ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪುತ್ರಿಯರೊಂದಿಗಿನ ಅಸಭ್ಯ ವರ್ತನೆಯನ್ನು ಸಹಿಸುವುದಿಲ್ಲ: ಅರವಿಂದ ಕೇಜ್ರಿವಾಲ್

Last Updated 10 ಫೆಬ್ರುವರಿ 2020, 12:19 IST
ಅಕ್ಷರ ಗಾತ್ರ

ನವದೆಹಲಿ: ನಮ್ಮ ಪುತ್ರಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದನ್ನು ನಮ್ಮ ಸರ್ಕಾರವು ಸಹಿಸುವುದಿಲ್ಲ ಮತ್ತು ಅಪರಾಧಿಗಳಿಗೆ ಸಾಧ್ಯವಾದಷ್ಟು ಕಠಿಣ ಕ್ರಮ ನೀಡುವಂತೆ ಒತ್ತಾಯಿಸುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಸುಮಾರು 35 ಜನರಿದ್ದ ಅಪರಿಚಿತರ ತಂಡವೊಂದು ದೆಹಲಿಯ ಪ್ರತಿಷ್ಟಿತ ಗಾರ್ಗಿ ಕಾಲೇಜಿಗೆ ನುಗ್ಗಿ ದಾಂದಲೆ ನಡೆಸಿದ್ದರು. ಇದರಲ್ಲಿ ಹಲವರು ಚೆನ್ನಾಗಿ ಕುಡಿದು ಕಾಲೇಜಿನ ಕ್ಯಾಂಪಸ್‌ನೊಳಗಿದ್ದಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಗಾರ್ಗಿ ಕಾಲೇಜಿನಲ್ಲಿ ನಮ್ಮ ಪುತ್ರಿಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಸಂಗತಿಯಾಗಿದೆ. ಈ ರೀತಿಯ ವರ್ತನೆಗಳನ್ನು ಸಹಿಸಲಾಗುವುದಿಲ್ಲ. ಅಪರಾಧಿಗಳಿಗೆ ಸಾಧ್ಯವಾದಷ್ಟು ಕಠಿಣ ಶಿಕ್ಷೆಯನ್ನು ನೀಡಬೇಕು ಮತ್ತು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬೇಕು ಎಂದು ಹೇಳಿದ್ದಾರೆ.

ಶನಿವಾರವಷ್ಟೇ ದೆಹಲಿಯ ಚುನಾವಣೆ ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಬಹುಮತ ಪಡೆದು ಸರ್ಕಾರ ಸಚಿಸಲಿದೆ ಎಂದು ಹೇಳಿವೆ. ಮಹಿಳಾ ಸುರಕ್ಷತೆ ಕೂಡ ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಗಳಲ್ಲಿ ಒಂದಾಗಿದೆ.

ಈ ಮಧ್ಯೆ ದೆಹಲಿ ಪೊಲೀಸರು ಫೆಬ್ರುವರಿ 6ರಂದು ಸಾಂಸ್ಕೃತಿಕ ಕಾರ್ಯಕ್ರಮವಿದ್ದ ವೇಳೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಭದ್ರತಾ ವೈಫಲ್ಯವನ್ನು ಖಂಡಿಸಿದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್‌ನಲ್ಲಿ ಮುಂಜಾನೆ ಪ್ರತಿಭಟನೆ ಕೈಗೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರಕಾರ, ಫೆಬ್ರುವರಿ 6ರಂದು ಸಂಜೆ 6.30ರ ಸುಮಾರಿಗೆ ಅಪರಿಚಿತ ಗುಂಪೊಂದು ಕಾಲೇಜಿಗೆ ಲಗ್ಗೆ ಇಟ್ಟಿದೆ. ಚೆನ್ನಾಗಿ ಕುಡಿದಿದ್ದ ಹಲವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಕಾಲೇಜಿನ ಕ್ಯಾಂಪಸ್‌ನಲ್ಲಿ ಅಟ್ಟಾಡಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT