ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ಒಪ್ಪಲಾಗದು: ದೆಹಲಿ ಹೈಕೋರ್ಟ್

ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳ ಪ್ರಕಟಣೆ: ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾರಿಂದ ಅರ್ಜಿ
Last Updated 30 ಜೂನ್ 2020, 14:26 IST
ಅಕ್ಷರ ಗಾತ್ರ

ನವದೆಹಲಿ: ‘ಸಮಾಜದಲ್ಲಿ ಮಹಿಳೆಗೆ ಉನ್ನತ ಸ್ಥಾನ ನೀಡಲಾಗಿದೆ. ಆಕೆಯ ಘನತೆ ಹಾಗೂ ಖಾಸಗಿತನಕ್ಕೆ ಧಕ್ಕೆ ತರುವಂತಹ ಚಿತ್ರಗಳನ್ನು ಪ್ರಕಟಿಸುವುದನ್ನು ಒಪ್ಪಲಾಗದು’ ಎಂದು ದೆಹಲಿ ಹೈಕೋರ್ಟ್‌ ಮಂಗಳವಾರ ಹೇಳಿದೆ.

ಒಬ್ಬ ವ್ಯಕ್ತಿಯೊಂದಿಗೆ ತಾವು ಇರುವಂತೆ ಮಾರ್ಪಡಿಸಿದ ಚಿತ್ರಗಳು ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ ಎಂದು ದೂರಿ, ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಪುಷ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಮೃದುಲ್‌ ಹಾಗೂ ತಲ್ವಂತ್‌ ಸಿಂಗ್‌ ಅವರಿರುವ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಆಕ್ಷೇಪಾರ್ಹ ಚಿತ್ರಗಳು ಹಾಗೂ ವಿಡಿಯೊಗಳನ್ನು ತೆಗೆದುಹಾಕುವಂತೆ ಫೇಸ್‌ಬುಕ್‌, ಗೂಗಲ್‌ ಹಾಗೂ ಯೂಟ್ಯೂಬ್‌ಗಳಿಗೆ ನಿರ್ದೇಶನ ನೀಡಬೇಕು. ಅರ್ಜಿ ವಿಚಾರಣೆಗೆ ತಗುಲಿದ ವೆಚ್ಚವಾಗಿ ಫೇಸ್‌ಬುಕ್‌ಗೆ, ಗೂಗಲ್‌ ಮತ್ತು ಯೂಟ್ಯೂಬ್‌ಗೆ ತಲಾ ₹ 2 ಲಕ್ಷ ಪಾವತಿಸುವಂತೆ ಸೂಚಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ರದ್ದುಗೊಳಿಸಬೇಕು ಎಂದೂ ಅವರು ಕೋರಿದ್ದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರಿಗೆ ಸಂಬಂಧಿಸಿದ ಆಕ್ಷೇಪಾರ್ಹ ಚಿತ್ರ, ವಿಡಿಯೊಗಳನ್ನು ತಮ್ಮ ತಾಣದಿಂದ ಕೂಡಲೇ ತೆಗೆದು ಹಾಕುವಂತೆ ಈ ಮೂರು ಸಂಸ್ಥೆಗಳಿಗೆ ಸೂಚಿಸಿತು.

ಫೇಸ್‌ಬುಕ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹ್ಟಗಿ, ‘ಸಂಸ್ಥೆ ಕೇವಲ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ತಾನಾಗಿಯೇ ಅದು ಯಾವುದೇ ಚಿತ್ರ, ವಿಡಿಯೊಗಳನ್ನು ತನ್ನ ತಾಣದಲ್ಲಿ ಅಪ್‌ಲೋಡ್‌ ಮಾಡುವುದಿಲ್ಲ’ ಎಂದರು.

ಗೂಗಲ್‌ ಮತ್ತು ಯೂಟ್ಯೂಬ್‌ ಪರ ವಕೀಲ ಅರುಣ್‌ ಕಠಪಲಿಯಾ ಸಹ ಇದೇ ವಾದ ಮುಂದಿಟ್ಟರು.

ವಾದ ಆಲಿಸಿದ ನ್ಯಾಯಪೀಠ,‘ಈ ವಿಷಯ ಕುರಿತು ಕೆಸರೆರಚಾಟ ಬೇಡ. ಇಂತಹ ವಿಕೃತಿಗಳಿಗೆ ಕೊನೆ ಹಾಡಬೇಕು’ ಎಂದು ಹೇಳಿ, ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT