ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲ: ಪ್ರಧಾನಿ ಮೋದಿ ಸ್ಪಷ್ಟನೆ

'ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ನಿರ್ಧಾರ ಅಚಲ'
Last Updated 16 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಲಖನೌ:‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದಂತೆ ಕೈಗೊಂಡಿರುವ ನಿರ್ಧಾರಕ್ಕೆ ಬದ್ಧರಾಗಿದ್ದು, ಯಾವುದೇ ಕಾರಣಕ್ಕೂ ಮರುಪರಿಶೀಲಿಸುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.

ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಂದೌಳಿಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ದೇಶದ ಹಿತಾಸಕ್ತಿ ದೃಷ್ಟಿಯಿಂದಲೇ ಈ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಎಂತಹ ಒತ್ತಡಗಳಿಗೂ ಮಣಿಯುವುದಿಲ್ಲ’ ಎಂದು ಖಚಿತವಾದ ದನಿಯಲ್ಲಿ ಹೇಳಿದರು.

’ಇಡೀ ದೇಶ ಇಂತಹ ನಿರ್ಧಾರಗಳಿಗಾಗಿ ಹಲವು ವರ್ಷಗಳಿಂದ ಕಾಯುತ್ತಿತ್ತು. ಅಂತರರಾಷ್ಟ್ರೀಯ ಒತ್ತಡಗಳ ಮಧ್ಯೆಯೂ ನಾವು ಈ ವಿಷಯಗಳಲ್ಲಿ ದೃಢವಾದ ಹೆಜ್ಜೆಯನ್ನಿಟ್ಟಿದ್ದು, ಬದಲಾವಣೆ ಸಾಧ್ಯವೇ ಇಲ್ಲ’ ಎಂದರು.

ಸಿಎಎ ವಿರೋಧಿಸಿ ದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಹೇಳಿಕೆ ಮಹತ್ವ ಪಡೆದಿದೆ.

ಅಯೋಧ್ಯೆ ವಿಷಯ ಪ್ರಸ್ತಾಪಿಸಿದ ಅವರು, ‘ಭವ್ಯವಾದ ರಾಮಮಂದಿರವನ್ನು ನಿರ್ಮಿಸಲು ಟ್ರಸ್ಟ್‌ ರಚಿಸಲಾಗಿದೆ. ನಿರ್ಮಾಣ ಕಾರ್ಯವನ್ನು ಈ ಟ್ರಸ್ಟ್‌ ತ್ವರಿತಗತಿಯಲ್ಲಿ ಕೈಗೊಳ್ಳಲಿದೆ’ ಎಂದರು.

ಚಾಲನೆ: ಸಾರ್ವಜನಿಕ ಸಭೆಗೂ ಮುನ್ನ ಪ್ರಧಾನಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.

₹1254 ಕೋಟಿ ಮೊತ್ತದ 50 ಯೋಜನೆಗಳಿಗೆ ಚಾಲನೆ ನೀಡಿದ ಅವರು, ಐಆರ್‌ಸಿಟಿಸಿಯ ‘ಮಹಾ ಕಾಲ್ ಎಕ್ಸ್‌ಪ್ರೆಸ್‌’ ರೈಲಿಗೆ ವಿಡಿಯೊ ಲಿಂಕ್‌ ಮೂಲಕ ಹಸಿರು ನಿಶಾನೆ ತೋರಿದರು. ಇದು ದೇಶದಲ್ಲೇ ಮೊದಲ ಖಾಸಗಿ ರೈಲು ಆಗಿದ್ದು, ಮೂರು ಯಾತ್ರಾ ಸ್ಥಳಗಳಾದ ವಾರಾಣಸಿ ಹಾಗೂ ಮಧ್ಯ ಪ್ರದೇಶದ ಉಜ್ಜಯನಿ ಮತ್ತು ಓಂಕಾರೇಶ್ವರಕ್ಕೆ ಸಂಪರ್ಕ ಕಲ್ಪಿಸಲಿದೆ.

ಪಂಡಿತ ದೀನದಯಾಳ್‌ ಉಪಾಧ್ಯಾಯ ಸ್ಮಾರಕ ಕೇಂದ್ರವನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ, 63 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದು ದೇಶದಲ್ಲೇ ನಾಯಕರೊಬ್ಬರ ಅತಿ ಎತ್ತರದ ಪ್ರತಿಮೆಯಾಗಿದೆ.

ವೀರಶೈವರ ಕೊಡುಗೆ: ಪ್ರಧಾನಿ ಶ್ಲಾಘನೆ
ಶಿಕ್ಷಣ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಕೊಡುಗೆ ಅಪಾರ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ಕೋಟ್ಯಂತರ ಜನರಿಗೆ ವಿದ್ಯಾದಾನ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

ವಾರಾಣಸಿಯ ಜಂಗಮವಾಡಿ ಮಠದಲ್ಲಿ ಭಾನುವಾರ ನಡೆದ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

19 ಭಾಷೆಗಳಿಗೆ ತರ್ಜುಮೆಗೊಂಡಿರುವ ‘ಶ್ರೀ ಸಿದ್ಧಾಂತ ಶಿಖಾಮಣಿ’ ಗ್ರಂಥವನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಂಥದ ಮೊಬೈಲ್‌ ಅಪ್ಲಿಕೇಷನ್‌ ಸಹ ಅನಾವರಣಗೊಳಿಸಿದರು.

ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ, ‘ಎಲ್ಲರಿಗೂ ನಮಸ್ಕಾರಗಳು, ವೇದಿಕೆ ಮೇಲಿರುವ ವೀರಶೈವ ಜಗದ್ಗುರುಗಳಿಗೆ ನಮಸ್ಕಾರಗಳು. ನಿಮಗೆಲ್ಲರಿಗೂ ನನ್ನ ಅನಂತ ವಂದನೆಗಳು’ ಎಂದು ಹೇಳಿದರು.

ವಿಶ್ವಗುರು ಬಸವಣ್ಣ, ವೀರಶೈವ, ಲಿಂಗಾಯತ ಸಮುದಾಯದ ಕೊಡುಗೆಯನ್ನು ಸ್ಮರಿಸಿದರು. ಬಸವಣ್ಣನವರ ಮಾರ್ಗದರ್ಶನ ನಮಗೆಲ್ಲರಿಗೂಆದರ್ಶವಾಗಿದೆ. ಸಂತರ ಸಂದೇಶಗಳು ನಮಗೆ ದಾರಿದೀಪವಾಗಿವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT