ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು: ರಾಹುಲ್ ಗಾಂಧಿ

Last Updated 4 ಅಕ್ಟೋಬರ್ 2019, 10:11 IST
ಅಕ್ಷರ ಗಾತ್ರ

ವಯನಾಡ್: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ– 766ರಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಿದ್ದನ್ನು ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರಿಗೆ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ವಯನಾಡಿನಲ್ಲಿ ಬೆಂಬಲ ಸೂಚಿಸಿದ್ದಾರೆ.

ವಯನಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ದೇಶದಲ್ಲಿ ಸರ್ವಾಧಿಕಾರ ಧೋರಣೆಯತ್ತ ಸಾಗುತ್ತಿದ್ದು, ಇದು ದೇಶದ ಜನರಿಗೆ ಗೊತ್ತಿದೆ ಎಂದಿದ್ದಾರೆ.

ದೇಶದಲ್ಲಿನ ಗುಂಪು ಹಲ್ಲೆ ಕೃತ್ಯಗಳನ್ನು ಖಂಡಿಸಿ ಪ್ರಧಾನಿಗೆ ತೆರೆದ ಪತ್ರ ಬರೆದ ಸುಮಾರು 50 ಮಂದಿ ವಿರುದ್ಧ ಬಿಹಾರದ ಮುಜಾಫರ್‌ಪುರ್‌ನಲ್ಲಿ ಗುರುವಾರ ಎಫ್‌ಐಆರ್ ದಾಖಲಿಸಲಾಗಿದೆ.
ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದೇನೂ ರಹಸ್ಯವಲ್ಲ, ಇಡೀ ಜಗತ್ತಿಗೇ ಗೊತ್ತಿದೆ. ನಾವು ಸರ್ವಾಧಿಕಾರದತ್ತ ಸಾಗುತ್ತಿದ್ದೇವೆ. ಇದು ಸ್ಪಷ್ಟ.ಪ್ರಧಾನಿ ವಿರುದ್ಧ ಯಾರಾದರೂ ಮಾತನಾಡಿದರೆ, ಸರ್ಕಾರದ ವಿರುದ್ಧ ದನಿಯೆತ್ತಿದರೆ ಅವರನ್ನು ಜೈಲಿಗೆ ಹಾಕಲಾಗುತ್ತಿದೆ. ಅವರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಮಾಧ್ಯಮಗಳ ಸದ್ದಡಗಿಸಲಾಗಿದೆ ಎಂದು ವಯನಾಡ್ ಸಂಸದ ರಾಹುಲ್ ಹೇಳಿದ್ದಾರೆ.

ಗುಂಪು ಹಲ್ಲೆ ಕೃತ್ಯಗಳನ್ನು ಖಂಡಿಸಿ ಪ್ರಧಾನಿಗೆ ಪತ್ರ ಬರೆದಿದ್ದ 49 ಸೆಲೆಬ್ರಿಟಿಗಳ ವಿರುದ್ಧ ಗುರುವಾರ ಎಫ್‌ಐಆರ್ ದಾಖಲಿಸಲಾಗಿದೆ. ರಾಮಚಂದ್ರ ಗುಹಾ, ಮಣಿರತ್ನಂ, ಅಡೂರ್ ಗೋಪಾಲ ಕೃಷ್ಣನ್, ಅಪರ್ಣಾ ಸೇನ್ ಮೊದಲಾದ ಸೆಲೆಬ್ರಿಟಿಗಳ ವಿರುದ್ಧ ದೇಶದ್ರೋಹ, ಸಾಮಾಜಿಕ ಕಿರುಕುಳ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಶಾಂತಿ ಕದಡುವ ಯತ್ನ ಮೊದಲಾದ ಆರೋಪಗಳನ್ನು ಹೊರಿಸಲಾಗಿದೆ.

ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ ಎರಡು ತಿಂಗಳ ಹಿಂದೆ ಸೆಲೆಬ್ರಿಟಿಗಳ ವಿರುದ್ಧ ದೂರು ಸಲ್ಲಿಸಿದ್ದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಿವಾರಿ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದರು.

ದೇಶದ ಘನತೆಯನ್ನು ಹಾಳು ಮಾಡಲು ಮತ್ತು ಪ್ರಧಾನಿಯವರ ಕೆಲಸ ನಿರ್ವಹಣೆಯ ಶಕ್ತಿಗುಂದಿಸುವುದಕ್ಕಾಗಿ ಸೆಲೆಬ್ರಿಟಿಗಳು ಯತ್ನಿಸಿದ್ದಾರೆ ಎಂದು ಓಜಾ ದೂರಿದ್ದರು.
ತಮ್ಮ ಅರ್ಜಿಯನ್ನು ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ಆಗಸ್ಟ್ 20ರಂದು ನೀಡಿದ ಆದೇಶ ಪ್ರಕಾರ ಸರ್ದಾರ್ ಪೊಲೀಸ್ ಠಾಣೆಯಲ್ಲಿಎಫ್‌ಐಆರ್ ದಾಖಲಿಸಲಾಗಿದೆ ಎಂದು ಓಜಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT