ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ನಟಿ– ನಟನ ನಡುವೆ ಹಣಾಹಣಿ, ಆಕರ್ಷಣೆಯ ಕೇಂದ್ರಬಿಂದು

ಇದೇ ಮೊದಲ ಬಾರಿಗೆ ಎದುರಾಳಿಗಳಿಬ್ಬರೂ ಸಿನಿಮಾ ಕಲಾವಿದರು
Last Updated 18 ಮಾರ್ಚ್ 2019, 20:19 IST
ಅಕ್ಷರ ಗಾತ್ರ

ಮಂಡ್ಯ: ಸಿನಿಮಾ ನಟರ ಸ್ಪರ್ಧೆಯಿಂದ ಗಮನ ಸೆಳೆದಿದ್ದ ಮಂಡ್ಯ ಲೋಕಸಭೆ ಕ್ಷೇತ್ರ, ಈಗ ತನ್ನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಹಿರಿಯ ನಟಿ ಸುಮಲತಾ ವಿರುದ್ಧ ಕಿರಿಯ ನಟ ನಿಖಿಲ್‌ ಕುಮಾರಸ್ವಾಮಿ ಮುಖಾಮುಖಿಯಾಗಲಿದ್ದು, ಗಮನ ಸೆಳೆಯುವ ‘ಅಗ್ರಗಣ್ಯ ಕ್ಷೇತ್ರ’ವಾಗಿ ಗುರುತಿಸಿಕೊಂಡಿದೆ.

ಸಿನಿಮಾ ಕಲಾವಿದರೇ ಪರಸ್ಪರ ಎದುರಾಗಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೊದಲು ಒಂದು ಪಕ್ಷದ ಅಭ್ಯರ್ಥಿ ಮಾತ್ರ ನಟರಾಗಿರುತ್ತಿದ್ದರು. ಆದರೆ ಈ ಚುನಾವಣೆಯಲ್ಲಿ ಇಬ್ಬರು ಸಿನಿಮಾ ಕಲಾವಿದರ ನಡುವೆ ಹಣಾಹಣಿ ಏರ್ಪಡಲಿದೆ. 1998ರಲ್ಲಿ ಮೊದಲ ಬಾರಿಗೆ ಅಂಬರೀಷ್‌ ಸ್ಪರ್ಧೆ ಮಾಡುವುದರೊಂದಿಗೆ ಕ್ಷೇತ್ರಕ್ಕೆ ಸಿನಿಮಾ ನಟರ ದರ್ಶನವಾಯಿತು. ನಂತರ 2013ರ ವರೆಗೂ ಹಲವು ಚುನಾವಣೆಯಲ್ಲಿ ಸ್ಪರ್ಧಿಸಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾದರು.

2013ರ ಲೋಕಸಭಾ ಉಪ ಚುನಾವಣೆಯಲ್ಲಿ ನಟಿ ರಮ್ಯಾ ಮಂಡ್ಯ ಪ್ರವೇಶ ಮಾಡಿದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲುಂಡರು. ಹಿಂದೆ ಅಂಬರೀಷ್‌, ರಮ್ಯಾ ಸ್ಪರ್ಧೆಯಿಂದಾಗಿ ಜಿಲ್ಲೆ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಈಗ ಪಂಚಭಾಷಾ ನಟಿ, ಅಂಬರೀಷ್ ಪತ್ನಿ ಸುಮಲತಾ ಮಂಡ್ಯ ರಾಜಕಾರಣಕ್ಕೆ ಬಂದಿದ್ದು ಮತ್ತೊಮ್ಮೆ ಸಿನಿಮಾ ರಂಗು ಪಡೆದುಕೊಂಡಿದೆ. ಎರಡು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಅವರು ಸುಮಲತಾಗೆ ಎದುರಾಳಿಯಾಗಿದ್ದಾರೆ.

‘ಮಂಡ್ಯ ಜಿಲ್ಲೆಯ ಜನರು ಸಿನಿಮಾ ಆಕರ್ಷಣೆಗೆ ಮಾರು ಹೋಗುತ್ತಾರೆ ಎಂಬ ಕಾರಣಕ್ಕಾಗಿಯೇ ಮುಖ್ಯಮಂತ್ರಿ ತಮ್ಮ ಮಗನನ್ನು ನಾಯಕ ನಟನನ್ನಾಗಿ ಮಾಡಿದ್ದಾರೆ. ಆ ಮೂಲಕ ಸಂಸದರನ್ನಾಗಿ ನೋಡುವ ಕನಸು ಕಂಡಿದ್ದಾರೆ’ ಎಂದು ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT