ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕಾ ಮಾತಿಗೆ ಮತ ಬಾರದು: ರಾಮ್‌ ವಿಲಾಸ್‌ ಪಾಸ್ವಾನ್‌

Last Updated 25 ಏಪ್ರಿಲ್ 2019, 6:33 IST
ಅಕ್ಷರ ಗಾತ್ರ

ಬಿಹಾರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ, ದಲಿತ ನಾಯಕ ರಾಮ್‌ ವಿಲಾಸ್‌ ಪಾಸ್ವಾನ್‌ 50ಕ್ಕೂ ಹೆಚ್ಚು ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. 1989ರಿಂದ ಕೇಂದ್ರದ ವಿವಿಧ ಸರ್ಕಾರಗಳಲ್ಲಿ ಅವರು ಸಚಿವರಾಗಿದ್ದಾರೆ. ರಾಜಕಾರಣದ ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ ಎಂಬುದನ್ನು ಬೇಗನೆ ಗುರುತಿಸಬಲ್ಲ ಚತುರ. ಈ ಬಾರಿಯ ಲೋಕಸಭಾ ಚುನಾವಣೆಯ ದಿಕ್ಕು ದೆಸೆ ಮತ್ತು ದಲಿತ ರಾಜಕಾರಣದ ಬಗ್ಗೆ ತಮ್ಮ ಯೋಚನೆಗಳನ್ನು ‘ಪ್ರಜಾವಾಣಿ’ ಜತೆಗಿನ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

* ನೀವು ರಾಜಕಾರಣದಲ್ಲಿರುವ 50 ವರ್ಷಗಳಲ್ಲಿ ದಲಿತ ರಾಜಕಾರಣ ವಿಕಾಸವಾದ ಬಗೆ ಹೇಗೆ?

1977ರಲ್ಲಿ ಬೆಲ್ಚಿಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿತ್ತು. 1969ರಲ್ಲಿಯೇ ನಾನು ಶಾಸಕ ಆಗಿದ್ದೆ. ಶಿಕ್ಷಣ ಪೂರ್ತಿಗೊಳಿಸಿದ್ದ ಕೂಡಲೇ ನನಗೆ ಡಿವೈಎಸ್‌ಪಿ ಕೆಲಸ ಸಿಕ್ಕಿತ್ತು. ಆದರೆ, ನಾನು ಹೇಗೋ ರಾಜಕಾರಣಕ್ಕೆ ಬಂದೆ, ಚುನಾವಣೆಯಲ್ಲಿ ಗೆದ್ದೆ.

ದಲಿತ ರಾಜಕಾರಣವನ್ನು ಮೂರು ಹಂತಗಳಲ್ಲಿ ಗುರುತಿಸಬಹುದು. ಅಸ್ಪೃಶ್ಯರು ಎಂದು ಕರೆಯುತ್ತಿದ್ದ ಈ ಜನರಿಗೆ ಗಾಂಧೀಜಿಯವರು ಹರಿಜನ ಎಂಬ ಹೆಸರಿಟ್ಟರು. ಆದರೆ, ದಕ್ಷಿಣ ಭಾರತದ ದೇವಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ದೇವದಾಸಿಯರ ಮಕ್ಕಳನ್ನೂ ಹರಿಜನ ಎಂದು ಕರೆಯಲಾಗುತ್ತಿತ್ತು. ಇದು ವಿವಾದಕ್ಕೆ ಕಾರಣವಾಯಿತು.

ಬಳಿಕ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಪರಿಶಿಷ್ಟ ಜಾತಿ ಎಂಬ ಹೆಸರು ಕೊಟ್ಟರು. ಇದು ಬಹಳ ಉದ್ದದ ಹೆಸರು ಎಂಬ ಕಾರಣಕ್ಕೆ ‘ದಲಿತ’ ಪದ ಅಸ್ತಿತ್ವಕ್ಕೆ ಬಂತು. 50 ವರ್ಷ ಹಿಂದೆ ದಲಿತರ ಸ್ಥಿತಿ ಬಹಳ ಕೆಟ್ಟದಾಗಿತ್ತು. ಇತರರ ಮುಂದೆ ಕುಳಿತುಕೊಳ್ಳುವ ಧೈರ್ಯ ಈ ಸಮುದಾಯದವರಿಗೆ ಇರಲಿಲ್ಲ. ಗ್ರಾಮಗಳಲ್ಲಿ ನಡೆದು ಹೋಗುವಾಗ ಅವರು ತಮ್ಮ ಚಪ್ಪಲಿ ತೆಗೆದು ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದರು. ಇಂದಿಗೂ, ಮದುವೆಯಲ್ಲಿ ಕುದುರೆ ಸವಾರಿಯ ಅವಕಾಶ ದಲಿತರಿಗೆ ಇಲ್ಲ ಎಂಬುದನ್ನು ನೀವು ಕೇಳಿರುತ್ತೀರಿ. ನಾನು ಸಂಸತ್ತಿಗೆ ಪ್ರವೇಶಿಸಿದ ಮೊದಲ ದಿನಗಳಲ್ಲಿ ದಲಿತರ ಮೇಲಿನ ದೌರ್ಜನ್ಯದ ವಿಷಯ ಪ್ರಸ್ತಾಪಿಸದ ದಿನಗಳೇ ಇರುತ್ತಿರಲಿಲ್ಲ. ಅಂಬೇಡ್ಕರ್‌ ಅವರ ಭಾವಚಿತ್ರ ಬಹಳ ಕಾಲ ಸಂಸತ್‌ ಭವನದಲ್ಲಿ ಇರಲಿಲ್ಲ.

* ರೋಹಿತ್‌ ವೇಮುಲ ಪ್ರಕರಣ ಇರಲಿ, ಊನಾದಲ್ಲಿ ದಲಿತರ ಮೇಲಿನ ಹಲ್ಲೆ ಇರಲಿ, ನಿಮ್ಮ ಪಾಲುದಾರ ಪಕ್ಷ ಬಿಜೆಪಿಯ ಬಗ್ಗೆ ದಲಿತ ಸಮುದಾಯಕ್ಕೆ ಅತೃಪ್ತಿ ಇದೆಯಲ್ಲ...

ಇದೊಂದು ತಪ್ಪು ಗ್ರಹಿಕೆ. ಜನರು ನರೇಂದ್ರ ಮೋದಿ ಅವರನ್ನು ಬಿಜೆಪಿಯ ಜತೆಗಿಟ್ಟು, ಬಿಜೆಪಿಯನ್ನು ಆರ್‌ಎಸ್‌ಎಸ್‌ ಜತೆಗಿಟ್ಟು ನೋಡುವುದೇ ಇದಕ್ಕೆ ಕಾರಣ. ಆರ್‌ಎಸ್‌ಎಸ್‌ನ ಜಾತಿ ಶ್ರೇಣೀಕರಣ (ವರ್ಣ ವ್ಯವಸ್ಥೆ) ಇದಕ್ಕೆ ಕಾರಣ. ಕಳೆದ ಐದು ವರ್ಷಗಳಲ್ಲಿ ದಲಿತರಿಗಾಗಿ ಮಾಡಿರುವ ಕೆಲಸಗಳಿಗೆ ಹೋಲಿಕೆಯೇ ಇಲ್ಲ. ಹಿಂದೆ ಎಂದೂ ಇಷ್ಟು ಕೆಲಸ ಆಗಿರಲಿಲ್ಲ. ಮೋದಿ ಅವರ ಉದಾಹರಣೆಯನ್ನೇ ತೆಗೆದುಕೊಳ್ಳೋಣ, ಅವರು ಬ್ರಾಹ್ಮಣ ಅಲ್ಲ, ಮೇಲ್ಜಾತಿಗೆ ಸೇರಿದವರೂ ಅಲ್ಲ. ಅವರು ಅತ್ಯಂತ ಹಿಂದುಳಿದ ಜಾತಿಯವರು. ಅವರು ಆರ್‌ಎಸ್‌ಎಸ್‌ನಲ್ಲಿ ಇದ್ದವರು. ಇದೆಲ್ಲ ಹೇಗಾಗುತ್ತದೆ ಎಂಬುದು ಅವರಿಗೆ ಗೊತ್ತು. ಅವರು ಮಾತನಾಡುವುದಿಲ್ಲ, ಕೆಲಸ ಮಾಡುತ್ತಾರೆ.

* ಉತ್ತರ ಪ್ರದೇಶದಲ್ಲಿ ನಿಮಗೆ ಚಿಂತೆ ಇದೆಯೇ?

ಚಿಂತೆಗೆ ಕಾರಣ ಇದೆ ಎಂದು ನನಗೆ ಅನಿಸುತ್ತಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಮೋದಿ ಅವರ ಕಾಲದಲ್ಲಿ ಕುಸಿದಿದೆ ಎಂದು ಯಾರೂ ಹೇಳುವಂತಿಲ್ಲ. ಬಡವರಿಗೆ ಬೇಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಮನೆಗಳು, ಗ್ಯಾಸ್‌ ಸಿಲಿಂಡರ್‌, ಶೌಚಾಲಯ, ₹2ಕ್ಕೆ ಗೋಧಿ, ₹3ಕ್ಕೆ ಅಕ್ಕಿ ಎಲ್ಲವೂ ಇವೆ.

* ಚುನಾವಣೆ ಫಲಿತಾಂಶ ಹೇಗಾಗಬಹುದು?

ಈ ಎಲ್ಲ ಯೋಜನೆಗಳು ಈಗ ಇವೆ. ಆದರೆ, ಮತವಾಗಿ ಅವು ಹೇಗೆ ಪರಿವರ್ತನೆ ಆಗಿದೆ ಎಂಬುದನ್ನು ಫಲಿತಾಂಶವೇ ಹೇಳಬೇಕು. ದೇಶದ ಜನರು ಮಾತನಾಡುವುದಿಲ್ಲ. ಕಾಂಗ್ರೆಸ್‌ನ ಇಡೀ ಸಿಂಡಿಕೇಟ್‌ ವಿರುದ್ಧವಿದ್ದರೂ ಇಂದಿರಾ ಗಾಂಧಿ ಅವರು ‘ಗರೀಬಿ ಹಠಾವೊ’ ಘೋಷಣೆ ಹೊರಡಿಸಿದಾಗ ಜನ ಅದನ್ನು ನಂಬಿದರು. ಈಗಿನ ಸರ್ಕಾರದ ಎಲ್ಲ ಯೋಜನೆಗಳೂ ಬಡವರಪರ. ಇತ್ತೀಚಿನ ಕೆಲವು ಘಟನೆಗಳ ಬಳಿಕ ಈ ದೇಶಕ್ಕೆ ದುರ್ಬಲ ಪ್ರಧಾನಿ ಬೇಡ ಎಂಬ ನಿಲುವಿಗೆ ಜನರು ಬಂದಿದ್ದಾರೆ.

* ಪ್ರಿಯಾಂಕಾ ರಾಜಕೀಯ ಪ್ರವೇಶದ ಪರಿಣಾಮ ಏನು?

ಪ್ರಿಯಾಂಕಾ ಅವರನ್ನು ನೋಡಲು, ಅವರ ಮಾತು ಕೇಳಲು ಜನರು ಬರುತ್ತಾರೆ. ಆದರೆ, ಬಿಹಾರ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಜಾತಿಯೇ ಮುಖ್ಯ. ಪ್ರಿಯಾಂಕಾ ರಾಜಕೀಯಕ್ಕೆ ಹೊಸಬರು. ಅವರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಅವರು ಯಾವ ಮಟ್ಟದ ಪ್ರಭಾವ ಬೀರಬಹುದು ಎಂಬ ಬಗ್ಗೆ ನನಗೆ ಅನುಮಾನ ಇದೆ. ಜಾತಿ ಆಧಾರದಲ್ಲಿ ಮತ ಚಲಾವಣೆ ಆಗುವುದನ್ನು ಅವರು ಬದಲಾಯಿಸಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ. ಪ್ರಿಯಾಂಕಾ ಅವರ ಮಾತು ಕೇಳಲು ಬಂದ ಜನರು ಮನೆಗೆ ಹೋದ ಮೇಲೆ ತಮ್ಮ ಮತವನ್ನು ಯಾಕೆ ಹಾಳು ಮಾಡಬೇಕು ಎಂದು ಯೋಚಿಸುತ್ತಾರೆ.

* ಪ್ರಿಯಾಂಕಾ ಮಾತು ಕೇಳುವುದಕ್ಕಾಗಿಯೇ ಜನರು ಯಾಕೆ ಬರಬೇಕು?

ನಿಮಗೆ ನಾನೊಂದು ಉದಾಹರಣೆ ಕೊಡುತ್ತೇನೆ. ನಾನು ಹಾಜಿಪುರದಲ್ಲಿ ಸ್ಪರ್ಧಿಸಿದ್ದೆ. ನನ್ನ ವಿರುದ್ಧ ಪ್ರಚಾರಕ್ಕೆ ಇಂದಿರಾ ಗಾಂಧಿ ಬಂದಿದ್ದರು. ಮೂರು ಲಕ್ಷಕ್ಕೂ ಹೆಚ್ಚು ಜನರು ಇಂದಿರಾ ಅವರನ್ನು ನೋಡಲು, ಅವರ ಮಾತು ಕೇಳಲು ಸೇರಿದ್ದರು. ಆದರೆ, ಫಲಿತಾಂಶ ಬಂದಾಗ ಅವರ ಪಕ್ಷದ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದರು. ನಾನು ಭಾರಿ ಬಹುಮತದಿಂದ ಗೆದ್ದೆ. ನನ್ನ ಹೆಸರು ಗಿನ್ನಿಸ್‌ ದಾಖಲೆ ಪುಸ್ತಕ ಸೇರಿತು. ಪ್ರಚಾರ ಭಾಷಣಕ್ಕೆ ಸೇರುವ ಜನರೆಲ್ಲರೂ ಮತ ಹಾಕುತ್ತಾರೆ ಎಂಬ ನನ್ನ ಭ್ರಮೆ ಅದರೊಂದಿಗೆ ಕಳಚಿತು.

* ಈ ಬಾರಿ ಪ್ರಾದೇಶಿಕ ಪಕ್ಷವೊಂದರ ಮುಖ್ಯಸ್ಥರು ಪ್ರಧಾನಿಯಾಗಬಹುದೇ?

ನನಗೆ ಹಾಗೆ ಅನಿಸುತ್ತಿಲ್ಲ. ಭಾರಿ ಬಹುಮತದೊಂದಿಗೆ ಎನ್‌ಡಿಎ ಅಧಿಕಾರಕ್ಕೆ ಮರಳಲಿದೆ. ಮೋದಿ ಅವರೇ ಮತ್ತೆ ಪ್ರಧಾನಿಯಾಗಲಿ
ದ್ದಾರೆ. ಹಿಂದೆ ಸಿಕ್ಕಷ್ಟೇ ಮತಗಳು ನಮಗೆ ಸಿಗಲಿವೆ. ಎನ್‌ಡಿಎ ಬಲ 300 ಸ್ಥಾನಗಳನ್ನು ಮೀರಲಿದೆ.

* 300 ಸ್ಥಾನಗಳ ಲೆಕ್ಕಾಚಾರ ಹೇಗೆ ವಿವರಿಸಬಹುದೇ?

ಈಶಾನ್ಯ ಭಾರತವನ್ನು ತೆಗೆದುಕೊಳ್ಳಿ, ಅಲ್ಲಿ ನಾವು ಇರಲೇ ಇಲ್ಲ. ಈಗ, ಬಹುತೇಕ ಈಶಾನ್ಯದಲ್ಲಿ ನಾವು ಅಧಿಕಾರಲ್ಲಿದ್ದೇವೆ. ಮೂರು ರಾಜ್ಯಗಳಲ್ಲಿ ಎನ್‌ಡಿಎ ಸೋತಿದೆ. ಆದರೆ, ದೊಡ್ಡ ಅಂತರದ ಸೋಲು ಅಲ್ಲ. ಮತ ಪ್ರಮಾಣವಂತೂ ಬಹುತೇಕ ಸಮಾನವಾಗಿಯೇ ಇದೆ. ಮತದಾನದ ಹೊತ್ತಿಗೆ ಈಗ ಅಲ್ಲಿ ಅಧಿಕಾರಕ್ಕೆ ಬಂದವರ ಜನಪ್ರಿಯತೆ ಕುಸಿಯಲಿದೆ. ಎಲ್ಲೆಡೆಯ ಲೆಕ್ಕಾಚಾರವನ್ನು ಒಂದುಗೂಡಿಸಿದರೆ ಎನ್‌ಡಿಎಗೆ ಬಹುಮತ ದೊರೆಯುವುದು ನಿಚ್ಚಳ.

* ದಲಿತ ಸಮುದಾಯವು ಹೇಗೆ ಮತ ಹಾಕಲಿದೆ? ಬಿಜೆಪಿಯನ್ನು ಮಣಿಸಲೇಬೇಕು ಎಂದು ಹೊರಟಿರುವ ಮಾಯಾವತಿ ಅವರ ಪಕ್ಷಕ್ಕೆ ಮತ ಹಾಕಲಿದೆಯೇ? ಎನ್‌ಡಿಎ ಈ ಸವಾಲನ್ನು ಎದುರಿಸಲಿದೆಯೇ?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಮತ ದೊರೆಯುತ್ತದೆ. ಪರಿಶಿಷ್ಟ ಜಾತಿಯಲ್ಲಿ ನೂರಕ್ಕೂ ಹೆಚ್ಚು ಉಪಜಾತಿಗಳಿವೆ. ಪರಿಶಿಷ್ಟ ಜಾತಿ ಎಂಬುದು ಜಾತಿಗಳ ಒಂದು ಗುಂಪು. ನನ್ನಂತಹ ಹಲವು ಮಂದಿ ನಾಯಕರಿದ್ದಾರೆ. ಒಂದೊಂದು ಜಾತಿಯೂ ಆ ಜಾತಿಯ ನಾಯಕನ ಪಕ್ಷಕ್ಕೆ ಮತ ಹಾಕುತ್ತದೆ. ಜಾಟವ್‌ ಜಾತಿಗೆ ಸೇರಿದ ಮಾಯಾವತಿಗೆ ಆ ಜಾತಿಯ ಮತ ಸಿಗುತ್ತದೆ. ಒಬ್ಬ ನಾಯಕ ಅಥವಾ ನಾಯಕಿಗೆ ಎಲ್ಲ ದಲಿತರೂ ಮತ ಹಾಕುವುದಿಲ್ಲ.

ಉತ್ತರ ಪ್ರದೇಶದ ಹೊರಗೆ ಮಾಯಾವತಿಗೆ ಯಾವ ಪ್ರಭಾವವೂ ಇಲ್ಲ. ಅವರು ಹಲವು ರಾಜ್ಯಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಷ್ಟು ಕ್ಷೇತ್ರ ಸಿಗಬಹುದು ಅವರಿಗೆ? ಕರ್ನಾಟಕದಲ್ಲಿಯೂ ಅವರ ಪಕ್ಷ ಸ್ಪರ್ಧಿಸುತ್ತಿದೆ. ಅಲ್ಲಿ ಎಷ್ಟು ಕ್ಷೇತ್ರ ಗೆಲ್ಲಬಹುದು? ಮಾಯಾವತಿ ಅವರ ಜಾತಿಯ ಮತಗಳ ಜತೆಗೆ ಬೇರೆ ಜಾತಿಗಳ ಮತಗಳು ಸೇರಿದರೆ ಮಾತ್ರ ಅವರು ಸವಾಲು ಅನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT