ಸೋಮವಾರ, ಮಾರ್ಚ್ 1, 2021
23 °C

ಲಾಕ್‌ಡೌನ್‌: ಕಾಂಕ್ರೀಟ್‌ ಮಿಕ್ಸರ್‌ನೊಳಗೆ ಕುಳಿತು ಪ್ರಯಾಣಿಸಿದ 18 ಕಾರ್ಮಿಕರು!

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕಾಂಕ್ರೀಟ್ ಮಿಕ್ಸರ್‌ನೊಳಗೆ ಕುಳಿತು ಪ್ರಯಾಣಿಸುತ್ತಿದ್ದ 18 ಕಾರ್ಮಿಕರು

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೇಶದ ಹಲವು ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರು ತಮ್ಮ ಮನೆಗಳಿಗೆ ಹಿಂದಿರುಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅವಕಾಶ ಕಲ್ಪಿಸುತ್ತಿವೆ. ಅದಕ್ಕೂ ಮುನ್ನವೇ ಕೆಲವು ಜನ ಕಾಂಕ್ರೀಟ್ ಮಿಕ್ಸರ್‌‌ನೊಳಗೆ ಕುಳಿತು ಪ್ರಯಾಣಿಸುವ ಮಾರ್ಗ ಕಂಡು ಕೊಂಡಿದ್ದಾರೆ.

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಾಂಕ್ರೀಟ್‌ ಮಿಕ್ಸರ್‌ ವಾಹನದೊಳಗೆ ಕುಳಿತು 18 ಕಾರ್ಮಿಕರು ಪ್ರಯಾಣಿಸುತ್ತಿದ್ದುದು ಕಂಡುಬಂದಿದೆ. ಈ ಕುರಿತು ಎಎನ್ಐ ಸುದ್ದಿಸಂಸ್ಥೆ ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. 

41 ಸೆಕೆಂಡ್‌ಗಳಿರುವ ವಿಡಿಯೊದಲ್ಲಿ ಪೊಲೀಸರು ವಾಹನವನ್ನು ತಡೆದ ಬಳಿಕ ಕಾಂಕ್ರೀಟ್ ಮಿಕ್ಸರ್ ಟ್ಯಾಂಕ್‌ನಿಂದ ಒಬ್ಬೊಬ್ಬರೇ ಹೊರ ಬರುತ್ತಿರುವುದು ಸೆರೆಯಾಗಿದೆ. 

ಅವರೆಲ್ಲರೂ ಮಹಾರಾಷ್ಟ್ರದಿಂದ ಲಖನೌಗೆ ಪ್ರಯಾಣಿಸುತ್ತಿದ್ದರು. ಟ್ರಕ್‌ ಅನ್ನು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಮತ್ತು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾಕಾಂತ್ ಚೌಧರಿ ಎಎನ್‌ಐಗೆ ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಇದ್ದಲ್ಲಿಯೇ ಸಿಲುಕಿರುವ ಕಾರ್ಮಿಕರು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಮರಳಲು ಅನುಮತಿ ನೀಡಿದ್ದ ಕೇಂದ್ರ ಗೃಹ ಸಚಿವಾಲಯವು ಏಪ್ರಿಲ್ 29ರಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದಾಗ್ಯೂ, ವಲಸಿಗರು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳ ಸಂಚಾರವನ್ನು ಕಂಟೈನ್‌ಮೆಂಟ್‌ ಅಲ್ಲದ ವಲಯಗಳಿಗೆ ಸೀಮಿತಗೊಳಿಸಲಾಗಿದೆ. 

ಹೊಸ ಮಾರ್ಗಸೂಚಿಗಳು ಮೇ 4 ರಿಂದ ಜಾರಿಗೆ ಬರಲಿವೆ. ಇದರಿಂದ ಅನೇಕ ಜಿಲ್ಲೆಗಳಿಗೆ ಲಾಕ್‌ಡೌನ್‌ನಿಂದ ಸಡಿಲಿಕೆ ಸಿಗುತ್ತಿದೆ. ಸಿಲುಕಿದ್ದ ಎಲ್ಲ ಜನರು ನಗರಗಳಲ್ಲಿ ಕಠಿಣ ವೈದ್ಯಕೀಯ ತಪಾಸಣೆಗೆ ಒಳಪಟ್ಟ ನಂತರವೇ ಮನೆಗೆ ಹಿಂತಿರುಗಬಹುದು ಎಂದು ಮಾರ್ಗಸೂಚಿಗಳು ತಿಳಿಸಿವೆ.

ಮನೆಗೆ ವಾಪಸ್ ಕಳುಹಿಸುವ ಮೊದಲು, ಇತರೆಡೆಯಿಂದ ಬಂದ ಎಲ್ಲರಿಗೂ ಥರ್ಮಲ್ ಟೆಸ್ಟಿಂಗ್ ಕೇಂದ್ರಗಳು ಮತ್ತು ಕ್ವಾರಂಟೈನ್‌ ಸೌಲಭ್ಯಗಳನ್ನು ಎಲ್ಲ ರಾಜ್ಯ ಸರ್ಕಾರಗಳು ಒದಗಿಸಲೇಬೇಕು. ಸಾರಿಗೆಗಾಗಿ ಸ್ವಚ್ಛಗೊಳಿಸಿದ ಬಸ್‌ಗಳ ವ್ಯವಸ್ಥೆಯನ್ನು ಕೂಡ ಮಾಡಬೇಕು ಎಂದು ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು