ಸೋಮವಾರ, ಮೇ 25, 2020
27 °C
‘ವಿಡಿಪಿ’ ಅನುಷ್ಠಾನಕ್ಕೆ ಸಿಇಒಗಳಿಗೆ ಸೂಚನೆ

ಹಳ್ಳ ಹಿಡಿದ ಸಂಸದರ ‘ಆದರ್ಶ’!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ಸಂಸದ್ ಆದರ್ಶ ಗ್ರಾಮ’ ಯೋಜನೆ ರಾಜ್ಯದಲ್ಲಿ ಹಳ್ಳ ಹಿಡಿದಿದೆ!

ಗ್ರಾಮ ಆಯ್ಕೆ ಮಾಡಿಕೊಂಡ ಸಂಸದರು ‘ಗ್ರಾಮ ಅಭಿವೃದ್ಧಿ ಯೋಜನೆ’ (ವಿಡಿಪಿ) ಅನುಷ್ಠಾನಗೊಳಿಸಲು ನಿರಾಸಕ್ತಿ ತೋರಿಸಿದ ಪರಿಣಾಮ, ಇಡೀ ಯೋಜನೆ ‘ನಾಮ್‌–ಕೆ ವಾಸ್ತೆ’ ಎಂಬಂತಾಗಿದೆ. ಈ ಯೋಜನೆಗೆ ಮೋದಿ 2014ರ ಅಕ್ಟೋಬರ್ 11ರಂದು ಚಾಲನೆ ನೀಡಿದ್ದರು.

ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಉನ್ನತಾಧಿಕಾರ ಸಮಿತಿ ಈ ಯೋಜನೆಯ ಪ್ರಗತಿ ಪರಿಶೀಲಿಸಿದೆ. ಮೂರು ಹಂತಗಳಲ್ಲಿ ಒಟ್ಟು 56 ಗ್ರಾಮಗಳನ್ನು ರಾಜ್ಯದ ಸಂಸದರು ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದರೂ ಯಾವುದೇ ಗಾಮಕ್ಕೆ ‘ಆದರ್ಶ’ ಪಟ್ಟ ಪಡೆಯುವ ಅದೃಷ್ಟ ಸದ್ಯಕ್ಕೆ ಇಲ್ಲ.

ಯೋಜನೆಗೆ ಆಯ್ಕೆ ಮಾಡಿರುವ ಗ್ರಾಮಗಳಲ್ಲಿ ಸಂಸದರ ಜೊತೆ ಚರ್ಚಿಸಿ ವಿಡಿಪಿ ಅನುಷ್ಠಾನ ತ್ವರಿತಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಮುಖ್ಯ ಕಾರ್ಯದರ್ಶಿ ಸಲಹೆ ನೀಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಆದ್ಯತೆ ನೀಡುವ ಜೊತೆಗೆ, ಕಾರ್ಪೋರೇಟ್‌ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್‌) ಬಳಸಿ ವಿಡಿಪಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದ್ದಾರೆ.

ರಾಜ್ಯಸಭೆಯ ಸದಸ್ಯರು ಸೇರಿ ಮೊದಲ ಹಂತದಲ್ಲಿ ಒಟ್ಟು 39 ಸಂಸದರು ತಲಾ ಒಂದೊಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಪೈಕಿ ಕಾಂಗ್ರೆಸ್‌ನ ಡಿ.ಕೆ. ಸುರೇಶ್‌ ಮತ್ತು ಎಸ್‌.ವಿ. ಮುದ್ದಹನುಮೇಗೌಡ ‌ಕ್ರಮವಾಗಿ ಮಡಿಕೆಹಳ್ಳಿ ಮತ್ತು ಚಿಕ್ಕದಾಲವಟ್ಟ ಗ್ರಾಮಗಳನ್ನು ಆಯ್ಕೆ ಮಾಡಿ, ವಿಡಿಪಿ ಕೈಗೆತ್ತಿಕೊಂಡಿದ್ದರೂ ಯಾವುದನ್ನೂ ಪೂರ್ಣಗೊಳಿಸಿಲ್ಲ.

ಎರಡನೇ ಹಂತದಲ್ಲಿ 16 ಸಂಸದರು ಮಾತ್ರ ಗ್ರಾಮ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪೈಕಿ, ಬಿಜೆಪಿಯ ಶ್ರೀರಾಮುಲು (ನರಸಿಂಗಪುರ), ಶೋಭಾ ಕರಂದ್ಲಾಜೆ (ಕಡೂರು), ಕಾಂಗ್ರೆಸ್‌ನ ಬಿ.ಎನ್‌. ಚಂದ್ರಪ್ಪ (ಕೂನಬೇವು) ಮತ್ತು ವೀರಪ್ಪ ಮೊಯಿಲಿ (ಗಿಡ್ಡಪ್ಪನಹಳ್ಳಿ) ತಾವು ಆಯ್ಕೆ ಮಾಡಿಕೊಂಡಿರುವ ಗ್ರಾಮಗಳಲ್ಲಿ ಒಂದೇ ಒಂದು ವಿಡಿಪಿ ರೂಪಿಸಿಲ್ಲ!

ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ನಿರ್ಮಾಲಾ ಸೀತಾರಾಮನ್‌ ಮಾತ್ರ ಮೂರನೇ ಹಂತದಲ್ಲಿ ಗ್ರಾಮ ಆಯ್ಕೆ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಮಲ್ಲನಾಯಕನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವ ಅವರು 50 ವಿಡಿಪಿ ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದಾರೆ. ಆದರೆ ಯಾವುದೇ ಯೋಜನೆ ಆರಂಭಗೊಂಡಿಲ್ಲ.

ಏನಿದು ಯೋಜನೆ: ಎಲ್ಲ ಸಂಸದರೂ ತಮ್ಮ ಕ್ಷೇತ್ರ ವ್ಯಾಪ್ತಿಯ ಕನಿಷ್ಠ ಸವಲತ್ತುಗಳಿಲ್ಲದ ಒಂದು ಗ್ರಾಮವನ್ನು ‘ಆದರ್ಶ ಗ್ರಾಮ‘ವಾಗಿ ಬದಲಿಸಬೇಕು ಎನ್ನುವುದು ಯೋಜನೆಯ ತಿರುಳು. 2016ರೊಳಗೆ ಒಂದು, 2019 ರೊಳಗೆ ಮತ್ತೆ ಎರಡು, 2024ರೊಳಗೆ ಮತ್ತೆ 5 ಗ್ರಾಮಗಳನ್ನು ಮಾದರಿಯಾಗಿ ರೂಪಿಸಬೇಕೆಂದು ನಿರೀಕ್ಷಿಸಲಾಗಿದೆ. ಆದರೆ, ಯೋಜನೆಗೆ ಅನುದಾನ ನಿಗದಿಪಡಿಸಿಲ್ಲ.

ರಾಜ್ಯದ 16 ಸಂಸದರು (ಬಿಜೆಪಿ–9, ಕಾಂಗ್ರೆಸ್‌–4, ಜೆಡಿಎಸ್‌–3) ತಲಾ ಎರಡು ಗ್ರಾಮಗಳನ್ನು, 24 ಸಂಸದರು (ಬಿಜೆಪಿ–13, ಕಾಂಗ್ರೆಸ್‌– 8, ಪಕ್ಷೇತರ–3) ತಲಾ ಒಂದು ಗ್ರಾಮವನ್ನು ಆಯ್ಕೆ ಮಾಡಿದ್ದಾರೆ.

ಮಲ್ಯ ಸಾಧನೆ ಶೇ 79.71!

ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್‌ ಮಲ್ಯ ರಾಜ್ಯಸಭೆ ಸದಸ್ಯರಾಗಿದ್ದ (2016 ಮೇ 14ರಂದು ರಾಜೀನಾಮೆ ನೀಡಿದ್ದರು) ಅವಧಿಯಲ್ಲಿ, ಎರಡನೇ ಹಂತದಲ್ಲಿ ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದರು. 69 ವಿಡಿಪಿ ಕೈಗೆತ್ತಿಕೊಂಡಿದ್ದ ಅವರು 55 (ಶೇ 79.71) ಯೋಜನೆ ಪೂರ್ಣಗೊಳಿಸಿದ್ದಾರೆ ಎನ್ನುತ್ತವೆ ಅಂಕಿಅಂಶ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು