’ಜಲಧಾರೆ’ ಸಚಿವ ಸಂಪುಟಕ್ಕೆ ಶೀಘ್ರ

ಬುಧವಾರ, ಜೂಲೈ 24, 2019
24 °C

’ಜಲಧಾರೆ’ ಸಚಿವ ಸಂಪುಟಕ್ಕೆ ಶೀಘ್ರ

Published:
Updated:
Prajavani

ರಾಯಚೂರು: ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದಂತೆ ನಾಲ್ಕು ಜಿಲ್ಲೆಗಳಲ್ಲಿ ಜಲಧಾರೆ ಯೋಜನೆ ಜಾರಿ ಮಾಡಲಾಗುತ್ತಿದೆ. ಯೋಜನೆಯ ರೂಪುರೇಷೆ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಸಚಿವ ಸಂಪುಟದಲ್ಲಿ ಮಂಡಿಸಲು ಯೋಜಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಯಚೂರು, ವಿಜಯಪುರ, ಮಂಡ್ಯ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಜಲಧಾರೆ ಅನುಷ್ಠಾನವಾಗುತ್ತಿದೆ. ಯೋಜನೆಯ ರೂಪುರೇಷೆಯನ್ನು ಸಂಪುಟದಲ್ಲಿ ಮಂಡಿಸುವ ಮೊದಲು ಆಯಾ ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಅದನ್ನು ಮನವರಿಕೆ ಮಾಡಿಕೊಟ್ಟು, ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆ ಪ್ರತಿ ಗ್ರಾಮಕ್ಕೂ ಶಾಶ್ವತ ನೀರಿನ ಮೂಲದಿಂದ ವರ್ಷಪೂರ್ತಿ ನೀರು ಪೂರೈಸುವ ಉದ್ದೇಶಕ್ಕಾಗಿ ಜಲಧಾರೆ ಯೋಜನೆ ರೂಪಿತವಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆ ಜಾರಿಗೆ ನೆರವು ಒದಗಿಸಬೇಕು ಎಂದು ಕೋರಿದರು.

ಮುಖ್ಯಮಂತ್ರಿ ಸುಮಾರ್ಗ: ರಾಜ್ಯದಲ್ಲಿ ವಿವಿಧ ಯೋಜನೆಗಳಡಿ ಇವರೆಗೂ 54 ಸಾವಿರ ಕಿಲೋ ಮೀಟರ್‌ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಅವುಗಳ ನಿರ್ವಹಣೆ ಆಗುತ್ತಿಲ್ಲ. ಇದಕ್ಕಾಗಿ ’ಮುಖ್ಯಮಂತ್ರಿ ಸುಮಾರ್ಗ’ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತವಾಗಿ 20 ಸಾವಿರ ಕಿಲೋ ಮೀಟರ್‌ ಗ್ರಾಮೀಣ ರಸ್ತೆಗಳ ನಿರ್ವಹಣೆ ಆರಂಭಿಸುವ ಬಗ್ಗೆ ಸಚಿವರ ಸಂಪುಟದ ಒಪ್ಪಿಗೆ ಪಡೆಯುವ ತಯಾರಿ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !