ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್ ಗೂಢಚರ್ಯೆ: ಕೇಂದ್ರ ನಿರಾಕರಣೆ

Last Updated 20 ನವೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆಪೆಗಾಸಸ್ ಕುತಂತ್ರಾಂಶ ಬಳಸಿಕೊಂಡು ವಾಟ್ಸ್‌ಆ್ಯಪ್ ಮೂಲಕ ಗೂಢಚರ್ಯೆ ಮಾಡಲಾಗಿದೆ ಎಂಬ ಆರೋಪಗಳನ್ನು ಕೇಂದ್ರ ಸರ್ಕಾರ ಬುಧವಾರ ನಿರಾಕರಿಸಿದೆ.

ಲೋಕಸಭೆಗೆ ಲಿಖಿತ ಉತ್ತರ ನೀಡಿದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ‘ದೇಶದ ನಾಗರಿಕರ ಮೂಲಭೂತ ಹಕ್ಕುಗಳು ಹಾಗೂ ಅವರ ಖಾಸಗಿತನ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಹ್ಯಾಕಿಂಗ್ ಮತ್ತು ಗೂಢಚರ್ಯೆ ವಿಷಯಗಳನ್ನು ಸಮರ್ಥವಾಗಿ ನಿರ್ವಹಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರಲ್ಲಿ ಸಾಕಷ್ಟು ಅವಕಾಶಗಳಿವೆ’ ಎಂದುಅವರು ಹೇಳಿದ್ದಾರೆ.

ಗೂಢಚರ್ಯೆ ಕುರಿತು ಸಮಗ್ರ ವರದಿ ನೀಡುವಂತೆ ಕೇಂದ್ರ ಸರ್ಕಾರ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ವಾಟ್ಸ್‌ಆ್ಯಪ್‌, ಈ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ಬಳಕೆದಾರರ ಮಾಹಿತಿ ಸಂರಕ್ಷಣೆಗೆ ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮತ್ತೆ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಸಂಸ್ಥೆ ಭರವಸೆ ನೀಡಿದೆ.

ಭಾರತದ ನೂರಕ್ಕೂ ಹೆಚ್ಚು ವಾಟ್ಸ್‌ಆ್ಯಪ್ ಬಳಕೆದಾರರು ಪೆಗಾಸಸ್‌ ಕುತಂತ್ರಾಂಶಕ್ಕೆ ಗುರಿಯಾಗಿದ್ದಾರೆ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಭಾರತದ ಸಿಇಆರ್‌ಟಿ–ಇನ್‌ ಸಂಸ್ಥೆಗೆ ವಾಟ್ಸ್‌ಆ್ಯಪ್ ಮಾಹಿತಿ ನೀಡಿತ್ತು.

ಮತ್ತೆ ಸೈಬರ್ ಅಪಾಯದಲ್ಲಿ ವಾಟ್ಸ್‌ಆ್ಯಪ್‌: ಎಚ್ಚರಿಕೆ

ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್ ಬಳಕೆದಾರರ ಖಾಸಗಿ ಮಾಹಿತಿಯು ಮತ್ತೊಮ್ಮೆ ಸೈಬರ್ ದಾಳಿಗೆ ಗುರಿಯಾಗುವ ಅಪಾಯವಿದೆ ಎಂದು ಸೈಬರ್ ಭದ್ರತಾ ಏಜನ್ಸಿ ಎಚ್ಚರಿಕೆ ನೀಡಿದೆ.

ಮೊಬೈಲ್ ಬಳಕೆದಾರರ ಅನುಮತಿ ಪಡೆಯದೆಯೇ ಕೃತಕ ಎಂಪಿ4 ಫೈಲ್ ಮೂಲಕ ಆಗಂತುಕರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ‘ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್–ಇಂಡಿಯಾ’ (ಸಿಇಆರ್‌ಟಿ–ಇನ್) ಮಾಹಿತಿ ನೀಡಿದೆ.

ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶವು ಭಾರತದ ನೂರಾರು ವಾಟ್ಸ್‌ಆ್ಯಪ್ ಬಳಕೆದಾರರನ್ನು ಗುರಿಯಾಗಿಸಿದೆ ಎಂದು ಸಂಸ್ಥೆಯು ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ ಬಳಿಕ ಸಿಇಆರ್‌ಟಿ ಕೆಲ ಸಲಹೆಗಳನ್ನು ನೀಡಿದೆ.

‘ಸೈಬರ್ ಅಪಾಯಗಳಿಗೆ ವಾಟ್ಸ್‌ಆ್ಯಪ್‌ ಗುರಿಯಾಗುವ ಸಾಧ್ಯತೆ ಬಗ್ಗೆ ವರದಿಯಾಗಿದ್ದು, ದೂರದಲ್ಲೆಲ್ಲೋ ಕುಳಿತಿರುವ ದಾಳಿಕೋರರು ಅನಿರ್ಬಂಧಿತವಾಗಿ ಸಂಕೇತಗಳನ್ನು ಪ್ರಯೋಗಿಸಿ, ವ್ಯವಸ್ಥೆ ಮೇಲೆ ದಾಳಿ ಮಾಡಬಹುದು’ ಎಂದು ತಿಳಿಸಿದೆ.

ಸಿಇಆರ್‌ಟಿಯು ಹ್ಯಾಕಿಂಗ್‌, ಫಿಶಿಂಗ್‌ ವಿರುದ್ಧ ಹೋರಾಡುವ ನೋಡಲ್ ಏಜೆನ್ಸಿಯಾಗಿದ್ದು,ಭಾರತದ ಅಂತರ್ಜಾಲ ಡೊಮೈನ್‌ನ ಭದ್ರತಾ ಸಂಬಂಧಿ ವಿಷಯಗಳ ಮೇಲೆ ನಿಗಾ ಇರಿಸುವ ಕೆಲಸ ಮಾಡುತ್ತದೆ.

ಆ್ಯಂಡ್ರಾಯ್ಡ್ ವಾಟ್ಸ್‌ಆ್ಯಪ್2.19.274, ಐಒಎಸ್ ವಾಟ್ಸ್‌ಆ್ಯಪ್ 2.19.100,ವಾಟ್ಸ್‌ಆ್ಯಪ್ ಎಂಟರ್‌ಪ್ರೈಸಸ್ ಕ್ಲೈಂಟ್ 2.25.3, ವಿಂಡೋಸ್ ಫೋನ್‌ ವಾಟ್ಸ್‌ಆ್ಯಪ್ 2.18.368, ಆ್ಯಂಡ್ರಾಯ್ಡ್ ಫೋನ್‌ ವಾಟ್ಸ್‌ಆ್ಯಪ್ ಬಿಸಿನೆಸ್ 2.19.104 ಮತ್ತು ಐಒಎಸ್‌ ವಾಟ್ಸ್‌ಆ್ಯಪ್ ಬಿಸಿನೆಸ್ 2.19.100 – ಈ ಸಾಫ್ಟ್‌ವೇರ್‌ಗಳು ಸಮಸ್ಯೆಯಿಂದ ಬಾಧಿತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT