೆಗಳನ್ನು ಆರಂಭಿಸುವವರಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

‘ನಿಲುಗಡೆಯಾಗಿದ್ದ ಘಟಕಕ್ಕೆ ಚಾಲನೆ ನೀಡುವಾಗ ದುರಂತ ಸಂಭವಿಸಿದೆ. ಕಾರ್ಖಾನೆ ಸಿಬ್ಬಂದಿ ಹಗಲುಹೊತ್ತು ಕೆಲಸ ಮಾಡಿದ್ದರೆ ಜನರು ಹೆಚ್ಚು ಜಾಗರೂಕರಾಗಿರುತ್ತಿದ್ದರು. ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದರು’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಕಾರ್ಯದರ್ಶಿ ಪಿ. ರಮೇಶ್‌ ಹೇಳಿದ್ದಾರೆ.

ಸೋರಿಕೆಯಾದ ಅನಿಲ ಉಸಿರಾಡಿದರೆ ವಾಂತಿ, ತಲೆಸುತ್ತು ಬರುತ್ತದೆ.ಸಂತ್ರಸ್ತರಿಗೆ ಸಾಧ್ಯವಾದಷ್ಟೂ ಬೇಗ ಚಿಕಿತ್ಸೆ ದೊರಕಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಲ್‌ಜಿ ಕೆಮಿಕಲ್ಸ್‌ ಹೇಳಿದೆ.

ಲಾಕ್‌ಡೌನ್‌ನಿಂದಾಗಿ ಘಟಕದಲ್ಲಿ ಉತ್ಪಾದನೆ ಸ್ಥಗಿತಗೊಂಡಿತ್ತು. ಅನಿಲವನ್ನು ಟ್ಯಾಂಕ್‌ನಲ್ಲಿ ಹಾಗೆಯೇ ಉಳಿಸಲಾಗಿತ್ತು. ರಾಸಾಯನಿಕ ಪ್ರಕ್ರಿಯೆಯಿಂದಾಗಿ ಬಿಸಿ ಹೆಚ್ಚಾಗಿ ಅನಿಲ ಸೋರಿಕೆಯಾಗಿರಬಹುದು ಎಂದು ಸಹಾಯಕ ಪೊಲೀಸ್ ಆಯುಕ್ತೆ ಸ್ವರೂಪ್ ರಾಣಿ ಅವರ ಹೇಳಿಕೆಯಲ್ಲಿ ಎಎಫ್‌ಪಿ ಸುದ್ದಿಸಂಸ್ಥೆ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT