ಸೋಮವಾರ, ಅಕ್ಟೋಬರ್ 21, 2019
24 °C
‘ಅಮೆರಿಕ, ಮುಂಬೈನಲ್ಲೇನಾಯ್ತು’: ಸಿಎಂ ಪ್ರಶ್ನೆ

ಬಿಹಾರದಲ್ಲಿ ಮಾತ್ರ ಪ್ರವಾಹವೇ?: ಪತ್ರಕರ್ತರ ವಿರುದ್ಧ ಹರಿಹಾಯ್ದ ನಿತೀಶ್ ಕುಮಾರ್

Published:
Updated:

ಪಟ್ನಾ: ಭಾರೀ ಪ್ರವಾಹದಿಂದ ತತ್ತರಿಸಿದ ಬಿಹಾರದ ಕೆಲವು ಪ್ರದೇಶಗಳಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಪಟ್ನಾದಲ್ಲಿ ಅವರು ಸಂತ್ರಸ್ತರ ಆಕ್ರೋಶ ಎದುರಿಸಬೇಕಾಯಿತು.

ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆ ಸಿಟ್ಟಾದ ನಿತೀಶ್, ‘ದೇಶದ ಯಾವೆಲ್ಲ ಭಾಗಗಳಲ್ಲಿ, ಪ್ರಪಂಚದಾದ್ಯಂತ ಎಲ್ಲಿ ಪ್ರವಾಹ ಆಗಿಲ್ಲ ಹೇಳಿ? ಪಟ್ನಾದಲ್ಲಿ ಮಾತ್ರ ಪ್ರವಾಹವಾಗಿದೆಯೇ, ಇಲ್ಲಿ ಮಾತ್ರ ಸಮಸ್ಯೆ ಇರುವುದೇ? ಮುಂಬೈ, ಅಮೆರಿಕದಲ್ಲೇನಾಯ್ತು?’ ಎಂದು ಹರಿಹಾಯ್ದರು.

ಇದನ್ನೂ ಓದಿ: ಬಿಹಾರ ಸಂತ್ರಸ್ತರಿಗೆ ಪ್ರಧಾನಿ ಸಾಂತ್ವನ | ರಾಜ್ಯಕ್ಕೆ ಮಿಡಿಯದ ಮೋದಿ

ಪ್ರವಾಹವನ್ನು ನೈಸರ್ಗಿ ವಿಪತ್ತು ಎಂದ ಅವರು, ಭಾರೀ ಮಳೆ ಮತ್ತು ಪ್ರವಾಹ ವಾಸ್ತವ. ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ಪ್ರವಾಹದ ನೀರನ್ನು ನಗರದಿಂದ ಹೊರಹೋಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಟ್ನಾದಲ್ಲಿ ಮಳೆ ನಿಂತು 36 ಗಂಟೆ ಕಳೆದರೂ ನಗರದ ಅನೇಕ ಪ್ರದೇಶಗಳು ಇನ್ನೂ ಮುಳುಗಡೆಯಾಗಿಯೇ ಇವೆ. ವಿದ್ಯುತ್‌, ಕುಡಿಯುವ ನೀರು ಇಲ್ಲದೆ ನಿವಾಸಿಗಳು ಪರದಾಡುವಂತಾಗಿದೆ.

ಮಳೆ ಸಂಬಂಧಿತ ಅವಘಡಗಳಿಂದಾಗಿ ಬಿಹಾರದಲ್ಲಿ ಈವರೆಗೆ 42 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ನಾದ ಹನುಮಾನ್ ನಗರ, ರಾಜೇಂದ್ರ ನಗರ ಮತ್ತು ಕಾನ್‌ಕರ್ ಬಾಘ್ ಪ್ರದೇಶಗಳ ನಿವಾಸಿಗಳಿಗೆ ವಾಯುಪಡೆ ಹೆಲಿಕಾಪ್ಟರ್‌ಗಳ ಮೂಲಕ ಪರಿಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ಮನೆಗಳ ತಾರಸಿಯಲ್ಲಿ ನಿಂತು ಪ್ರವಾಹದಿಂದ ರಕ್ಷಣೆ ಪಡೆಯುತ್ತಿರುವ ನಿವಾಸಿಗಳು ಸಹಾಯಕ್ಕಾಗಿ ವಾಯುಪಡೆ ಹೆಲಿಕಾಪ್ಟರ್‌ಗಳತ್ತ ಮೊರೆಯಿಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

Post Comments (+)