ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ರಂಗಾಯಣ: ನಿರ್ದೇಶಕರ ವಿರುದ್ಧ ಗಂಭೀರ ಆರೋಪ

ನಿರ್ದೇಶಕ ಪಾಟೀಲ್‌ ವಜಾಗೆ ಸಮಿತಿ ಶಿಫಾರಸು
Last Updated 5 ಮಾರ್ಚ್ 2019, 19:15 IST
ಅಕ್ಷರ ಗಾತ್ರ

ಬೆಂಗಳೂರು: ಕಲಬುರ್ಗಿ ರಂಗಾಯಣದ ಈಗಿನ ಸ್ಥಿತಿ ಒಂದು ‘ದುರಂತ’ ನಾಟಕದ ಕಥಾ ವಸ್ತುವಾಗಿದೆ. ಕಲಾವಿದರ ವಿರುದ್ಧ ಪೊಲೀಸ್‌ ಠಾಣೆಗೆ ದೂರು, ಕಲಾವಿದೆಯರ ಕಿತ್ತಾಟ, ಮಾಟ– ಮಂತ್ರ ಮುಂತಾದ ಸಂಗತಿಗಳಿಂದ ರಂಗಾಯಣ ಹೈರಾಣಾಗಿದೆ.

ಈ ಸ್ಥಿತಿಗೆ ಕಾರಣರೆಂದು ನಿರ್ದೇಶಕ ಮಹೇಶ್‌ ವಿ ಪಾಟೀಲ ವಿರುದ್ಧ ಕಲಾವಿದರು, ತಂತ್ರಜ್ಞರು ಮತ್ತು ಸಿಬ್ಬಂದಿ ತಿರುಗಿ ಬಿದ್ದಿದ್ದು, ನಿರ್ದೇಶಕ ಸ್ಥಾನದಿಂದ ಕಿತ್ತು ಹಾಕುವಂತೆ ಒತ್ತಾಯಿಸಿದ್ದಾರೆ. ಇಲ್ಲಿನ ಘಟನೆಗಳ ಬಗ್ಗೆ ವಿಚಾರಣೆಗೆಂದು ರಾಜ್ಯ ಸರ್ಕಾರ ನೇಮಿಸಿದ್ದ ಉಪಸಮಿತಿ ನಿರ್ದೇಶಕರನ್ನು ತೆಗೆದು ಹಾಕುವಂತೆ ಶಿಫಾರಸು ಮಾಡಿದೆ.

2018 ರ ಏಪ್ರಿಲ್‌ನಲ್ಲಿ ಭೈರವ ಪೂಜಾರಿ ಎಂಬ ಕಲಾವಿದ ಮದ್ಯಪಾನ ಮಾಡಿ ಗಲಾಟೆ ಮಾಡಿದರು ಎಂಬ ಕಾರಣಕ್ಕೆ ಆರಂಭವಾದ ಗಲಾಟೆ ತಾರಕಕ್ಕೆ ಏರಿದೆ. ಭೈರವ ಅವರ ವಿರುದ್ಧ ನಿರ್ದೇಶಕರ ಕಡೆಯವರೇ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಬಂಧನ ಮಾಡಿಸಿದ್ದರು. ಇದರಲ್ಲಿ ನಿರ್ದೇಶಕ ಮಹೇಶ್‌ ಪಾಟೀಲರ ಕೈವಾಡ ಇದೆ ಎಂಬುದು ವಿರೋಧಿ ಗುಂಪಿನ ಆರೋಪ.

ರಂಗಾಯಣದಲ್ಲಿ ಆಂತರಿಕ ಸಂಘರ್ಷದ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿಚಾರಣೆಗೆ ಉಪಸಮಿತಿ ರಚಿಸಲಾಯಿತು. ಉಪ ಸಮಿತಿಯು ಸರ್ಕಾರಕ್ಕೆ ನೀಡಿರುವ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಅದರ ಸಾರಾಂಶ ಹೀಗಿದೆ–

ರಂಗಾಯಣ ನಿರ್ದೇಶಕರು ರಂಗ ಚಟುವಟಿಕೆಗಳು ಮತ್ತು ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸದೇ ಕಾಲ ಹರಣ ಮಾಡುತ್ತಿದ್ದಾರೆ. ಗುಂಪುಗಾರಿಕೆಯಿಂದ ಸಂಸ್ಥೆ ಸೊರಗಿದೆ ಎಂದು ಕಲಾವಿದರು ಮತ್ತು ತಂತ್ರಜ್ಞರು ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆ.

‘ರಂಗಾಯಣದಲ್ಲಿ ರೆಕಾರ್ಡಿಂಗ್‌ ಸಂದರ್ಭದಲ್ಲಿ ಭೈರವ ಪೂಜಾರಿ ಎಂಬುವರು ಮದ್ಯಪಾನ ಮಾಡಿಕೊಂಡು ಬಂದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡುವಲ್ಲಿ ನಿರ್ದೇಶಕರ ಪಾತ್ರವಿದೆ. ಈ ಮೂಲಕ ರಂಗಾಯಣದ ಕಲಾವಿದರು ಪೊಲೀಸ್‌ ಠಾಣೆ ಮೆಟ್ಟಿಲು ಹತ್ತುವಂತಾಯಿತು. ಏಪ್ರಿಲ್‌ 11 ರಂದು ಇಬ್ಬರು ಕಲಾವಿದೆಯರ ಮಧ್ಯೆ ಗಲಾಟೆ ಆಗಿ ಕೈ–ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು’ ಎಂದು ಕಲಾವಿದರು ಸಮಿತಿಗೆ ತಿಳಿಸಿದ್ದಾರೆ.

ನಾಟಕ ಕಲಿಸಲು ಬರುವ ಹಿರಿಯ ನಿರ್ದೇಶಕ ಗಂಗಾಧರ ಸ್ವಾಮಿ ಅವರನ್ನು ಕಾರಿನಲ್ಲಿ ಡ್ರಾಪ್‌ ಕೊಡದ ಪಾಟೀಲರು, ತಮ್ಮ ನಾಲ್ವರು ಆಪ್ತರನ್ನು ಮಾತ್ರ ಕಾರಿನಲ್ಲಿ ಕೂರಿಸಿಕೊಂಡು ಎಲ್ಲೆಂದರಲ್ಲಿ ಅಡ್ಡಾಡುತ್ತಾರೆ ಎಂದು ಮೋಹನ್‌ ಕುಮಾರ್‌ ಮತ್ತು ಸಿದ್ಧಾರ್ಥ ಎಂಬ ಕಲಾವಿದರು ವಿಚಾರಣಾ ಸಮಿತಿಗೆ ವಿವರಿಸಿದ್ದಾರೆ.

ಮಾಟ–ಮಂತ್ರ, ಜ್ಯೋತಿಷ್ಯ : ನಿರ್ದೇಶಕರಿಗೆ ಮಾಟ–ಮಂತ್ರ, ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆ. ಇವರು ರಂಗಾಯಣದ ಸುತ್ತ ಬೂದಿ, ಅರಿಶಿಣ, ಕುಂಕುಮ, ಅಕ್ಕಿ, ನಿಂಬೆ ಹಣ್ಣುಗಳನ್ನು ತಂದು ಹಾಕುತ್ತಾರೆ ಎಂದು ಕೆಲವು ಕಲಾವಿದೆಯರು ದೂರಿದ್ದಾರೆ.

ಆರೋಪಗಳೆಲ್ಲ ಸುಳ್ಳು

ಕಲಾವಿದರು ಮತ್ತು ತಂತ್ರಜ್ಞರ ಆರೋಪಗಳೆಲ್ಲ ಸುಳ್ಳು. ರಂಗಾಯಣಕ್ಕೆ ಆಯ್ಕೆಯಾಗಿರುವ ಕಲಾವಿದರು ಮತ್ತು ತಂತ್ರಜ್ಞರಿಗೆ ಬದ್ಧತೆ ಇಲ್ಲ. ಸಂಸ್ಥೆಯ ಶಿಸ್ತನ್ನು ಪಾಲಿಸುತ್ತಿಲ್ಲ ಎಂದು ರಂಗಾಯಣ ನಿರ್ದೇಶಕ ಮಹೇಶ್‌ ಪಾಟೀಲ ವಿಚಾರಣಾ ಸಮಿತಿಗೆ ತಿಳಿಸಿದ್ದಾರೆ.

‘ಕೆಲವು ಕಲಾವಿದರಲ್ಲೇ ಒಳ ಜಗಳ ಇದೆ. ಕೆಲವು ಪುರುಷ ಕಲಾವಿರು ಯಾವಾಗಲೂ ಕುಡಿದುಕೊಂಡು ಬಂದು ಗಲಾಟೆ ಮಾಡುತ್ತಾರೆ’ ಎಂದು ಸಮಜಾಯಿಷಿ ನೀಡಿದ್ದಾರೆ.

ವಿಚಾರಣೆ ಸಮಿತಿ ಸದಸ್ಯರು

ಗೋಪಾಲಕೃಷ್ಣ ನಾಯರಿ, ಡಾ.ಮಲ್ಲಿಕಾರ್ಜುನ ಕಡಕೋಳ, ವಿಶ್ವೇಶ್ವರಿ ಹಿರೇಮಠ್, ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT