ಬುಧವಾರ, ಸೆಪ್ಟೆಂಬರ್ 22, 2021
25 °C

ರಾಮನಗರ: ಎರಡು ಸ್ಫೋಟಕ ಪತ್ತೆ; ಶಂಕಿತ ಉಗ್ರನ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ/ದೊಡ್ಡಬಳ್ಳಾಪುರ/ಬೆಂಗಳೂರು: ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬುಧವಾರ ರಾಮನಗರಕ್ಕೆ ಕರೆತಂದಿದ್ದು, ವಿವಿಧೆಡೆ ಶೋಧ ನಡೆಸಿತು. ಈ ಸಂದರ್ಭದಲ್ಲಿ ಸೀರಳ್ಳದಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿ ಆತಂಕ ಸೃಷ್ಟಿಸಿತು.

ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ಬಂಧನಕ್ಕೆ ಒಳಗಾಗಿದ್ದ ಆರೋಪಿಯನ್ನು ಎನ್‌ಐಎ ಹಾಗೂ ಕೇಂದ್ರ ಗುಪ್ತದಳದ ಅಧಿಕಾರಿಗಳು ಬೆಂಗಳೂರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದರು. ತಾನು ವರ್ಷದ ಹಿಂದೆ ರಾಮನಗರದಲ್ಲಿ ಬಾಂಬ್‌ಗಳನ್ನು ಬಿಸಾಡಿ ಹೋಗಿದ್ದಾಗಿ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ಬುಧವಾರ ರಾಮನಗರಕ್ಕೆ ಕರೆತಂದರು.

ಟಿಪ್ಪು ನಗರದ ಸೀರಳ್ಳದ ಸೇತುವೆಯ ಬಳಿ ಹಬೀಬುರ್‌ ರೆಹಮಾನ್‌ ತೋರಿಸಿದ ಜಾಗದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಐಇಡಿ ದೊರೆತವು. ಜೆಎಂಬಿ ಸಂಘಟನೆಗೆ ನಿಧಿ ಹೊಂದಿಸಲು ಕಳೆದ ವರ್ಷ ಬೆಂಗಳೂರಿನಲ್ಲಿ ಹಲವು ಡಕಾಯಿತಿಗಳನ್ನು ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಎನ್‌ಐಎ ಎಸ್ಪಿ ಶ್ರೀಶಾಂತ್‌ ಸಿನ್ಹಾ, ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿ ಎಸ್.ಕೆ. ಉಮೇಶ್‌ ನೇತೃತ್ವದ ತಂಡವು ತಪಾಸಣಾ ಕಾರ್ಯದಲ್ಲಿ ಭಾಗಿಯಾಯಿತು. ರಾಮನಗರ ಎಸ್ಪಿ ಚೇತನ್‌ಸಿಂಗ್ ರಾಥೋಡ್‌ ನೇತೃತ್ವದಲ್ಲಿ ಸ್ಥಳೀಯ ಪೊಲೀಸರು ತನಿಖಾಧಿಕಾರಿಗಳಿಗೆ ಸಾಥ್‌ ನೀಡಿದರು.

ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಇದಕ್ಕೂ ಮುನ್ನ ತನಿಖಾ ತಂಡ ರಾಮನಗರದ ಕೆಲ ಮನೆಗಳಿಗೂ ಹೋಗಿ ತಪಾಸಣೆ ಮಾಡಿತು.

ಜಹಿದುಲ್‌ ಇಸ್ಲಾಂನ ಸಹಚರ: ಹಬೀಬುರ್‌ ರೆಹಮಾನ್‌ ‘ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌’ (ಜೆಎಂಬಿ) ಸಂಘಟನೆಯ ನಾಯಕ ಜಹಿದುಲ್‌ ಇಸ್ಲಾಂನ ಸಹಚರ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.

ಅಲ್ಲದೆ, ಈತ ಜೆಎಂಬಿ ಮುಖಂಡರಾದ ರಹಮತ್‌ ಉಲ್ಲಾ ಎಸ್‌.ಕೆ ಅಲಿಯಾಸ್‌ ಸಾಜಿದ್‌ ಹಾಗೂ ಮೌಲಾನ ಯೂಸುಫ್‌ ಅವರ ಸಹಚರನೂ ಹೌದು. ಜೆಎಂಬಿ ಸಂಘಟಿಸಿದ್ದ ಕೆಲವು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದ. 2014ರ ಅಕ್ಟೋಬರ್‌ನಲ್ಲಿ ನಡೆದ ಬರ್ದ್ವಾನ್‌ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರ ಮಾರ್ಚ್‌ 30ರಂದು ಈತನ ವಿರುದ್ಧ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

2018ರ ಆಗಸ್ಟ್‌ನಲ್ಲಿ ಜಹಿದುಲ್‌ ಇಸ್ಲಾಂನನ್ನು ಎನ್‌ಐಎ ಅಧಿಕಾರಿಗಳು ರಾಮನಗರದಲ್ಲಿ ಬಂಧಿಸಿದ್ದರು. ಆದರೆ, ಹಬೀಬುರ್‌ ರೆಹಮಾನ್‌ ಐದು ವರ್ಷಗಳಿಂದ ಎನ್‌ಐಎ ಅಧಿಕಾರಿಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ. ಪೊಲೀಸ್‌ ಮೂಲಗಳ ಪ್ರಕಾರ, ಈತ ಪಟ್ಟಣಕ್ಕೆ ಒಂದೆರಡು ವಾರಗಳ ಹಿಂದೆಯಷ್ಟೇ ಬಂದಿದ್ದಾನೆ. ಇದಕ್ಕೂ ಮೊದಲು ಬೆಂಗಳೂರಿನ ಕೆ.ಆರ್‌. ಪುರಂನಲ್ಲಿ ಇದ್ದ.

ಮೌಲ್ವಿ ವಿಚಾರಣೆ: ಮಸೀದಿಯ ಮೌಲ್ವಿ ಅನ್ವರ್‌ ಹುಸೇನ್ ಇಮಾಮ್ ಅವರನ್ನು ಎನ್‌ಐಎ ಅಧಿಕಾರಿಗಳು ಈಗಾಗಲೇ ವಿಚಾರಣೆ ನಡೆಸಿದ್ದಾರೆ.

ಕರ್ನಾಟಕ ಉಗ್ರರ ಸ್ವರ್ಗವೇ?

ಉಗ್ರಗಾಮಿ ಸಂಘಟನೆಗಳ ಕೆಲವು ಸದಸ್ಯರು ಬೆಂಗಳೂರು ಸುತ್ತಮುತ್ತಲ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದರಿಂದ ‘ಕರ್ನಾಟಕ ಉಗ್ರರಿಗೆ ಸುರಕ್ಷಿತವೇ?’ ಎಂಬ ಪ್ರಶ್ನೆ ಎದ್ದಿದೆ.

ಕಳೆದ ಒಂದು ವರ್ಷದಲ್ಲಿ ಎನ್‌ಐಎ ಅಧಿಕಾರಿಗಳು ‘ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌’ ಸಂಘಟನೆಯ ಇಬ್ಬರು ಸದಸ್ಯರನ್ನು ರಾಮನಗರ ಮತ್ತು ದೊಡ್ಡಬಳ್ಳಾಪುರದಲ್ಲಿ ಬಂಧಿಸಿದ್ದಾರೆ. ಆದರೆ, ರಾಮನಗರದಲ್ಲಿ ಬಂಧಿತನಾದ ಜಹಿದುಲ್‌ ಇಸ್ಲಾಂನ ಕುಟುಂಬದ ಉಳಿದ ಸದಸ್ಯರು ‍ಪರಾರಿಯಾಗಿದ್ದರು.

ಇದಲ್ಲದೆ, ಕಳೆದ ವರ್ಷದ ಜುಲೈನಲ್ಲಿ ‘ಐಸಿಸ್‌’ ಜೊತೆ ಸಂಪರ್ಕ ಹೊಂದಿದ್ದಾರೆನ್ನಲಾದ ಆರು ಉಗ್ರರನ್ನು ಬಂಧಿಸಲಾಗಿತ್ತು. ಈ ಕಾರಣಕ್ಕೆ ಇಡೀ ದೇಶ ಕರ್ನಾಟಕದತ್ತ ನೋಡಿತ್ತು. ಈ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗಿವೆ. 

ಆದರೆ, ‘ಒಂದಿಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ತಕ್ಷಣ ಕರ್ನಾಟಕ ಉಗ್ರರಿಗೆ ಸುರಕ್ಷಿತ ತಾಣ ಎಂದು ಹೇಳಲು ಸಾಧ್ಯವಿಲ್ಲ. ಬೆಂಗಳೂರು ಕಾಸ್ಮೊಪಾಲಿಟನ್‌ ಸಿಟಿ. ಪ್ರತಿನಿತ್ಯ ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ. ಯಾರು ಬರುತ್ತಾರೆ? ಯಾರು ಹೋಗುತ್ತಾರೆ? ಎಲ್ಲಿಂದ ಬರುತ್ತಾರೆ? ಎಲ್ಲಿ ಇರುತ್ತಾರೆಂದು ಪತ್ತೆ ಹಚ್ಚುವುದು ಕಷ್ಟ’ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು