ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜ್ಬುಲ್ ಕಮಾಂಡರ್‌ ರಿಯಾಜ್ ನೈಕೂ ಭದ್ರತಾ ಪಡೆಗಳ ಬಲೆಗೆ ಬಿದ್ದಿದ್ದು ಹೇಗೆ?

ಕೊನೆಯ ಕ್ಷಣಗಳು
Last Updated 7 ಮೇ 2020, 17:02 IST
ಅಕ್ಷರ ಗಾತ್ರ

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿಜಮ್ಮು ಮತ್ತು ಕಾಶ್ಮೀರದಭದ್ರತಾ ಪಡೆಗಳು ಮಹತ್ವದ ವಿಜಯ ದಾಖಲಿಸಿವೆ. ಹಿಜ್ಬುಲ್‌ ಮುಜಾಹಿದ್ದೀನ್ ಉಗ್ರರ ಸಂಘಟನೆಯ ಕಮಾಂಡರ್‌ ಆಗಿ ಕಾಡುತ್ತಿದ್ದ ನೈಕೂ ರಿಯಾಜ್,ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ನೈಕೂ ಹತ್ಯೆಯು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭದ್ರತಾಪಡೆಗಳಿಗೆ ಸಿಕ್ಕ ಬಹುದೊಡ್ಡ ವಿಜಯ ಎಂದು ವಿಶ್ಲೇಷಿಸಲಾಗಿದೆ.ಈ ಹಿಂದೆ ಶಿಕ್ಷಕನಾಗಿದ್ದ ನೈಕೂಗೆ ಪಾಕ್ ಮೂಲದ ಭಯೋತ್ಪಾದಕ ಸಂಘಟನೆಯು ಸ್ಥಳೀಯ ಯುವಕರನ್ನು ಉಗ್ರವಾದದತ್ತ ಸೆಳೆಯುವ ಜವಾಬ್ದಾರಿ ವಹಿಸಿತ್ತು.

ನೈಕೂ ಸಾವಿನ ನಂತರ,‘ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸುವುದನ್ನು ವಿರೋಧಿಸುತ್ತಿದ್ದ, ಹೊರ ರಾಜ್ಯಗಳಿಂದ ಬಂದಿದ್ದ ಕಾರ್ಮಿಕರನ್ನು ಅಪಹರಿಸಿ ಕೊಲ್ಲುತ್ತಿದ್ದ, ನಾಗರಿಕರನ್ನು ನೆಮ್ಮದಿ ಕಸಿಯುತ್ತಿದ್ದಉಗ್ರನೊಬ್ಬನನ್ನು ಕೊಂದಿದ್ದೇವೆ’ ಎಂದು ಕಾಶ್ಮೀರದ ಭದ್ರತಾ ಸಿಬ್ಬಂದಿ ಹೆಮ್ಮೆಯಿಂದ ಉದ್ಗರಿಸಿದ್ದರು.

2012ರಿಂದಲೂಭದ್ರತಾ ಸಿಬ್ಬಂದಿ ನೈಕೂ ಬೆನ್ನಟ್ಟಿದ್ದರು.ಇದೀಗ ಅವನ ಸಾವಿನಿಂದಾಗಿ ಉಗ್ರವಾದಕ್ಕೆ ಹೊಸಬರು ಬರುವುದಕ್ಕೆ ತಡೆಯಾಗಲಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಈ ನಿರ್ಣಾಯಕಕಾರ್ಯಾಚರಣೆಯ ವಿವರಗಳು ಇದೀಗ ಒಂದೊಂದಾಗಿ ಹೊರಬೀಳುತ್ತಿವೆ. ಕೆಲ ಜಾಲತಾಣಗಳಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಹಂಚಿಕೊಂಡಿರುವ ಕಾರ್ಯಾಚರಣೆಯ ವಿವರಗಳೂ ಪ್ರಕಟವಾಗಿದೆ. ಅವರು ನೀಡಿರುವ ಮಾಹಿತಿಯ ಪ್ರಕಾರ ಈ ಕಾರ್ಯಾಚರಣೆ ನಡೆದದ್ದು ಹೀಗೆ...

‘ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆಯ ವಿಶೇಷ ಕಾರ್ಯಾಚರಣೆ ಪಡೆಯು ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಪಡೆಯ ಮುಖ್ಯಸ್ಥ ರಿಯಾಜ್‌ ನೈಕೂನನ್ನು ಆರು ತಿಂಗಳಿನಿಂದ ಬೆನ್ನತ್ತಿತ್ತು. ಪ್ರತಿ ಸಲ ನಾವು ಉಗ್ರನ ಬೆನ್ನತ್ತಿದಾಗ ಅವನಿಗೆ ಹೇಗೋ ಸುಳಿವು ಸಿಕ್ಕು, ಪಾರಾಗಿಬಿಡುತ್ತಿದ್ದ. ಹಲವು ಅಡಗುದಾಣಗಳನ್ನು ರೂಪಿಸಿಕೊಂಡಿದ್ದ. ಒಂದಾದ ಮೇಲೆ ಒಂದು ಹಳ್ಳಿಗೆ ಅಡಗುದಾಣ ಬದಲಿಸುತ್ತಿದ್ದ.

‘ಕಳೆದ 15 ದಿನಗಳಿಂದೀಚೆಗೆ ಉಸಿರು ಬಿಗಿಹಿಡಿಯುವಂಥ ಬೆಳವಣಿಗೆಗಳು ನಡೆದವು. ನಾವು ಅವನ ತೀರಾ ಹತ್ತರ ತಲುಪಲು ಯಶಸ್ವಿಯಾದೆವು. ಹೆಚ್ಚು ಕಡಿಮೆ ಅವನಿಡುವ ಪ್ರತಿ ಹೆಜ್ಜೆಯೂ ನಮಗೆ ವರದಿಯಾಗುತ್ತಿತ್ತು.ನಮ್ಮ ಸಿಬ್ಬಂದಿ ಅಕ್ಷರಶಃ ಹಗಲು–ರಾತ್ರಿ ವ್ಯತ್ಯಾಸವಿಲ್ಲದೆ ಕೆಲಸ ಮಾಡುತ್ತಿದ್ದರು.ರಿಯಾಜ್ ನೈಕೂ ಪೊಲೀಸರ ಗುಂಡಿಗೆ ಬಲಿಯಾಗುವಮೂರು ದಿನಗಳ ಮೊದಲು ಖಚಿತ ವರ್ತಮಾನವೊಂದು ನಮ್ಮನ್ನು ತಲುಪಿತು. ಪುಲ್ವಾಮಾ ಜಿಲ್ಲೆಯ ಅವನ ತವರು ಗ್ರಾಮ ಬೀಘ್‌ಪೊರಾದ ಮನೆಯೊಂದರಿಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು.

‘ನೈಕೂ ನಿರ್ದಿಷ್ಟವಾಗಿ ಇಂತಲ್ಲೇ ಇದ್ದಾನೆ ಎಂದುಪತ್ತೆ ಹಚ್ಚುವುದು ಅಷ್ಟು ಸುಲಭವಾಗಿರಲಿಲ್ಲ. ಅವನ ಅಡುಗುದಾಣಗಳನ್ನು ಗುರುತಿಸಿ, ಅಲ್ಲಿಗೆ ತೆರಳಿ ತನಿಖೆಯ ನಂತರ ಖಾಲಿಕೈಲಿ ಹಿಂದಿರುಗಿದ್ದ ಹಲವು ಉದಾಹರಣೆಗಳಿದ್ದವು. ಆದರೆ ಈ ಬಾರಿ ಪರಿಸ್ಥಿತಿ ನಮ್ಮ ಪರವಾಗಿತ್ತು.

‘ಅವನಿಗೆ ಅತಿ ಹತ್ತಿರ ಇರುವಕೆಲವರನ್ನು ಪತ್ತೆಹಚ್ಚಿ ವಿಶ್ವಾಸಕ್ಕೆ ತೆಗೆದುಕೊಂಡೆವು. ಆಹಾರ ಸೇರಿದಂತೆ ಅವನ ದಿನದಿನದ ಅಗತ್ಯ ಪೂರೈಸುವ ಕೆಲವರೊಂದಿಗೆ ಕೆಲಸ ಮಾಡಲು ಶುರು ಮಾಡಿದೆವು. ಅವನಿಗಾಗಿ ಅಡಗುದಾಣ ರೂಪಿಸಿಕೊಟ್ಟವನನ್ನೂ ನಾವು ಒಲಿಸಿಕೊಂಡಿದ್ದೆವು. ಇಷ್ಟೆಲ್ಲಾ ಆದ ಮೇಲೆ, ನೈಕೂ ವಿರುದ್ಧ ಕಾರ್ಯಾಚರಣೆ ನಡೆಯಬೇಕಾದದಿನವನ್ನೂ ಗುರುತು ಮಾಡಿದೆವು. ವಿಶೇಷ ತಂಡವನ್ನು ರವಾನಿಸುವಾಗ ಅವನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಆತ್ಮವಿಶ್ವಾಸವಿತ್ತು.

‘ಬುಧವಾರ ನಸುಕಿನಲ್ಲಿ ನೈಕೂ ತಂಗಿದ್ದ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರನ್ನು ತೆರವುಗೊಳಿಸಲಾಯಿತು. ಎನ್‌ಕೌಂಟರ್‌ ಆರಂಭವಾದಾಗ ನೈಕೂ ಭಾರೀ ಪ್ರತಿರೋಧ ತೋರಬಹುದು ಎಂದುಕೊಂಡಿದ್ದೆವು. ಆದರೆ ಅಂಥದ್ದೇನೂ ಆಗಲಿಲ್ಲ. ಅವನ ಸಹಚರ ಮೊದಲು ಸತ್ತ. ನೈಕೂ ಸಹ ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ. ಆದರೆ ಅವು ನಿರೀಕ್ಷಿಸಿದಷ್ಟು ನಿಖರವಾಗಲಿ, ಅತಂಕಕಾರಿಯಾಗಲಿ ಆಗಿರಲಿಲ್ಲ.

‘ದಕ್ಷಿಣ ಕಾಶ್ಮೀರದಲ್ಲಿ ಪ್ರಭಾವಶಾಲಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್‌ ಸಂಘಟನೆಯಹಿರಿಯ ಕಮಾಂಡರ್‌ನ ಸಾವುಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಜಯ. 12 ವರ್ಷಗಳ ಸುದೀರ್ಘ ಅವಧಿಗೆ ನೈಕೂ ಹಿಜ್ಮುಲ್‌ ಸಂಘಟನೆಯ ಕಮಾಂಡರ್‌ ಅಗಿದ್ದ. ಇದೂ ಒಂದು ದಾಖಲೆಯೇ ಎನ್ನಿ. ಸತ್ತಾಗ ಅವನಿಗೆ 35 ವರ್ಷ. ತಂತ್ರಜ್ಞಾನವನ್ನು ತನಗೆ ಬೇಕಾದಂತೆ ಬಳಸುವುದರಲ್ಲಿ ಅವನು ಬಲು ನಿಪುಣ.ಕಾಶ್ಮೀರದಲ್ಲಿ ಅತಿಹೆಚ್ಚು ವರ್ಷ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದಅವನಿಗೆ ದಕ್ಷಿಣ ಕಾಶ್ಮೀರದ ವಿವಿಧೆಡೆ ದಕ್ಷಿಣ ಕಾಶ್ಮೀರದ ವಿವಿಧೆಡೆ ಹಲವು ಅಡಗುದಾಣಗಳಿದ್ದವು.

‘ಮನೆಮನೆ ತಪಾಸಣೆ ವೇಳೆ ಎರಡು ಸಂಭವನೀಯ ಅಡಗುದಾಣಗಳನ್ನು ಗುರುತಿಸಿದೆವು. ಸ್ಥಳದಿಂದ ಬರುತ್ತಿದ್ದ ಮಾಹಿತಿ ಖಚಿತವಾಗಿತ್ತು. ಮತ್ತೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅವನು ಅಲ್ಲಿನ ಮನೆಯೊಂದರಲ್ಲಿದ್ದ ಇದ್ದ ಬಗ್ಗೆ ನಮಗೆ ಯಾವುದೇ ಅನುಮಾನವಿರಲಿಲ್ಲ. ಅವನನ್ನು ಬಂಧಿಸದೇ ಅಥವಾ ಕೊಲ್ಲದೇ ನೆಲೆಗಳಿಂದ ಹಿಂದಿರುಗುವಿದಲ್ಲ ಎಂದು ನಮ್ಮ ಅಧಿಕಾರಿಗಳು ಶಪಥ ಮಾಡಿದ್ದರು. ಅಡಗುದಾಣದ ಸುತ್ತ ಭೂಗತ ಸುರಂಗಗಳು ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ಅಂಥ ರಕ್ಷಣೆಗಳು ನೈಕೂ ಸಹಾಯಕ್ಕೆ ಒದಗಿಬರಲಿಲ್ಲ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT