ಯಾವ ಸರ್ಕಾರ ಬಂದರೂ ರಾಮಮಂದಿರ ನಿರ್ಮಿಸಬೇಕು: ವಿಶ್ವೇಶತೀರ್ಥ ಸ್ವಾಮೀಜಿ

ಶನಿವಾರ, ಏಪ್ರಿಲ್ 20, 2019
27 °C

ಯಾವ ಸರ್ಕಾರ ಬಂದರೂ ರಾಮಮಂದಿರ ನಿರ್ಮಿಸಬೇಕು: ವಿಶ್ವೇಶತೀರ್ಥ ಸ್ವಾಮೀಜಿ

Published:
Updated:

ಬೆಳಗಾವಿ: ‘ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಿಸಬೇಕು’ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಆಗ್ರಹಿಸಿದರು.

‘ಮಸೀದಿಯು ರಾಮಮಂದಿರಕ್ಕಿಂತ ದೂರದಲ್ಲಿ ಇರಬೇಕು. ಆಗ ಯಾವುದೇ ತಕರಾರು ಇರುವುದಿಲ್ಲ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಮಮಂದಿರ ನಿರ್ಮಿಸುವುದಾಗಿ ಹೇಳಿತ್ತು ನಿಜ. ಆದರೆ, ಅವರಿಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲವಲ್ಲ? ಮುಸ್ಲಿಂ ತುಷ್ಟೀಕರಣ ಮಾಡುವ ಕೆಲವರು ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಲಿತ ನಾಯಕಿ ಮಾಯಾವತಿ ವಿರೋಧಿಸಿದ್ದರು. ಅಲ್ಲದೇ, ಕಾಂಗ್ರೆಸ್ ಪಕ್ಷವೂ ಈ ವಿಷಯದಲ್ಲಿ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ಅಲ್ಲದೇ, ವ್ಯಾಜ್ಯ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಸರ್ಕಾರ ಏನು ಮಾಡಬೇಕು? ಅವರಿಗೂ ಸಮಸ್ಯೆಗಳಿವೆ. ಸುಪ್ರೀಂ ಕೋರ್ಟ್‌ ಅನ್ನು ಮೀರಿ ಏನಾದರೂ ಮಾಡುವುದಕ್ಕೆ ಹೋದರೆ ತೊಂದರೆ ಆಗುತ್ತದೆ ಎಂಬ ಭಯವಿದ್ದಿರಬಹುದು’ ಎಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು.

ಸಂಸತ್ತೇ ಫೈನಲ್:

‘ಶ್ರೀರಾಮಮಂದಿರ ಬೇಗ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಆಗ್ರಹ. ಈ ವಿಷಯದಲ್ಲಿ ಸಂವಿಧಾನ ಹಾಗೂ ಸಂಸತ್ತೇ ಅಂತಿಮ. ಚುನಾವಣೆ ಇರುವುದರಿಂದಾಗಿ ನಾವು ಆ ಮಾತನಾಡುತ್ತಿಲ್ಲವಷ್ಟೇ. ಕೇಂದ್ರದಲ್ಲಿ ಯಾವ ಸರ್ಕಾರ ಬರಬೇಕು ಎನ್ನುವುದನ್ನು ಜನರು ನಿರ್ಧರಿಸುತ್ತಾರೆ. ಆದರೆ, ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಶಿವನ ಪೂಜೆ ಮಾಡುವವರೆಲ್ಲರೂ ಹಿಂದೂಗಳೇ. ಲಿಂಗಾಯತರು ಕೂಡ ಹಿಂದೂಗಳೇ. ವೀರಶೈವ–ಲಿಂಗಾಯತ ಬೇರೆಯಾಗಬಾರದು. ನಾವೆಲ್ಲರೂ ಸಹೋದರರು. ಹಿಂದೂ ಧರ್ಮದಿಂದ ಪತ್ಯೇಕವಾಗಬಾರದು. ಸ್ವತಂತ್ರ ಲಿಂಗಾಯತ ಧರ್ಮಕ್ಕೆ ನನ್ನ ವಿರೋಧವಿದೆ. ಹೀಗೆ ಹೇಳಿದರೆ ‘ನಮ್ಮ ವಿಷಯ ನಿಮಗೇಕೆ?’ ಎಂದು ಸಚಿವ ಎಂ.ಬಿ. ಪಾಟೀಲರು ಕೇಳಬಹುದು. ಆದರೆ, ನಮ್ಮ ಸಹೋದರರು ಬೇರೆಯಾಗುತ್ತೇವೆ ಎಂದಾಗ ನಾವು ಮಾತನಾಡುವುದು ತಪ್ಪೇ?’ ಎಂದು ಕೇಳಿದರು.

ಯಾರಿಗೂ ಅನ್ಯಾಯ ಮಾಡಿಲ್ಲ:

‘ಬ್ರಾಹ್ಮಣರು, ಲಿಂಗಾಯತರು ಹಾಗೂ ಒಕ್ಕಲಿಗರು ಸೇರಿದಂತೆ ಹಿಂದೂ ಧರ್ಮದ ಎಲ್ಲರೂ ಒಟ್ಟಾಗಿರಬೇಕು. ದಲಿತರಲ್ಲೂ ಎಡಗೈ– ಬಲಗೈಯವರು ಒಂದಾಗಬೇಕು. ಆಗ, ಹಿಂದೂ ಧರ್ಮ ಗಟ್ಟಿಯಾಗುತ್ತದೆ. ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಹೋರಾಡುತ್ತಿರುವವರು ಹೇಳುವಂತೆ ವೈದಿಕರಿಂದ ಯಾವುದೇ ಅನ್ಯಾಯವಾಗುತ್ತಿಲ್ಲ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು ನಾವೂ (ಬ್ರಾಹ್ಮಣರು), ಲಿಂಗಾಯತರೋ’ ಎಂದು ಪ್ರಶ್ನಿಸಿದರು.

‘5ನೇ ಪರ್ಯಾಯದ ಸಂದರ್ಭದಲ್ಲಿ ಕೃಷ್ಣಮಠದಿಂದ ಹಲವು ಸಾಮಾಜಿಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಧ್ವಾಚಾರ್ಯರ ಜನ್ಮಭೂಮಿ ಉಡುಪಿಯಲ್ಲಿ ಆನಂದತೀರ್ಥ ವಸತಿಯುತ ವಿದ್ಯಾಲಯ ಸ್ಥಾಪಿಸಲಾಗುವುದು. ಅಲ್ಲಿ ಪ್ರಾಥಮಿಕ ಶಿಕ್ಷಣದಿಂದ ಕಾಲೇಜುವರೆಗೂ ಇರುತ್ತದೆ. ಪಠ್ಯದೊಂದಿಗೆ ಧಾರ್ಮಿಕ ಶಿಕ್ಷಣವನ್ನೂ ನೀಡಲಾಗುವುದು. ಅವರಿಗೆ ಉಚಿತವಾದ ಊಟ–ವಸತಿ ಒದಗಿಸಲಾಗುವುದು. ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಧರ್ಮದ ಮಹತ್ವವನ್ನು ತಿಳಿಸಿಕೊಡಲಾಗುವುದು. ಎಲ್ಲ ಸಮಾಜದ ವಿದ್ಯಾರ್ಥಿಗಳಿಗೂ ಅವಕಾಶವಿರುತ್ತದೆ. ಅವರವರ ಧಾರ್ಮಿಕ ಪದ್ಧತಿಯನ್ನು ಕಲಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ ಸರ್ಕಾರದಿಂದ ದೊರೆತ ಎರಡು ಎಕರೆ ಜಾಗದಲ್ಲಿ ಹಾಸ್ಟೆಲ್ ಕಾಮಗಾರಿ ಪ್ರಾರಂಭಿಸಲಾಗಿದೆ. ₹ ಈಗಾಗಲೇ 15 ಕೋಟಿ ವೆಚ್ಚವಾಗಿದೆ. ಇನ್ನೂ ₹ 10 ಕೋಟಿ ಬೇಕಾಗಿದೆ. ಉತ್ತರ ಕರ್ನಾಟಕದವರ ಅನುಕೂಲಕ್ಕಾಗಿ ಹುಬ್ಬಳ್ಳಿಯಲ್ಲಿ 10 ಎಕರೆ ಜಾಗದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಈ ಬಾರಿಯೂ ರಂಜಾನ್‌ನಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸುವ ಕುರಿತು ಯೋಚಿಸಲಾಗುವುದು. ಸೌಹಾರ್ದಕ್ಕಾಗಿ ಅವರಿಗೆ ಊಟ ಹಾಕಿದರೆ ತಪ್ಪೇನು? ನಮ್ಮ ಸಿದ್ಧಾಂತವನ್ನು ನಾವು ಬಿಟ್ಟಿಲ್ಲ. ಮೂರ್ತಿ ಇದ್ದ ಕಡೆ ಊಟ ಮಾಡಬಾರದಿತ್ತು ಎಂದು ಅವರೇ ಹೇಳಿದ್ದಾರೆ. ಹೀಗಾಗಿ, ಬೇರೆ ಜಾಗದಲ್ಲಿ ನಡೆಸಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !