ಮಂಗಳವಾರ, ಫೆಬ್ರವರಿ 25, 2020
19 °C

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಕಾನೂನು ದುರ್ಬಳಕೆ ಮೂಲಕ ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಬ್ರಿಟಿಷರ ಕಾಲದ ಕೆಲ ಕಾನೂನುಗಳ ಪುನರ್‌ ಪರಿಶೀಲನೆ ಮಾಡುವ ಅಗತ್ಯವಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಶಾಹೀನ್‌ ಶಾಲೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶಿಸಿದ ಬಾಲಕಿ ಹಾಗೂ ಜೈಲಿನಲ್ಲಿರುವ ಆಕೆಯ ತಾಯಿಯನ್ನು ಶುಕ್ರವಾರ ಇಲ್ಲಿ ಭೇಟಿಯಾದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಜನರ ಹೋರಾಟವನ್ನು ಹತ್ತಿಕ್ಕಲು 1816ರಲ್ಲಿ ದೇಶ ದ್ರೋಹದ ಕಾನೂನು ಜಾರಿಗೆ ತಂದಿದ್ದರು. ಅದು ಈಗಲೂ ಮುಂದುವರಿದಿದೆ. ಶಾಹೀನ್‌ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ವಿಡಂಬಣಾ ನಾಟಕ ಮಾಡಿದ ಬಾಲಕಿಯ ತಾಯಿಯ ವಿರುದ್ಧ ಐಪಿಎಸ್ 124(ಎ) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ನಾನು ಕೂಡ ಒಬ್ಬ ವಕೀಲ. ನಾಟಕ ಮಾಡುವುದು ದೇಶ ದ್ರೋಹ ಅಲ್ಲ ಎನ್ನುವುದನ್ನು ಅನುಭವದಿಂದ ಹೇಳುತ್ತಿದ್ದೇನೆ’ ಎಂದರು.

‘ವಿದ್ಯಾರ್ಥಿಗಳು ಶಾಲೆಯಲ್ಲಿ ವಿಡಂಬಣಾ ನಾಟಕ ಮಾಡಿದ್ದಾರೆ. ನಾಟಕದಲ್ಲಿ ಸಿಎಎ ಹಾಗೂ ಎನ್ಆರ್‌ಸಿಗೆ ಸಬಂಧಿಸಿದ ಸಂಭಾಷಣೆ ಇದೆ. ಕಾನೂನು ಅಡಿಯಲ್ಲಿ ದಾಖಲೆ ಕೇಳಿದರೆ ಎಲ್ಲಿಂದ ಕೊಡಬೇಕು ಒಂದು ಬಾಲಕಿ ಪ್ರಶ್ನಿಸಿದರೆ, ದಾಖಲೆ ಕೇಳಲು ಬಂದವರಿಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಇನ್ನೊಬ್ಬ ಬಾಲಕಿ ಹೇಳಿದ್ದಾರೆ. ಇದನ್ನು ಬಿಟ್ಟರೆ ನಿರ್ದಿಷ್ಟವಾಗಿ ಒಬ್ಬರನ್ನು ಉಲ್ಲೇಖಿಸಿ ನಿಂದನೆ ಮಾಡಿಲ್ಲ’ ಎಂದು ಹೇಳಿದರು.

‘ಇದು ದೇಶದ್ರೋಹದ ಪ್ರಕರಣ ಅಲ್ಲವೇ ಅಲ್ಲ, ಮಾನಹಾನಿ ಮೊಕದ್ದಮೆಗೂ ಅರ್ಹವಾದ ಪ್ರಕರಣವೂ ಅಲ್ಲ. ಆದರೆ ಪೊಲೀಸರು ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಬಾಲಕಿಯ ತಾಯಿಯನ್ನು ಅನಗತ್ಯವಾಗಿ ಬಂಧಿಸಿದ್ದಾರೆ. ಪೊಲೀಸರು ರಾಜ್ಯದಲ್ಲಿ ಮೂರು ಕಡೆ ಇಂತಹ ಪ್ರಕರಣ ದಾಖಲಿಸಿದ್ದಾರೆ’ ಎಂದು ತಿಳಿಸಿದರು.

‘ಕಲ್ಲಡಕ ಪ್ರಭಾಕರ ಅವರ ಶಾಲೆಯಲ್ಲಿ ಬಾಬರಿ ಮಸೀದಿ ಕೆಡವಿದ ನಾಟಕ ಮಾಡಲಾಗಿತ್ತು. ಬಾಬರಿ ಮಸೀದಿ ಕೆಡವಿದ್ದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್‌ ಹೇಳಿದರೂ ನಾಟಕ ಪ್ರದರ್ಶಿಸಲಾಗಿದೆ. ಆದರೆ, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿಲ್ಲ. ರಾಜ್ಯ ಸರ್ಕಾರದ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ’ ಎಂದು ಆರೋಪಿಸಿದರು.

‘ನಾನು ಶಾಹೀನ್‌ ಶಿಕ್ಷಣ ಸಂಸ್ಥೆಗೆ ಬೆಂಬಲ ಸೂಚಿಸಲು ಬೀದರ್‌ಗೆ ಬಂದಿಲ್ಲ. ಅನ್ಯಾಯಕ್ಕೆ ಒಳಗಾಗಿರುವ ಇಬ್ಬರು ಮಹಿಳೆಯರು ಹಾಗೂ ಬಾಲಕಿಗೆ ಧೈರ್ಯ ತುಂಬಲು ಬಂದಿದ್ದೇನೆ. ಸದನದಲ್ಲಿ ಇದರ ವಿರುದ್ಧ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುವೆ’ ಎಂದು ತಿಳಿಸಿದರು.

‘ಸರ್ಕಾರದ ನಿರ್ದೇಶನ ಇಲ್ಲದೆ ಪೊಲೀಸರು ಏನೂ ಮಾಡುವುದಿಲ್ಲ. ಸರ್ಕಾರ ಮಹಿಳೆಯರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು