ಸೋಮವಾರ, ಮೇ 17, 2021
27 °C
ಜಮಾಅತೆ ಇಸ್ಲಾಮಿ ಹಿಂದ್‌ ಸಂಘಟನೆ ಮಸೀದಿ ಸಂದರ್ಶನ ಕಾರ್ಯಕ್ರಮದಲ್ಲಿ ಆಸಕ್ತರು ಭಾಗಿ ; ಇಸ್ಲಾಂ ಕುರಿತು ಮಾಹಿತಿ ನೀಡಿದ ಸ್ವಯಂಸೇವಕರು

ಮಸೀದಿಯೊಳಗೆ ಸಮಾಧಿ ಇರುತ್ತೆ ಅಂದ್ಕೊಡಿದ್ದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಲ್ಯಾಣಿ, ಲಕ್ಷ್ಮೀರಂಗಯ್ಯ, ರತ್ನ, ಅಶ್ವಿನಿ, ಡೈಸನ್‌ ಥಾಮಸ್‌ ಅವರು ಬಾರ್‌ಲೇನ್‌ ರಸ್ತೆಯ ಮಕ್ಕಾ ಮಸೀದಿಯತ್ತ ಭಾನುವಾರ ಬಂದಾಗ, ಅವರನ್ನು ಸ್ವಾಗತಿಸಿದ್ದು ‘ಮಸೀದಿ ಸಂದರ್ಶನ ಕಾರ್ಯಕ್ರಮ: ಪರಸ್ಪರರನ್ನು ಅರಿಯೋಣ, ಸೌಹಾರ್ದ ಸಮಾಜ ಕಟ್ಟೋಣ’ ಎಂಬ ಬರಹದ ಬ್ಯಾನರ್‌.

ಇವರು ಕುತೂಹಲದಿಂದ ಮಸೀದಿಯ ಆವರಣದಲ್ಲಿ ಕಾಲಿಟ್ಟಾಗ, ಅಲ್ಲಿದ್ದವರು ಪ್ರೀತಿಯಿಂದ ಬರಮಾಡಿಕೊಂಡರು. ಮಸೀದಿಯ ರಚನೆ, ನಮಾಜಿನ ಕ್ರಮ, ಇಸ್ಲಾಂನ ತತ್ವಗಳ ಕುರಿತು ಆದಷ್ಟು ಮಾಹಿತಿ ನೀಡಿದರು. ಕೆಲವು ಆಸಕ್ತರು,‘ದಿನಕ್ಕೆ ಎಷ್ಟು ಬಾರಿ, ಯಾಕೆ ಪ್ರಾರ್ಥನೆ ಮಾಡಬೇಕು, ನಮಾಜಿನ ವೇಳೆ ಟೋಪಿಯನ್ನು ಧರಿಸುವುದು ಕಡ್ಡಾಯವೇ, ಮಸೀದಿಯ ಸ್ಪೀಕರ್‌ಗಳಲ್ಲಿ ಕೂಗುತ್ತಾರಲ್ಲ, ಅದರ ಅರ್ಥವೇನು’ ಎಂಬ ಪ್ರಶ್ನೆಗಳನ್ನು ಕೇಳಿದರು.

ಆಗ ಅಲ್ಲಿದ್ದ ಸ್ವಯಂಸೇವಕರು,‘ಈ ಲೋಕವನ್ನು ಸೃಷ್ಟಿಸಿದ ದೇವನನ್ನು ನೆನಪಿಸಿಕೊಳ್ಳಲು ದಿನಕ್ಕೆ ಐದು ಬಾರಿ ನಮಾಜು ಮಾಡಬೇಕೆಂಬ ನಿಯಮವಿದೆ. ಪ್ರಾರ್ಥನೆ ವೇಳೆ ಟೋಪಿ ಧರಿಸುವುದು ಕಡ್ಡಾಯವೇನಲ್ಲ. ಸ್ಪೀಕರ್‌ನಲ್ಲಿ ಕೇಳಿಸುವ ಸಾಲುಗಳಿಗೆ ‘ಅಜಾನ್‌’ ಅಂತಾರೆ, ‘ಪ್ರಾರ್ಥನೆಯ ವೇಳೆಯಾಯಿತು, ದೇವನನ್ನು ಸ್ಮರಿಸೋಣ ಬನ್ನಿ’ ಎಂಬ ಅರ್ಥ ಅದರಲ್ಲಿ ಇರುತ್ತದೆ ಎಂಬ ಉತ್ತರಗಳನ್ನು ನೀಡಿದರು.

ಈ ಸನ್ನಿವೇಶಕ್ಕೆ ಅವಕಾಶ ಕಲ್ಪಿಸಿದ್ದು ಜಮಾಅತೆ ಇಸ್ಲಾಮಿ ಹಿಂದ್‌ ಸಂಘಟನೆಯ ತುಮಕೂರು ಘಟಕ ಆಯೋಜಿಸಿದ್ದ ‘ಮಸೀದಿ ಸಂದರ್ಶನ’ ಕಾರ್ಯಕ್ರಮ.

ಮಸೀದಿ ನೋಡಲು ಬಂದವರೆಲ್ಲರೂ ಹೊರಾಂಗಣದ ಸ್ವಚ್ಛತೆ, ಒಳಾಂಗಣದ ನಿಶಬ್ದತೆ, ಶಿಸ್ತಿನಿಂದ ಏಕಪ್ರಕಾರವಾಗಿ ನಮಾಜ್‌ ಮಾಡುವ ಕ್ರಮವನ್ನು ಕುತೂಹಲದಿಂದ ವೀಕ್ಷಿಸಿದರು. ನಮಾಜಿನ ಬಳಿಕ ಮಸೀದಿಯೊಳಗಿನ ಮೆತ್ತನೆಯ ನೆಲಹಾಸಿನ ಮೇಲೆ ಕೂತು ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ಕೆಲವರು ಆವರಣದ ಪುಸ್ತಕ ಮಳಿಗೆಯಲ್ಲಿ ಇಸ್ಲಾಂ ಕುರಿತ ಪುಸ್ತಕಗಳನ್ನು ಕೇಳಿ ಪಡೆದರು.

ಸಂಘಟನೆಯ ಕಾರ್ಯಕರ್ತೆಯರಾದ ಮಲಿಕಾ ಉಲ್ಫತ್‌, ಹಾಜಿರಾಬೀ, ಕೌಸರ್‌ ಜಬೀನಾ ಅವರು ಫಜರ್‌(ಪ್ರಾತಃಕಾಲ), ಜುಹಾರ್‌(ಸೂರ್ಯ ನೆತ್ತಿ ಮೇಲೆ ಬರುವ ಸಮಯ), ಅಸರ್‌(ಸೂರ್ಯಾಸ್ತದ ಮುಂಚೆ), ಮಗರಿಬ್‌(ಸೂರ್ಯಾಸ್ತದ ನಂತರ), ಇಶಾ(ಸಂಪೂರ್ಣ ಕತ್ತಲಾದ ಮೇಲೆ) ಎಂಬ ಐದು ನಮಾಜುಗಳನ್ನು ನಿತ್ಯ ಮಾಡುವ ಪರಿಪಾಠ ಜಗತ್ತಿನ ಪ್ರತಿ ಮಸೀದಿಯಲ್ಲಿ ಇರುತ್ತದೆ. ಎಲ್ಲರೂ ಅರೇಬಿಯಾದಲ್ಲಿನ ಕಾಬಾದ ಕಡೆ ಮುಖಮಾಡಿ, ನಮಾಜ್‌ ಮಾಡುತ್ತಾರೆ. ಹಿಜರಿ ಕ್ಯಾಲೆಂಡರ್‌ ಪ್ರಕಾರ ಇಸ್ಲಾಂ ತಿಂಗಳ ದಿನಗಳ ಎಣಿಕೆ ಆಗುತ್ತದೆ’ ಎಂದು ಆಸಕ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕಸಾಪ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಅವರು ಮಸೀದಿ ಸಂದರ್ಶನದಲ್ಲಿ ಭಾಗಿಯಾದರು.

***

ಮಸೀದಿಗೆ ಬಂದವರ ಮನದ ಮಾತು

ನಮ್‌ ಕಡೆ ಮಸೀದಿಗಳಲ್ಲಿ ಮೊಹರಮ್‌ನಲ್ಲಿ ಕೂರಿಸುವ ಪೀರ್‌ಗಳು(ಲೋಹದ ಪ್ರತಿಕೃತಿಗಳು) ಮಸೀದಿಗಳಲ್ಲಿ ಇರುತ್ತವೆ ಅಂದುಕೊಂಡಿದ್ದೆ. ಮಸೀದಿಯೊಳಕ್ಕೆ ಹೋಗಿ ನೋಡಬೇಕು ಎಂಬ ಬಯಕೆ ಬಹಳ ವರ್ಷಗಳಿಂದ ಇತ್ತು. ಇವತ್ತು ಈಡೇರಿತು.

-ಬಿ.ಪಿ.ಲಗಳಿ, ನಿವೃತ್ತ ನೌಕರ, ಕ್ಯಾತ್ಸಂದ್ರ

***

ಮಸೀದಿ ನಡುವೆ ಯಾರದೋ ಸಮಾಧಿ ಇರುತ್ತೆ. ಅದರ ಸುತ್ತ ಕುಳಿತು ಪ್ರಾರ್ಥನೆ ಮಾಡ್ತಾರೆ ಅಂದುಕೊಂಡಿದ್ದೆ. ಇವತ್ತು ಮೊದಲ ಬಾರಿಗೆ ನಮಾಜಿನ ಕ್ರಮವನ್ನು ಸಂಪೂರ್ಣವಾಗಿ ನೋಡಿದೆ. ಶಿಸ್ತಿನ ಪ್ರಾರ್ಥನೆ ಇಷ್ಟವಾಯಿತು.

-ಅಶ್ವಿನಿ, ಅಧ್ಯಾಪಕಿ, ಅಂತರಸನಹಳ್ಳಿ

***

ಮಸೀದಿಯ ಗೋಡೆಗಳ ಮೇಲಿದ್ದ ಕುರಾನಿನ ಉಕ್ತಿಗಳ ರಚನೆ ಇಷ್ಟವಾಯಿತು. ಕುರಾನಿನ ಕನ್ನಡ ಪ್ರತಿಯೂ ಉಚಿತವಾಗಿ ಸಿಕ್ಕಿದೆ. ಸಮಯಾವಕಾಶ ಮಾಡಿಕೊಂಡು ಓದಿ, ಇಸ್ಲಾಂ ಕುರಿತು ತಿಳಿಯುವ ಕುತೂಹಲ ಮತ್ತಷ್ಟು ಹೆಚ್ಚಿತು.

-ಡೈಸನ್‌ ಥಾಮಸ್‌, ಉಪನ್ಯಾಸಕ, ಕುಣಿಗಲ್‌

***

ಇಸ್ಲಾಂನಲ್ಲಿ ಮಹಿಳಾ ಧರ್ಮಗುರುಗಳು ಇಲ್ಲ ಅಂತ ತಿಳಿದುಕೊಂಡೆ. ಕುತೂಹಲಕ್ಕಾಗಿ ಬಂದಿದೆ. ಮಸೀದಿ ನೋಡಿ ತುಂಬಾ ಖುಷಿಯಾಯಿತು.

-ಲಕ್ಷ್ಮೀರಂಗಯ್ಯ, ಪಿಎಚ್‌.ಡಿ. ಸಂಶೋಧನಾರ್ಥಿ, ಕುವೆಂಪುನಗರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು