ಬಿಜೆಪಿ ಸೋಲಿಸಲು ‘ಕೈ’ ಹಿಡಿದ ನಾಯ್ಡು

7
ರಾಹುಲ್‌ ಭೇಟಿಯಾದ ಟಿಡಿಪಿ ಮುಖ್ಯಸ್ಥ

ಬಿಜೆಪಿ ಸೋಲಿಸಲು ‘ಕೈ’ ಹಿಡಿದ ನಾಯ್ಡು

Published:
Updated:
Deccan Herald

ನವದೆಹಲಿ: ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಅವರನ್ನು ಗುರುವಾರ  ಭೇಟಿಯಾಗಿದ್ದಾರೆ. 

ಭಾರತ, ಅದರ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದಕ್ಕಾಗಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಂದಾಗಿ ಕೆಲಸ ಮಾಡಲಿವೆ ಎಂದು ರಾಹುಲ್‌ ಹೇಳಿದ್ದಾರೆ. ನಾಯ್ಡು ಅವರನ್ನು ಭೇಟಿಯಾದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ವಿರೋಧ ಪಕ್ಷಗಳ ಮೈತ್ರಿಕೂಟದ ನಾಯಕ ಯಾರು ಎಂಬ ಪ್ರಶ್ನೆಗೆ, ‘ನಮ್ಮ ಮುಖ್ಯ ಯೋಜನೆ ಬಿಜೆಪಿಯನ್ನು ಸೋಲಿಸುವುದಾಗಿದೆ. ಇತರ ಎಲ್ಲ ವಿಚಾರಗಳನ್ನು ಬಳಿಕ ಚರ್ಚಿಸುತ್ತೇವೆ. ಎಲ್ಲರೂ ಜತೆಯಾಗಿ ಕೆಲಸ ಮಾಡುತ್ತೇವೆ’ ಎಂದು ರಾಹುಲ್ ಸ್ಪಷ್ಪಪಡಿಸಿದರು. ‘ನಿಮ್ಮ ಯೋಚನೆ ಇರುವುದು ಪ್ರಚೋದನಕಾರಿ ಸುದ್ದಿ ಕೊಡುವುದು. ಆದರೆ, ನಾವು ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೆಲಸ ಮಾಡಬೇಕಾಗಿದೆ’ ಎಂದು ಮಾಧ್ಯಮದವರಿಗೆ ಹೇಳಿದರು. 

ಹಳೆಯದೆಲ್ಲವನ್ನೂ ಮರೆತು ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಯೋಚಿಸಲು ನಿರ್ಧರಿಸಿದ್ದೇವೆ. ಇದು ದೇಶಕ್ಕೆ ನಿರ್ಣಾಯಕ ಎಂದು ರಾಹುಲ್‌ ಹೇಳಿದರು. ಆಂಧ್ರ ಪ್ರದೇಶ ರಾಜ್ಯ ವಿಭಜನೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಟಿಡಿಪಿ ಹರಿಹಾಯ್ದಿತ್ತು. 

ದೇಶ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಒಟ್ಟಾಗುವುದು ಅಗತ್ಯವಾಗಿದೆ. ಇದನ್ನು ರಾಹುಲ್‌ ಅವರು ತಾತ್ವಿಕವಾಗಿ ಒಪ್ಪಿದ್ದಾರೆ ಎಂದು ನಾಯ್ಡು ಹೇಳಿದರು. 

ತೆಲಂಗಾಣದಲ್ಲಿ ಡಿ. 7ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಮತ್ತು ಟಿಡಿಪಿ ನಡುವೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ. ಅದರ ಮಧ್ಯದಲ್ಲಿಯೇ ಇಬ್ಬರು ನಾಯಕರ ಭೇಟಿ ನಡೆದಿದೆ. 

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 1

  Sad
 • 0

  Frustrated
 • 8

  Angry

Comments:

0 comments

Write the first review for this !