ಭಾನುವಾರ, ಸೆಪ್ಟೆಂಬರ್ 27, 2020
21 °C
ಗೋವಾ ಬಿಜೆಪಿ ಶಾಸಕಿ ಅಲಿನಾ ಸಲ್ಡಾನ್ಹಾ ವಿವಾದಾತ್ಮಕ ಹೇಳಿಕೆ

‘ಮಹಿಳೆಯರಿಗೆ ರಾತ್ರಿ ಪಾಳಿಯ ಉದ್ಯೋಗ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಣಜಿ: ‘ಮಹಿಳೆ ತುಂಬಾ ಸೂಕ್ಷ್ಮ ಹಾಗೂ ಮೃದು ಸ್ವಭಾವದವಳು. ಉದ್ಯೋಗದ ಸ್ಥಳಕ್ಕಿಂತ ಕುಟುಂಬಕ್ಕೆ ಅವಳ ಅಗತ್ಯ ಹೆಚ್ಚಿರುತ್ತದೆ. ಹಾಗಾಗಿ, ಮಹಿಳೆಗೆ ರಾತ್ರಿಪಾಳಿಯ ಉದ್ಯೋಗ ಸೂಕ್ತವಲ್ಲ’ ಎಂದು ಶುಕ್ರವಾರ ಗೋವಾದ ಬಿಜೆಪಿ ಶಾಸಕಿ ಅಲಿನಾ ಸಲ್ಡಾನ್ಹಾ ಹೇಳಿದ್ದಾರೆ.

ಗೋವಾದ ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲೆಮೊ ಗೋವಾದ ಮಹಿಳೆ ಯರು ‘ನಾಜೂಕು ಮತ್ತು ಸಭ್ಯರು’. ಹಾಗಾಗಿ, ಅವರಿಗೆ ರಾತ್ರಿ ಪಾಳಿಯ ಉದ್ಯೋಗ ಸೂಕ್ತವಾಗುವುದಿಲ್ಲ ಎಂದು ವಿವಾ ದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಅಲಿನಾ ಈ ರೀತಿ ಹೇಳಿದ್ದಾರೆ.

ಅಲಿನಾ ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಗೋವಾದ ಪರಿಸರ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ‘ಕಾರ್ಖಾನೆ ಮತ್ತು ಉತ್ಪಾದನಾ ಘಟಕಗಳಲ್ಲಿ ಮಹಿಳಾ ಉದ್ಯೋಗಿಗಳು ರಾತ್ರಿ ಪಾಳಿ ಕೆಲಸ ನಿರ್ವಹಿಸಬಹುದು’ ಎನ್ನುವ ಕುರಿತು ಕಾರ್ಖಾನೆ ಕಾಯ್ದೆ 2019ಗೆ (ಗೋವಾ ತಿದ್ದುಪಡಿ) ಗುರುವಾರ ಗೋವಾ ಸರ್ಕಾರ ಸದನ ದಲ್ಲಿ ಅನುಮೋದನೆ ನೀಡಿತ್ತು. ‌

ಗುರುವಾರ ಶಾಸಕಾಂಗ ಕಾರ್ಯ ಗಳಲ್ಲಿ ಸಕ್ರಿಯವಾಗಿದ್ದ ಕಾರಣ, ಈ ಕಾಯ್ದೆಗೆ ಪ್ರತಿಕ್ರಿಯಿಸಲು ಸಾಧ್ಯವಾಗಿರಲಿಲ್ಲ ಎಂದಿರುವ ಅಲಿನಾ, ‘ಮಕ್ಕಳಿರುವ ತಾಯಂದಿರಿಗೆ ಹೆಚ್ಚಿನ ಜವಾಬ್ದಾರಿಗಳಿ ರುತ್ತವೆ. ತಾಯಿಯಿಲ್ಲದ ಮನೆಯಲ್ಲಿ ಮಕ್ಕಳಿರಲು ಸಾಧ್ಯವಿಲ್ಲ. ತಾಯಿಯಿಲ್ಲದೇ ಮಕ್ಕಳು ಏನೂ ಮಾಡಲಾಗದು. ಹಾಗಾಗಿ, ಕುಟುಂಬದಲ್ಲಿ ತಾಯಿಯ ಅವಶ್ಯಕತೆ ಹೆಚ್ಚಿರುತ್ತದೆ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

‘ವಿಶೇಷವಾಗಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಅಂಥ ತಾಯಂದಿರು ಮನೆಯಲ್ಲೇ ಇರಬೇಕಾಗುತ್ತದೆ. ಮಕ್ಕಳನ್ನು ಶಾಲೆಗೆ ತಯಾರು ಮಾಡಿ ಕಳಿಸಿ, ಮುಂದಿನ ದಿನದ ಕಾರ್ಯಕ್ರಮವನ್ನೂ ಅವರು ನೋಡಿಕೊಳ್ಳಬೇಕು. ಹಾಗಾಗಿ, ಮಹಿಳೆಯರು ರಾತ್ರಿ ಪಾಳಿಯ ಉದ್ಯೋಗದಲ್ಲಿ ಕೆಲಸ ಮಾಡಬಾರದು ಎಂಬುದು ನನ್ನ ಅನಿಸಿಕೆ. ಪುರುಷನಿಗೆ ಹೋಲಿಸಿದರೆ ಮಹಿಳೆಯರು ತುಂಬಾ ಸೂಕ್ಷ್ಮ ಮತ್ತು ದುರ್ಬಲರು. ಮಹಿಳೆಯರಿಗೆ ಕಷ್ಟದ ಕೆಲಸವನ್ನು ಮಾಡಲಾಗದು, ಅವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಸರಿಯಲ್ಲ’ ಎಂದೂ ಹೇಳಿದ್ದಾರೆ. 

ಗುರುವಾರ ಗೋವಾ ವಿಧಾನಸಭೆಯಲ್ಲಿ ಚರ್ಚೆಗಳ ನಡುವೆಯೇ ಕಾರ್ಖಾನೆ ತಿದ್ದುಪಡಿ 2019 ಮಸೂದೆ ಅಂಗೀಕಾರವಾಯಿತು. ‘ಮಸೂದೆ ಅಂಗೀಕರಿಸಿದಾಗ ಅಲಿನಾ ಸದನದಲ್ಲೇ ಇದ್ದರು. ಆದರೆ, ಅವರು ಅನ್ಯಮನಸ್ಕರಾಗಿದ್ದ ಕಾರಣ ಮಸೂದೆ ವಿರುದ್ಧ ದನಿ ಎತ್ತಲಾಗಲಿಲ್ಲ’ ಎಂದು ಶಾಸಕರು ಟೀಕಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲಿನಾ ‘ಅನ್ಯಮನಸ್ಕಳಾಗಿರಲಿಲ್ಲ. ಬೇರೊಂದು ವಿಷಯದ ಕುರಿತು ಬರೆಯುವುದರಲ್ಲಿ ನಾನು ಮಗ್ನಳಾಗಿದ್ದೆ. ಹಾಗಾಗಿ, ಆ ಚರ್ಚೆಯತ್ತ ಗಮನ ಹರಿಸಲಿಲ್ಲ. ಈ ಮಸೂದೆಯ ಬಗ್ಗೆ ನನಗೆ ಬೇಸರವಿದೆ. ಕಡಿಮೆ ಅವಧಿಯಲ್ಲಿ ಚರ್ಚೆಗೊಳಗಾಗಿ ಮಸೂದೆ ಅಂಗೀಕಾರಗೊಂಡಿದ್ದು ಬೇಸರವಾಯಿತು’ ಎಂದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು