ಆಪರೇಷನ್ ಕಮಲ: ‘ಕಾಂಗ್ರೆಸ್‌ನಲ್ಲಿ ಅಸಮಾಧಾನವಿರುವ 7–8 ಶಾಸಕರು ಹೋದರೂ ಹೋಗಬಹುದು’

7
ಶಾಸಕ ಸತೀಶ ಜಾರಕಿಹೊಳಿ

ಆಪರೇಷನ್ ಕಮಲ: ‘ಕಾಂಗ್ರೆಸ್‌ನಲ್ಲಿ ಅಸಮಾಧಾನವಿರುವ 7–8 ಶಾಸಕರು ಹೋದರೂ ಹೋಗಬಹುದು’

Published:
Updated:

ಬೆಳಗಾವಿ: ‘ತಮ್ಮ ಕಡೆ ಬರುವಂತೆ ಕಳೆದ ಆರು ತಿಂಗಳಿನಿಂದಲೂ ಬಿಜೆಪಿಯವರು ಆಮಿಷವೊಡ್ಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಅಸಮಾಧಾನವಿರುವ 7–8 ಜನ ಶಾಸಕರು ಹೋದರೂ ಹೋಗಬಹುದು. ಆದರೆ, ನಾನು ಹೋಗುವುದಿಲ್ಲ’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಸಹಜವಾದುದು. ಹಾಗಂತ ಎಲ್ಲರೂ ಪಕ್ಷ ಬಿಟ್ಟು ಹೋಗುತ್ತಾರೆ ಎಂದರ್ಥವಲ್ಲ ಎಂದು ನುಡಿದರು.

ಪಕ್ಷದಲ್ಲಿ ಅಸಮಾಧಾನಗೊಂಡ 7–8 ಜನ ಶಾಸಕರು ಇದ್ದಾರೆ. ಅವರನ್ನು ಸಮಾಧಾನ ಪಡಿಸುವ ಕೆಲಸವನ್ನು ವರಿಷ್ಠರು ಮಾಡಬೇಕು. ಅವರು ಬಿಟ್ಟು ಹೋದರೆ ಸರ್ಕಾರಕ್ಕೇನೂ ತೊಂದರೆಯಾಗಲ್ಲ. ಆದರೆ, 25 ಶಾಸಕರು ಹೋದರೆ ತೊಂದರೆಯಾಗುತ್ತದೆ ಎಂದು ಹೇಳಿದರು.

ಆಡಿಯೊ ಕ್ಲಿಪ್‌ ಇವತ್ತಿನಿಂದಲ್ಲ: ಶ್ರೀರಾಮುಲು ಆಪ್ತ ಹಾಗೂ ದುಬೈ ಉದ್ಯಮಿ ಎನ್ನಲಾದ ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆಯ ಆಡಿಯೊ ಕ್ಲಿಪ್‌ ಬಹಿರಂಗಗೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಆಡಿಯೊ ಕ್ಲಿಪ್‌ ಇವತ್ತಿನಿಂದಲ್ಲ, 6 ತಿಂಗಳು ಹಿಂದಿನದ್ದು. ಸರ್ಕಾರ ರಚನೆಯಾದಾಗಿನಿಂದಲೂ ಇಂತಹ ಆಮಿಷಗಳು ಬರುತ್ತಿವೆ. ದುಡ್ಡು ಕೊಡುತ್ತೇವೆ, ಸಚಿವ ಸ್ಥಾನ ನೀಡುತ್ತೇವೆ ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಎಂದು ಆಹ್ವಾನ ನೀಡಲಾಗುತ್ತಿದೆ. ಆದರೆ, ನಾವು ಯಾರೂ ಹೋಗುವುದಿಲ್ಲ’ ಎಂದರು.

ಆಕಾಂಕ್ಷಿಯಲ್ಲ: ಸರ್ಕಾರ ರಚನೆಯಾಗಿ 6 ತಿಂಗಳು ಆಯ್ತು. ಬಾಕಿ ಉಳಿದಿರುವ ಸಚಿವ ಸ್ಥಾನಗಳನ್ನು ಬೇಗನೇ ಭರ್ತಿ ಮಾಡಿದರೆ ಒಳ್ಳೆಯದು. ಆಡಳಿತ ದೃಷ್ಟಿಯಿಂದಲೂ ಸಹಕಾರಿಯಾಗುತ್ತದೆ. ಇದರ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.

‘ಬೆಳಗಾವಿ ಅಧಿವೇಶನ ಆರಂಭವಾಗುವುದಕ್ಕಿಂತ ಮೊದಲು ಸಚಿವ ಸಂಪುಟ ವಿಸ್ತರಣೆಯಾಗಬಹುದು. ಈ ಸಲ ಸಚಿವ ಸ್ಥಾನಕ್ಕಾಗಿ ನಾನು ಬೇಡಿಕೆ ಮಂಡಿಸಿಲ್ಲ. ಏಕೆಂದರೆ ಒಂದೇ ಮನೆಯಲ್ಲಿ 2 ಸಚಿವ ಸ್ಥಾನ ಸಿಗುವುದಿಲ್ಲ. ಬೆಳಗಾವಿ ಜಿಲ್ಲೆಯ ಬೇರೊಬ್ಬರಿಗೆ ಸಚಿವ ಸ್ಥಾನ ನೀಡಬಹುದು. ಎರಡು ವರ್ಷಗಳ ನಂತರ ಸಚಿವ ಸ್ಥಾನಕ್ಕೆ ಬೇಡಿಕೆ ಮಂಡಿಸುತ್ತೇನೆ’ ಎಂದು ಹೇಳಿದರು.

ಸಚಿವರಿಗಿಂತ ಪ್ರಬಲ: ‘ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಚಿವ ಸ್ಥಾನದ ಅವಶ್ಯಕತೆ ಇಲ್ಲ. ನಾನು ಶಾಸಕನಾಗಿಯೇ ಕೆಲಸ ಮಾಡುತ್ತಿದ್ದೇನೆ. ಕೆಲವು ಸಚಿವರಿಗಿಂತಲೂ ಪ್ರಬಲವಾಗಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !