ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾನಸ್: ₹ 10 ಕೋಟಿಗೂ ಅಧಿಕ ನಷ್ಟ

ಗದ್ದೆಯಲ್ಲೇ ಕೊಳೆಯುತ್ತಿರುವ ಬೆಳೆ
Last Updated 31 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಲಾಕ್‌ಡೌನ್ ಪರಿಣಾಮವಾಗಿ ಉತ್ತರ ಭಾರತದ ಮಾರುಕಟ್ಟೆಯನ್ನೇ ಅವಲಂಬಿಸಿದ್ದ ‘ಬನವಾಸಿ ಅನಾನಸ್’ ಗದ್ದೆಯಲ್ಲೇ ಹಣ್ಣಾಗಿ ಕೊಳೆಯುತ್ತಿದ್ದು, ₹ 10 ಕೋಟಿಗೂ ಅಧಿಕ ನಷ್ಟ ಅಂದಾಜಿಸಲಾಗಿದೆ.

ತಾಲ್ಲೂಕಿನ ಬನವಾಸಿ ಹೋಬಳಿ, ಅದಕ್ಕೆ ಹೊಂದಿಕೊಂಡಿರುವ ಸೊರಬ ತಾಲ್ಲೂಕು, ಸಾಗರ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರು ಅನಾನಸ್ ಬೆಳೆಯುತ್ತಾರೆ. ಬೆಳೆ ಕೊಯ್ಲಿಗೆ ಬರುವ ಹೊತ್ತಿಗೆ, ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಲಾಕ್‌ಡೌನ್ ಘೋಷಿಸಿರುವ ಕಾರಣಕ್ಕೆ ಉತ್ತರ ಭಾರತಕ್ಕೆ ಹಣ್ಣು ಹೊತ್ತು ಹೋಗುವ ಲಾರಿಗಳ ಸಂಚಾರ ಸ್ಥಗಿತಗೊಂಡಿತು. ಹೀಗಾಗಿ, ಈಗ ಸುಮಾರು 200 ಹೆಕ್ಟೇರ್‌ನಲ್ಲಿ ಹಣ್ಣಾಗಿರುವ ಅನಾನಸ್ ಗದ್ದೆಯಲ್ಲೇ ಉಳಿದುಕೊಂಡಿದೆ.

‘ಮಾರ್ಚ್‌ ಕೊನೆಯಿಂದ ಮೇವರೆಗೆ ಬನವಾಸಿ, ಸೊರಬ ಭಾಗ ಸೇರಿ ದಿನನಿತ್ಯ ಸರಾಸರಿ 15–20 ಲಾರಿಯಲ್ಲಿ ಅನಾನಸ್ ದೆಹಲಿ, ನಾಗ್ಪುರ ಮೊದಲಾದ ಕಡೆಗಳಿಗೆ ಹೋಗುತ್ತಿತ್ತು. ದಿನಕ್ಕೆ 500ಟನ್‌ನಷ್ಟು ಬೆಳೆ ಕಟಾವು ನಡೆಯುತ್ತಿತ್ತು. ಲಾಕ್‌ಡೌನ್ ಶುರುವಾದ ಮೇಲೆ ಕಟಾವು ನಡೆದೇ ಇಲ್ಲ. ಹೀಗಾಗಿ ಕೊಯ್ಲಿಗೆ ಬಂದಿರುವ ಸುಮಾರು 10ಸಾವಿರ ಟನ್‌ ಅನಾನಸ್ ಗದ್ದೆಯಲ್ಲೇ ಹಣ್ಣಾಗಿದೆ’ ಎನ್ನುತ್ತಾರೆ ಬೆಳೆಗಾರ ಬನವಾಸಿಯ ಗಣಪತಿ ನಾಯ್ಕ.‌

‘ಕೃಷಿ ಬೆಳೆ ನಷ್ಟವಾದಾಗ ರೈತರ ಕೈಹಿಡಿದಿದ್ದು ವಾಣಿಜ್ಯ ಬೆಳೆಯಾಗಿರುವ ಅನಾನಸ್. ಇದಕ್ಕೆ ನಮ್ಮ ರಾಜ್ಯಕ್ಕಿಂತ ಹೊರರಾಜ್ಯದಲ್ಲೇ ಹೆಚ್ಚು ಬೇಡಿಕೆ. ಕೆ.ಜಿ.ಯೊಂದಕ್ಕೆ ಸರಾಸರಿ ₹ 15–20 ದರವಿತ್ತು. ಕೊರೊನಾ ಆತಂಕ ಆರಂಭವಾದ ಮೇಲೆ ಈ ದರ ₹ 10ಕ್ಕೆ ಇಳಿಕೆಯಾಯಿತು. ಈಗ ದರ ಕಡಿಮೆಯಾದರೂ ಚಿಂತೆಯಿಲ್ಲ, ಬೆಳೆ ಮಾರಾಟವಾದರೆ ಸಾಕು ಎಂಬಂತಾಗಿದೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

‘ಐದು ವರ್ಷಕ್ಕೆ ಲೀಸ್ ಮೇಲೆ ಪಡೆಯುವ ಭೂಮಿಗೆ ಅಧಿಕ ದರವಿರುತ್ತದೆ. ಒಮ್ಮೆ ತೊಡಗಿಸಿರುವ ಬಂಡವಾಳದ ಅಸಲು ಸರಿಹೊಂದಿ, ಲಾಭ ಪಡೆಯಲು ಎರಡ್ಮೂರು ಬೆಳೆಯಾದರೂ ಕೈಗೆ ಸಿಗಬೇಕು. ಶುಂಠಿ, ಬಾಳೆ, ಅನಾನಸ್ ಬೆಳೆದಿರುವ ರೈತರು ದಿಕ್ಕುತೋಚದಂತಾಗಿದ್ದಾರೆ’ ಎಂದು ಅವರು ಅಲವತ್ತುಕೊಂಡರು.

ಧವಸ–ಧಾನ್ಯವನ್ನು ಶೇಖರಿಸಿಟ್ಟು ಮಾರಾಟ ಮಾಡಬಹುದು. ಆದರೆ, ಅನಾನಸ್ ಬೆಳೆ ಉಳಿದ ಬೆಳೆಯಂತಲ್ಲ. ರೈತರಿಗೆ ತುಂಬಲಾರದ ನಷ್ಟ. ಈ ಕುರಿತು ಸರ್ಕಾರ ಕೂಡ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ ಎಂದು ಸ್ಥಳೀಯ ಶಾಸಕರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT