ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಹಮಾಲರ ಮೇಲೆ ಹೊರಲಾಗದ ಹೊರೆ

Last Updated 21 ಮೇ 2020, 20:00 IST
ಅಕ್ಷರ ಗಾತ್ರ

ಎಪಿಎಂಸಿ ಕಾಯ್ದೆಗೆ ತಂದ ತಿದ್ದುಪಡಿಯಿಂದಾಗಿ, ಅಲ್ಲಿನ ಆಲೂಗಡ್ಡೆ, ಈರುಳ್ಳಿ, ಮೆಣಸಿನಕಾಯಿ, ಹತ್ತಿ, ಕೊಬ್ಬರಿ, ಬೆಲ್ಲದ ಮಂಡಿಗಳಲ್ಲಿ ಕೆಲಸ ಮಾಡುವ ಲಕ್ಷಕ್ಕೂ ಹೆಚ್ಚು ಹಮಾಲರ (ಪೇಟೆ ಕಾರ್ಯಕರ್ತರು) ಭವಿಷ್ಯದ ಮೇಲೆ ಈಗ ಕರಿನೆರಳು ಆವರಿಸಿದೆ.

ರಾಜ್ಯದಲ್ಲಿ 502 ಕೃಷಿ ಮಾರುಕಟ್ಟೆಗಳಿವೆ. ಇವುಗಳಲ್ಲಿ ಪರವಾನಗಿ ಪಡೆದ 30 ಸಾವಿರ ಹಮಾಲರಿದ್ದರೆ, ಪರವಾನಗಿ ಪಡೆಯದ ಹಮಾಲರು, ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿಯಲ್ಲಿನ ತ್ಯಾಜ್ಯ ಆಯುವ ಮತ್ತು ಕಾಳುಕಡ್ಡಿ ಬೇರ್ಪಡಿಸುವ ಮಹಿಳೆಯರು, ಗೋದಾಮುಗಳಲ್ಲಿ ಚೀಲ ಜೋಡಿಸುವವರು ಸೇರಿ ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಬದುಕು ಎಪಿಎಂಸಿ ವಹಿವಾಟಿನ ಮೇಲೆಯೇ ಅವಲಂಬಿತ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ಆವಕವಾಗುವ ಕಾಲ ಹಾಗೂ ಪ್ರಮಾಣವನ್ನು ಆಧರಿಸಿ ಹಮಾಲರ ಸಂಖ್ಯೆ ಏರಿಳಿತವಾಗುತ್ತದೆ.

ಹಮಾಲರಿಗೆ ನಿರ್ದಿಷ್ಟ ಕೂಲಿ ಎಂಬುದೇ ಇಲ್ಲ. ನಸುಕಿನಲ್ಲಿಯೇ ಕೆಲಸ ಆರಂಭ. ಲಾರಿಯಿಂದ ಚೀಲ ಇಳಿಸಿ ತೂಕದ ಯಂತ್ರಕ್ಕೆ ಇಡುವುದು, ಅಲ್ಲಿಂದ ಲಾರಿ ಅಥವಾ ಗೋದಾಮುಗಳಿಗೆ ಚೀಲಗಳನ್ನು ಹೊತ್ತು ಸಾಗಿಸುವುದು ಹಮಾಲರ ಕೆಲಸ. ಚೀಲಕ್ಕೆ ₹5ರಂತೆ ಕೂಲಿಯನ್ನು ರೈತರು ಇಲ್ಲವೆ ವರ್ತಕರಿಂದ ಅವರು ಪಡೆಯುತ್ತಾರೆ. ಎಷ್ಟು ಚೀಲಗಳನ್ನು ಹೊರುತ್ತಾರೆ ಎಂಬುದರ ಮೇಲೆ ಅಂದಂದಿನ ಕೂಲಿ ಸಂಗ್ರಹ. ಚೀಲಗಳನ್ನು ಹೊತ್ತರೆ ಮಾತ್ರ ಅವರ ಬದುಕಿನ ಬಂಡಿ ಸಾಗುತ್ತದೆ.

ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿಯಲ್ಲಿನ ತ್ಯಾಜ್ಯ ಆಯುವುದು ಮತ್ತು ಕಾಳು–ಕಡ್ಡಿ ಬೇರ್ಪಡಿಸುವ ಕೆಲಸ ಮಾಡುವ ಮಹಿಳೆಯರು 20 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ಶಿರಸಿಯಲ್ಲಿನ ಅಡಿಕೆ ಮಾರುಕಟ್ಟೆ, ಬ್ಯಾಡಗಿಯಲ್ಲಿನ ಮೆಣಸಿನಕಾಯಿ ಮಾರುಕಟ್ಟೆ, ತಿಪಟೂರಿನ ಕೊಬ್ಬರಿ ಮಾರುಕಟ್ಟೆ, ರಾಯಚೂರಿನ ಹತ್ತಿ ಮಾರುಕಟ್ಟೆ, ಬೆಂಗಳೂರಿನ ಯಶವಂತಪುರದ ಆಲೂಗಡ್ಡೆ, ಈರುಳ್ಳಿ ಮತ್ತು ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ.

ಅವರಿಗೆ ಕೂಲಿ, ಹಣದ ರೂಪದಲ್ಲಿ ಸಿಗುವುದಿಲ್ಲ. ಹತ್ತು ಚೀಲ ಈರುಳ್ಳಿ ಸ್ವಚ್ಛಗೊಳಿಸಿದರೆ ಒಂದೆರಡು ಕೆಜಿ ಈರುಳ್ಳಿ ಸಿಗುತ್ತದೆ. ಅದನ್ನುಚಿಲ್ಲರೆ ಅಂಗಡಿಗಳಿಗೆ ಮಾರಬೇಕು ಅಥವಾ ಅವರೇ ರಸ್ತೆ ಬದಿಯಲ್ಲಿ ಕುಳಿತು ಮಾರಾಟ ಮಾಡಿ ಅಂದಿನ ಕೂಲಿ ಹುಟ್ಟಿಸಿಕೊಳ್ಳಬೇಕು. ಇದಲ್ಲದೆ ಕೊಳೆತ ಈರುಳ್ಳಿ ಮತ್ತು ಆಲೂಗಡ್ಡೆ ರಾಶಿಯನ್ನೂ ಕೆದಕಿ ತೆಗೆದು ಅದರಲ್ಲಿ ಸಿಗುವ ಒಂದೆರಡು ಕೆಜಿ ಈರುಳ್ಳಿ ಮಾರಾಟ ಮಾಡಿಯೇ ಹೊಟ್ಟೆ ತುಂಬಿಸಿಕೊಳ್ಳುವ ಜನರುಂಟು. ಹೀಗೆ, ಎಪಿಎಂಸಿ ವಹಿವಾಟಿನ ಮೇಲೆ ಅವಲಂಬಿತರಾಗಿರುವ ಹಮಾಲರು ಮತ್ತು ಇತರೆ ಕೆಲಸಗಾರರಿಗೆ ಎಪಿಎಂಸಿ ಕಾಯ್ದೆ ತಿದ್ದುಪಡಿಯು ಹೊಸ ಆತಂಕವನ್ನು ತಂದೊಡ್ಡಿದೆ.

‘ಬಹುರಾಷ್ಟ್ರೀಯ ಕಂಪನಿಗಳು ಕೃಷಿ ಉತ್ಪನ್ನಗಳನ್ನು ರೈತರ ಹೊಲದಿಂದಲೇ ನೇರವಾಗಿ ಖರೀದಿ ಮಾಡುತ್ತವೆ. ಎಪಿಎಂಸಿಗೆ ಕೃಷಿ ಉತ್ಪನ್ನ ಬರದಿದ್ದರೆ ಈ ಎಲ್ಲಾ ಕಾರ್ಮಿಕರಿಗೆ ಕೆಲಸವೇ ಇಲ್ಲವಾಗಲಿದೆ’ ಎಂದು ರಾಜ್ಯ ಹಮಾಲಿ ಫೆಡರೇಷನ್ ಅಧ್ಯಕ್ಷ ಕೆ. ಮಹಂತೇಶ್ ಆತಂಕ ವ್ಯಕ್ತಪಡಿಸುತ್ತಾರೆ.

‘ಕಾಯಕ ನಿಧಿ ಮೂಲಕ ಹಲವು ಸವಲತ್ತುಗಳನ್ನು ಪಡೆದುಕೊಂಡಿದ್ದೇವೆ. ಹತ್ತು ಸಾವಿರದಷ್ಟು ಹಮಾಲರಿಗೆ ಸೂರು ಸಿಕ್ಕಿದೆ. ಇನ್ನೂ 30 ಸಾವಿರ ಮನೆ ಕಟ್ಟಿಸಿಕೊಡಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಎಪಿಎಂಸಿಗಳಲ್ಲಿ ವಹಿವಾಟು ಸ್ಥಗಿತವಾದರೆ ಹಮಾಲರಿಗೆ ಉದ್ಯೋಗ ಇಲ್ಲವಾಗುತ್ತದೆ ಮತ್ತು ಸರ್ಕಾರದ ಸವಲತ್ತುಗಳಿಂದಲೂ ವಂಚಿತರಾಗಲಿದ್ದಾರೆ’ ಎಂದು ಅವರು ಹೇಳುತ್ತಾರೆ.

ಎಪಿಎಂಸಿ ನಂಬಿರುವ ಅಂದಾಜು ಕಾರ್ಮಿಕರು

ಪರವಾನಗಿ ಪಡೆದಹಮಾಲರು; 30 ಸಾವಿರ

ಪರವಾನಗಿ ಪಡೆಯದ ಹಮಾಲರು; 50 ಸಾವಿರ

ಮಹಿಳಾ ಕಾರ್ಮಿಕರು; 20 ಸಾವಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT