ಸೋಮವಾರ, ಜೂಲೈ 6, 2020
27 °C

ವೈಝಾಗ್‌ ಅನಿಲ ದುರಂತ: FIRನಲ್ಲಿ ಏನಿದೆ?

ಏಜೇನ್ಸಿಸ್‌ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (ವೈಝಾಗ್‌) ಎಲ್‌ಜಿ ಪಾಲಿಮರ್ಸ್‌ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿ 11 ಜನ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು ಕಾರ್ಖಾನೆ ಸಿಬ್ಬಂದಿಯ ಯಾರೊಬ್ಬರ ಹೆಸರೂ ಉಲ್ಲೇಖವಾಗಿಲ್ಲ.

ಗ್ಯಾಸ್‌ ಸೋರಿಕೆ ಸಂಬಂಧ ಆಂಧ್ರಪ್ರದೇಶ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿದೆ. ಇಲ್ಲಿನ ಗೋಪಾಲಪಟ್ಟಣ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ..

ಇದನ್ನೂ ಓದಿ: ವಿಶಾಖಪಟ್ಟಣ ಅನಿಲ ದುರಂತ: ಸೋರಿಕೆಯಾದ ಸ್ಟೈರೀನ್‌ ಬಗ್ಗೆ ಇಲ್ಲಿದೆ ಮಾಹಿತಿ

ಪೊಲೀಸ್‌ ದಾಖಲೆಗಳ ಪ್ರಕಾರ ಅನಿಲ ಸೋರಿಕೆಯಾಗಿ 5 ಗಂಟೆಗಳ ನಂತರ ದೂರು ದಾಖಲಾಗಿದೆ. ಅಂದು 7 ಗಂಟೆಗೆ ಎಫ್‌ಐಆರ್‌ ದಾಖಲಾಗಿದ್ದು ಅದರಲ್ಲಿ ‘ಕಾಖಾರ್ನೆಯಿಂದ ಸ್ವಲ್ಪ ಹೊಗೆ ಬಂತು, ಅದು ಕೆಟ್ಟ ವಾಸನೆಯಿಂದ ಕೂಡಿತ್ತು. ಆ ಹೊಗೆ ಜೀವಕ್ಕೆ ಹಾನಿಕಾರಕ ಎಂದು ಬರೆಯಲಾಗಿದೆ. ಬೆಳಗ್ಗೆ 3.30ರ ಸುಮಾರಿಗೆ ಕಾರ್ಖಾನೆಯಿಂದ ಅನಿಲ ಸೋರಿಕೆಯಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ತೊಂದರೆಯಾಯಿತು. ಕೆಟ್ಟ ವಾಸನೆಯಿಂದಾಗಿ ಜನರು ಮನೆಯಿಂದ ಹೊರಗೆ ಬಂದರು. 

ಪ್ರಜ್ಞೆ ತಪ್ಪಿದ್ದ ಹಾಗೂ ನಿತ್ರಾಣಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ 5 ಜನ ಸಾವನ್ನಪ್ಪಿದ್ದಾರೆ ಎಂದು 7 ಗಂಟೆ ಸುಮಾರಿಗೆ ದಾಖಲಾದ ಎಫ್‌ಐಆರ್‌ನಲ್ಲಿ ಬರೆಯಲಾಗಿದೆ. ಆದರೆ ಆ ಸಮಯಕ್ಕೆ 10 ಜನ ಮೃತಪಟ್ಟಿರುವುದು ದೃಢಪಟ್ಟಿತ್ತು.

ಬೆಳಗ್ಗೆ 7 ಗಂಟೆ ಸುಮಾರಿಗೆ  ಸ್ಟೈರೀನ್‌ ಗ್ಯಾಸ್‌ ಸೋರಿಕೆಯಾಗಿದೆ ಎಂಬುದನ್ನು ಪೊಲೀಸರೇ ದೃಢಪಡಿಸಿದ್ದರೂ ಆ ವೇಳೆ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿರಲಿಲ್ಲ. ಹಾಗೇ ಅನಿಲ ಸೋರಿಕೆ ಕಂಪನಿಯ ಹೆಸರನ್ನು ನಮೂದಿಸಿರಲಿಲ್ಲ. ಒಟ್ಟು 6 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸೆಕ್ಷನ್‌‌ 278 (ಆರೋಗ್ಯಕ್ಕೆ ಪೂರಕವಾಗಿರುವ ವಾತಾವರಣ ವಿಷಪೂರಿತ ಗೊಳಿಸುವುದು), ಸೆಕ್ಷನ್‌ 284 (ವಿಷಕಾರಿ ವಸ್ತುಗಳನ್ನು ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ), 285 ಸೆಕ್ಷನ್‌ (ರಾಸಾಯನಿಕಗಳ ಮೂಲಕ ಜೀವಕ್ಕೆ ಕುತ್ತು ತರುವುದು), ಸೆಕ್ಷನ್‌ 337 (ಇತರರ ಜೀವ ಹಾನಿ ಹಾಗೂ ವೈಯಕ್ತಿಕ ಸುರಕ್ಷತೆಗೆ ಧಕ್ಕೆ ತರುವುದು) ಸೆಕ್ಷನ್‌ 304–4( ಸಾವು ಸಂಭವಿಸುತ್ತದೆ ಎಂದು ತಿಳಿದಿದ್ದರೂ ನಿರ್ಲಕ್ಷ್ಯ)ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಇದನ್ನೂ ಓದಿ: ವಿಶಾಖಪಟ್ಟಣ ಅನಿಲ ದುರಂತ |11 ಮಂದಿ ಸಾವು, ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ

ಘಟನೆ ಸಂಭವಿಸಿದಾಗ ಕಾರ್ಖಾನೆಯಲ್ಲಿ 24 ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಕೆಲವರು ಎಂಜಿನಿಯರ್‌ಗಳು ಇದ್ದರು. ಆದರೆ ಅವರಿಗೆ ಪರಿಸ್ಥಿತಿ ನಿಭಾಯಿಸುವ ಅನುಭವ ಇರಲಿಲ್ಲ ಎಂದು ಕಾರ್ಖಾನೆಯ ಮುಖ್ಯ ಇನ್ಸ್‌ಪೆಕ್ಟರ್‌ ಶಿವಶಂಕರ್‌ ರೆಡ್ಡಿ ಹೇಳಿದ್ದಾರೆ.  ಹಾಗೇ ಲಾಕ್‌ಡೌನ್‌ ಬಳಿಕ ಕಾರ್ಖಾನೆಯನ್ನು ಮತ್ತೆ ಸುರಕ್ಷಿತವಾಗಿ ತೆರೆಯಲಾಗುವುದು ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ನ್ಯೂಸ್‌ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

ಘಟನೆ ಸಂಬಂಧ ಎಫ್‌ಐಆರ್‌ನಲ್ಲಿ ಕಾರ್ಖಾನೆ ಸಿಬ್ಬಂದಿ ಪೈಕಿ ಯಾರು ಹೆಸರನ್ನು ಉಲ್ಲೇಖ ಮಾಡಿಲ್ಲ ಎಂದು ವಿಶಾಖಪಟ್ಟಣ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಮೀನಾ ಅವರನ್ನು ಕೇಳಿದಾಗ, ಕಾರ್ಖಾನೆಯಲ್ಲಿ ಕೆಲಸ ನಡೆಯುತ್ತಿರುವ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಅಲ್ಲಿ ಇದ್ದವರು ಈ ದುರಂತಕ್ಕೆ ಜವಾಬ್ದಾರರು. ಅಲ್ಲಿ ಯಾರು ಯಾವ ಕೆಲಸ ಮಾಡುತ್ತಿದ್ದರು ಎಂಬುದನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆ ಪತ್ತೆ ಹಚ್ಚಲಿದೆ. ಈಗಾಗಲೇ ಕಂಪನಿ ಮುಖ್ಯಸ್ಥರು ಹಾಗೂ ಕಾರ್ಖಾನೆಯ ತಾಂತ್ರಿಕ ಸಲಹೆಗಾರರಿಗೂ ಇ–ಮೇಲ್‌ ಮಾಡಲಾಗಿದೆ ಎಂದು ರಾಜೀವ್‌ ಕುಮಾರ್‌ ಮೀನಾ ಪ್ರತಿಕ್ರಿಯೆ ನೀಡಿದ್ದಾರೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು