ಮಹಿಳಾ ಮೀಸಲು ಪರ ನಿರ್ಣಯ

7
ಕಾಂಗ್ರೆಸ್‌ ಮುಖ್ಯಮಂತ್ರಿಗಳಿಗೆ ರಾಹುಲ್‌ ಪತ್ರ

ಮಹಿಳಾ ಮೀಸಲು ಪರ ನಿರ್ಣಯ

Published:
Updated:

ನವದೆಹಲಿ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಲು ಮತ್ತು ಮಸೂದೆ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರವಾಗಿ ಅವರು ಈ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡಲು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸುವಂತೆ ಅವರು ಡಿ.6ರಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.

ರಾಜಕಾರಣದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರೆಕಿಸಿ ಕೊಡುವ ನಿಟ್ಟಿನಲ್ಲಿ ಮಹಿಳೆಯರಿಗೆ ಮೀಸಲಾತಿ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಕರ್ನಾಟಕದ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌ ಆಡಳಿತದಲ್ಲಿರುವ ಪಂಜಾಬ್‌, ಮಿಜೋರಾಂ, ಪುದುಚೇರಿ ಮುಖ್ಯಮಂತ್ರಿಗಳಿಗೆ ರಾಹುಲ್‌ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕುವ ‘ಪಾಶ್’ ಕಾಯ್ದೆ ಜಾರಿಯಾಗಿ ಐದು ವರ್ಷವಾಯ್ತು

ಮಸೂದೆಗೆ ದಶಕದ ಇತಿಹಾಸ

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಪ್ರಸ್ತಾಪ ಹೊಂದಿದ ಮಹಿಳಾ ಮೀಸಲಾತಿ ಮಸೂದೆಯನ್ನು ಯುಪಿಎ ಆಡಳಿತ ಅವಧಿಯಲ್ಲಿ (2008ರಲ್ಲಿ) ರಾಜ್ಯಸಭೆಯಲ್ಲಿ ಮಂಡಿಸಲಾಯಿತು.

2010ರಲ್ಲಿ ಮಸೂದೆಗೆ ರಾಜ್ಯಸಭೆ ಅನುಮೋದನೆಯನ್ನೂ ನೀಡಿತು. ಆದರೆ, ಯುಪಿಎ ಭಾಗವಾಗಿದ್ದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ವಿರೋಧದಿಂದ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲಿಲ್ಲ.

ಯುಪಿಎ ಎರಡನೇ ಆಡಳಿತ ಅವಧಿ ಕೊನೆಗೊಂಡು, 2014ರಲ್ಲಿ 15ನೇ ಲೋಕಸಭೆ ವಿಸರ್ಜನೆಯಾದ ನಂತರ ಮಹಿಳಾ ಮೀಸಲಾತಿ ಮಸೂದೆ ರದ್ದಾಯಿತು.

***

* ಶಾಸನಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಿದ 193 ರಾಷ್ಟ್ರಗಳ ರ‍್ಯಾಂಕ್‌ ಪಟ್ಟಿಯಲ್ಲಿ 148ನೇ ಸ್ಥಾನದಲ್ಲಿ ಭಾರತ 

* ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಬೆಂಬಲ ಕೋರಿ ಈ ಮೊದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ 

* ಇಲ್ಲಿಯವರೆಗೆ ಆಂಧ್ರ ಪ್ರದೇಶ ಮತ್ತು ಒಡಿಶಾ ವಿಧಾನಸಭೆಗಳು ಮಾತ್ರ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿವೆ 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !