ಮಂಗಳವಾರ, ಜುಲೈ 14, 2020
27 °C
ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ 8 ಮಂದಿಗೆ ಸೋಂಕು; ರೋಗಿಗಳ ಸಂಖ್ಯೆ 26ಕ್ಕೆ ಏರಿಕೆ

ಮುಂಬೈನಿಂದ ಮಂಡ್ಯಕ್ಕೆ ಶವ ಸಾಗಿಸಿದ ನಾಲ್ವರು ಕುಟುಂಬ ಸದಸ್ಯರಿಗೆ ಕೋವಿಡ್‌ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಮುಂಬೈನಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಪಾಂಡವಪುರ ತಾಲ್ಲೂಕಿನ ಬಿ.ಕೊಡಗಳ್ಳಿ ಗ್ರಾಮಕ್ಕೆ ಆಂಬುಲೆನ್ಸ್‌ ಮೂಲಕ ಸಾಗಿಸಲಾಗಿದ್ದು  ಜೊತೆಯಲ್ಲಿ ಬಂದ ನಾಲ್ವರು ಕುಟುಂಬ ಸದಸ್ಯರಿಗೆ ಕೋವಿಡ್‌– 19 ಶುಕ್ರವಾರ ದೃಢಪಟ್ಟಿದೆ.

ಮೃತಪಟ್ಟ ವ್ಯಕ್ತಿಯ ಪುತ್ರ, ಇಬ್ಬರು ಪುತ್ರಿಯರು (ಒಬ್ಬರು ಕೆ.ಆರ್‌.ಪೇಟೆ ನಿವಾಸಿ) ಹಾಗೂ 2.7 ವರ್ಷದ ಮೊಮ್ಮಗನಲ್ಲಿ ಸೋಂಕು ಪತ್ತೆಯಾಗಿದೆ. 

ಮುಂಬೈನ ಸಾಂತಾಕ್ರೂಸ್‌ ನಿವಾಸಿಯಾಗಿದ್ದ ವ್ಯಕ್ತಿ ಹೃದಯಾಘಾತದಿಂದ ಏ.23ರಂದು ಮೃತಪಟ್ಟಿದ್ದರು. ಬಿ.ಕೊಡಗಳ್ಳಿ ಗ್ರಾಮಕ್ಕೆ ಶವ ತಂದು ಏ.24ರಂದು ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.

ಶವಸಂಸ್ಕಾರದಲ್ಲಿ ಪಾಲ್ಗೊಂಡ ಎಲ್ಲರನ್ನೂ ತಕ್ಷಣವೇ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಏ.28ರಂದು ಎಲ್ಲರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ನಾಲ್ವರಲ್ಲಿ ಸೋಂಕು ದೃಢಪಟ್ಟಿದ್ದು ಆಂಬುಲೆನ್ಸ್‌ನಲ್ಲಿ ಪ್ರಯಾಣಿಸಿದ್ದ ಮೃತ ವ್ಯಕ್ತಿಯ ಪತ್ನಿಗೆ ನೆಗೆಟಿವ್‌ ಬಂದಿದೆ.

ಹೃದಯಾಘಾತ ಕಾರಣ: ‘ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದು ಬೃಹತ್‌ ಮುಂಬೈ ಮಹಾನಗರ ಪಾಲಿಕೆ ದೃಢೀಕರಿಸಿದೆ. ಪಾಲಿಕೆ ಪಾಸ್‌ ಪಡೆದು ಮಹಾರಾಷ್ಟ್ರದ ಆಂಬುಲೆನ್ಸ್‌ನಲ್ಲೇ ಶವ ಸಾಗಣೆ ಮಾಡಲಾಗಿದೆ. ದಾಖಲಾತಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಮಹಾರಾಷ್ಟ್ರ ಪಾಲಿಕೆಗೆ ಪತ್ರ ಬರೆಯಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

‘ಮೃತದೇಹ ಕೆಡದಂತೆ ಸಂರಕ್ಷಿಸಿ (ಎಂಬಾಲ್ಮಿಂಗ್) ಕಳುಹಿಸಲಾಗಿತ್ತು. ಹೀಗಾಗಿ ಸ್ಥಳೀಯವಾಗಿ ಯಾವುದೇ ಪರೀಕ್ಷೆ ಮಾಡಿಲ್ಲ.  ಆರೋಗ್ಯ ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡಿದ್ದು ಸಂಸ್ಕಾರದಲ್ಲಿ ಪಾಲ್ಗೊಂಡ ಎಲ್ಲರನ್ನೂ ಕ್ವಾರಂಟೈನ್‌ ಮಾಡಿದ್ದರು’ ಎಂದರು.

26ಕ್ಕೆ ಏರಿಕೆ: ಜಿಲ್ಲೆಯಲ್ಲಿ ಒಂದೇ ದಿನ 8 ರೋಗಿಗಳಲ್ಲಿ ರೋಗ ಪತ್ತೆಯಾಗಿದ್ದು ರೋಗಿಗಳ ಸಂಖ್ಯೆ 26ಕ್ಕೆ ಏರಿಕೆ. ದೆಹಲಿ ಧರ್ಮಗುರುಗಳ ಜೊತೆ ನಂಟು ಹೊಂದಿದ್ದ 179ನೇ ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರಿಗೆ ಕೋವಿಡ್‌ ದೃಢಪಟ್ಟಿದೆ. ಮಳವಳ್ಳಿ ಪಟ್ಟಣವೊಂದರಲ್ಲೇ 19 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 7 ಮಂದಿ ಗುಣಮುಖವಾಗಿದ್ದಾರೆ.

ಸಚಿವ ಕೆ.ಸಿ.ನಾರಾಯಣಗೌಡ ಸಹಾಯ?

ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಅವರ ಸಹಾಯದಿಂದ ಮೃತ ವ್ಯಕ್ತಿಯ ಕುಟುಂಬ ಸದಸ್ಯರು ರಹಸ್ಯವಾಗಿ ಶವ ಸಾಗಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಲಾಕ್‌ಡೌನ್‌ ಘೋಷಣೆಯಾದ ನಂತರವೂ ಮುಂಬೈನಿಂದ ಕೆ.ಆರ್‌.ಪೇಟೆ, ನಾಗಮಂಗಲ ತಾಲ್ಲೂಕಿಗೆ ಹಲವು ಬಸ್‌ಗಳು ಬಂದಿವೆ. ಸಚಿವರೇ ಬಸ್‌ ವ್ಯವಸ್ಥೆ ಮಾಡಿಸಿದ್ದಾರೆ. ವಲಸಿಗರನ್ನು ತಡೆಯಲು ಜಿಲ್ಲಾಡಳಿತ ವಿಫಲವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಚಿವರನ್ನು ಸಂಪರ್ಕಿಸಿದಾಗ ಅವರ ಮೊಬೈಲ್‌ ಸ್ಥಗಿತಗೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು