ಮಂಗಳವಾರ, ಜೂಲೈ 7, 2020
28 °C
ಅನುಭವ ಮಂಟಪ | ಚರ್ಚೆ

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಮಧ್ಯವರ್ತಿಗಳ ವಜ್ರಮುಷ್ಟಿ, ಹಿಪ್ಪೆಯಾದ ರೈತ

ವೈ.ಗ.ಜಗದೀಶ್‌ Updated:

ಅಕ್ಷರ ಗಾತ್ರ : | |

Prajavani

ತಾನು ಬೆಳೆದ ಬೆಳೆಗೆ ನ್ಯಾಯೋಚಿತ ಬೆಲೆ ಸಿಗಲಿಲ್ಲ ಎಂದು ರೈತ ಕೊರಗಬಾರದು, ಸ್ಪರ್ಧಾತ್ಮಕ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವಂತಹ ವೇದಿಕೆ ಸೃಷ್ಟಿಯಾಗಬೇಕು, ಅತ್ತ ರೈತರಿಗೆ ಇತ್ತ ಗ್ರಾಹಕರಿಗೆ ಹೊರೆ–ಬರೆಯಾಗದಂತಹ ನಿಯಂತ್ರಿತ ಮಾರುಕಟ್ಟೆ ಇರಬೇಕೆಂಬ ಸದಾಶಯದಿಂದಲೇ ಅಸ್ತಿತ್ವಕ್ಕೆ ಬಂದಿದ್ದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮತ್ತು ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ಎಪಿಎಂಸಿ ಪ್ರಾಂಗಣ.

ವ್ಯಾಪಾರಿಗಳು, ಮಧ್ಯವರ್ತಿಗಳು ಹಾಗೂ ರೈತರ ಹೆಸರಿನಲ್ಲಿ ಸೇರಿಕೊಂಡ ಕೆಲವು 'ಪ್ರತಿನಿಧಿ'ಗಳು ಎಪಿಎಂಸಿ ಸ್ಥಾಪನೆಯ ಉದ್ದೇಶವನ್ನೇ ಹಾಳುಗೆಡವಿದರು ಎನ್ನುತ್ತಾರೆ ಕೃಷಿ ಹಾಗೂ ಸಹಕಾರಿ ಕ್ಷೇತ್ರದ ತಜ್ಞರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ‘ಕೃಷಿ ಮಾರಾಟ ನೀತಿ’ಯನ್ನು ಜಾರಿಗೆ ತರುವವರೆಗೆ ಎಪಿಎಂಸಿ ಎಂಬುದು ರೈತರ ಪಾಲಿಗೆ ದುಃಸ್ವಪ್ನವೇ ಆಗಿತ್ತು. ನಂತರ ದೇಶಕ್ಕೆ ಮಾದರಿಯಾದ ‘ಏಕೀಕೃತ ಮಾರಾಟ ವ್ಯವಸ್ಥೆ’ ಅನೇಕ ಎಪಿಎಂಸಿಗಳಲ್ಲಿ ಸುಧಾರಣೆ ಪರ್ವವನ್ನೇ ಆರಂಭಿಸಿತು. ಅದನ್ನೇ ಅನುಸರಿಸಿದ ಕೇಂದ್ರ ಸರ್ಕಾರ, ದೇಶದಲ್ಲಿ ’ಇ–ನ್ಯಾಮ್‘ ಎಂಬ ಪದ್ಧತಿಯನ್ನೂ ಅನುಷ್ಠಾನಕ್ಕೆ ತಂದಿತು.

ಇದನ್ನೂ ಓದಿ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ | ಎಚ್ಚರ, ಕುದುರೆಗಳೂ ಹೊಲಕ್ಕಿಳಿದಿವೆ!

ತೂಕ–ಅಳತೆಯಲ್ಲಿ ನಿಖರತೆ, ಇ–ಟೆಂಡರ್‌, ಮಾರಾಟದಲ್ಲಿ ಪಾರದರ್ಶಕತೆ, ರೈತರಿಗೆ ಸಕಾಲದಲ್ಲಿ ಪಾವತಿ ವ್ಯವಸ್ಥೆ ಮಾಡಿದ್ದರಿಂದ ಒಂದುಮಟ್ಟದ ಬದಲಾವಣೆ ಕಾಣತೊಡಗಿತ್ತು. ಹಾಗಿದ್ದರೂ ವರ್ತಕರು, ಮಧ್ಯವರ್ತಿಗಳು, ರಿಂಗ್ ಮಾಸ್ಟರ್‌ಗಳ ಹಾವಳಿ ಸಂಪೂರ್ಣ ಹೋಗಿರಲಿಲ್ಲ. ರೈತರಿಗೆ ನ್ಯಾಯಯುತ ಬೆಲೆ ಒದಗಿಸುವ, ಬಿಳಿಚೀಟಿ ವ್ಯವಹಾರವನ್ನು ತೊಲಗಿಸುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ಪುಟ್ಟ ಹೆಜ್ಜೆಯಿಡತೊಡಗಿತ್ತು. ಅಷ್ಟರಲ್ಲಿ, ಈಗ ಮತ್ತೊಂದು ಬದಲಾವಣೆ ಪರ್ವ ಆರಂಭವಾಗಿದೆ. 

ಕೆಟ್ಟ ಪದ್ಧತಿ: ರಾಜ್ಯದ ಬಹುತೇಕ ಜಿಲ್ಲೆಗಳ ರೈತರು ಮಳೆಯನ್ನೇ ನಂಬಿಕೊಂಡವರು. ಮಳೆ ಉದುರತೊಡಗಿದಾಗ ಹೊಲ ಉತ್ತಿ, ಬೀಜ ಬಿತ್ತಿ, ನೀರು ಹೊತ್ತು ಹಾಕುವ ಕಾಯಕವನ್ನೇ ಕೈಲಾಸವೆಂದು ನಂಬಿಕೊಂಡವರು. ಹೀಗೆ ವರ್ಷಪೂರ್ತಿ ದುಡಿದು ಬೆಳೆಯನ್ನು ಎಪಿಎಂಸಿಗೆ ತರುವಷ್ಟರಲ್ಲಿ ಕೈ–ಲಾಸ್‌ ಆಗುತ್ತಿರುವುದು ಇಂದಿಗೂ ಪೂರ್ಣ ನಿಂತಿಲ್ಲ.

ಎಪಿಎಂಸಿಯಲ್ಲಿ ಕೇಂದ್ರೀಕೃತಗೊಂಡಿರುವ ವರ್ತಕರು, ಮಧ್ಯವರ್ತಿಗಳ ವಜ್ರಮುಷ್ಟಿ ರೈತರನ್ನು ಹಿಂಡಿ ಹಿಪ್ಪೆ ಮಾಡುವುದು ಹೊಸತೇನಲ್ಲ. ಹೀಗೆ ಮಾಡುವ ಸುಲಿಗೆಯಲ್ಲಿ ಅನೇಕ ಮಾದರಿಗಳಿವೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ವಸೂಲಿ ಪದ್ಧತಿ ಇದೆ.

ಅಡಿಕೆಯನ್ನೇ ಪ್ರಧಾನವಾಗಿ ಬೆಳೆಯುವ ಕಡೆ ಒಂದು ಪದ್ಧತಿ ಇದೆ. ಮೇ–ಜೂನ್‌ನಲ್ಲಿ ಕೃಷಿ ಕೆಲಸಕ್ಕೆ, ಮಳೆಗಾಲದ ಖರ್ಚಿಗೆ ಎಂದು ಅಡಿಕೆ ಮಂಡಿಯ ಮಾಲೀಕರಿಂದ ಸಾಲದ ರೂಪದಲ್ಲಿ ₹10 ಸಾವಿರವೋ ₹50 ಸಾವಿರವೋ ಸಾಲವನ್ನು ರೈತರು ಪಡೆಯುತ್ತಾರೆ. ಅಡಿಕೆ ಕೊಯ್ಲು ಮುಗಿದ ಮೇಲೆ ತೆಗೆದುಕೊಂಡ ಸಾಲ ಹಾಗೂ ಶೇ 24ರ ಬಡ್ಡಿಯನ್ನು ಚುಕ್ತಾ ಮಾಡುವಷ್ಟು ಅಡಿಕೆಯನ್ನು ಅದೇ ಮಂಡಿಗೆ ಅಡಿಕೆಯನ್ನು ಹಾಕಬೇಕು. ಈ ಅಲಿಖಿತ ಒಪ್ಪಂದದ ಮೇಲೆ ಸಾಲ ಕೊಡಲಾಗುತ್ತದೆ. ಅಡಿಕೆ ಹಾಕಿದ ಮೇಲೆ ಎಂದು ಬೇಕಾದರೂ ವ್ಯಾಪಾರ ಮಾಡಬಹುದು. ಆದರೆ, ವ್ಯಾಪಾರ ಮಾಡುವ ಮೊದಲು ನಿರ್ದಿಷ್ಟ ಮಾದರಿಯ ಅಡಿಕೆ ಚೀಲದಿಂದ ಕೊರೆ ಲೆಕ್ಕದಲ್ಲಿ 2–3 ಕೆ.ಜಿಯಷ್ಟು ಅಡಿಕೆಯನ್ನು ಮಾಲೀಕರಿಗೆ ನೀಡಬೇಕು. ಈ ಪದ್ಧತಿ ಇದೆ.

ದೇಶದಲ್ಲೇ ಪ್ರಖ್ಯಾತವಾಗಿರುವ ಎಳನೀರು ಮಂಡಿ ಮಂಡ್ಯದಲ್ಲಿದೆ. ರೈತರು ಎಳನೀರು ತಂದರೆ ’ಸೋಡಿ‘ ಲೆಕ್ಕದಲ್ಲಿ ವಸೂಲು ಮಾಡುವ ಹೀನಾಯ ಪದ್ಧತಿ ಇದೆ. ಮೊದಲು ಸೋಡಿ ಲೆಕ್ಕದಲ್ಲಿ(ಸಾವಿರ ಎಳನೀರಿಗೆ 50ರಂತೆ) ಎಳನೀರನ್ನು ಲೆಕ್ಕಹಾಕಿ ತೆಗೆದು ಪಕ್ಕಕ್ಕೆ ಇಡಲಾಗುತ್ತದೆ. ಬಳಿಕ ಖರೀದಿಯಾಗಬೇಕಾದ ಎಳೆನೀರಿನ ಲಾಟ್‌ ಅನ್ನು ಲೆಕ್ಕ ಹಾಕಲಾಗುತ್ತದೆ. ಹೀಗೆ ಸೋಡಿ ಲೆಕ್ಕ ಪುಕ್ಸಟ್ಟೆ. ಹಾಗಂತ ಬೆಂಗಳೂರಿನಲ್ಲಿ ₹35–₹40 ಮಾರಾಟವಾಗುವ ಎಳನೀರಿಗೆ ₹20 ಸಿಗುತ್ತದೆ ಎಂದುಕೊಳ್ಳಬೇಡಿ. ಸಿಗುವುದು ₹10–₹12ಅಷ್ಟೆ. ಉಳಿದಿದ್ದು ವರ್ತಕರು, ಮಧ್ಯವರ್ತಿಗಳು, ಸಾಗಣೆದಾರರ ಪಾಲು.

ಇದೇ ರೀತಿ ಧಾನ್ಯಗಳಲ್ಲಿ ಚೀಲದಿಂದ 6–8 ಕೆಜಿಯನ್ನು ಸೋಡಿ ರೂಪದಲ್ಲಿ ವಸೂಲು ಮಾಡುವ ಪದ್ಧತಿ ಇದೆ.

ರಿಂಗ್ ಮಾಸ್ಟರ್ಸ್‌: ಎಪಿಎಂಸಿಯಲ್ಲಿ ರೈತರನ್ನು ಯಾಮಾರಿಸುವ, ದರ ಇಲ್ಲದೇ ಚಿಲ್ಲರೆ ಕಾಸಿಗೆ ಮಾರಾಟ ಮಾಡುವಂತೆ ಮಾಡುವ ದೊಡ್ಡ ಜಾಲವೇ ‘ರಿಂಗ್‌’. ಆನ್‌ಲೈನ್ ವ್ಯಾಪಾರ ಶುರುವಾದ ಮೇಲೆ ರಿಂಗ್‌ ಪದ್ಧತಿ ಇಲ್ಲ ಎಂಬುದು ಅಧಿಕಾರಿಗಳ ಆಂಬೋಣ. ಆದರೆ, ಅದೇ ನಡೆಯುತ್ತಿದೆ ಎಂಬುದು ರೈತರ ದೂರು.

ರಿಂಗ್ ಎಂದರೆ ಇಲ್ಲಿ ಜಾಲ ಎಂದರ್ಥ. ಉದಾಹರಣೆಗೆ ನಾಲ್ಕು ಲೋಡ್ ಕೊಬ್ಬರಿ ಅಥವಾ ಸಾವಿರ ಬುಟ್ಟಿ ಟೊಮೆಟೊ, ಎರಡು ಲೋಡ್ ತೊಗರಿ ಇಲ್ಲವೆ ಹತ್ತು ಲೋಡ್ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತದೆ ಎಂದು ಇಟ್ಟುಕೊಳ್ಳೋಣ. ಹೀಗೆ ಮಾರುಕಟ್ಟೆಗೆ ಉತ್ಪನ್ನ ಬರುತ್ತದೆ ಎಂದು ಗೊತ್ತಾಗಿದ್ದೇ ತಡ ವ್ಯಾಪಾರಿಗಳು/ ಮಧ್ಯವರ್ತಿಗಳು ಒಂದಾಗುತ್ತಾರೆ. ಎಲ್ಲರೂ ಮಾತನಾಡಿಕೊಂಡು ದರವನ್ನು ನಿಗದಿ ಮಾಡುತ್ತಾರೆ. ಹಿಂದಿನ ದಿನ ಅದೇ ಗುಣಮಟ್ಟದ ಕೊಬ್ಬರಿ ₹10 ಸಾವಿರಕ್ಕೆ ಖರೀದಿಯಾಗಿತ್ತು ಎಂದರೆ ₹6 ಸಾವಿರ ಅಥವಾ ₹8 ಸಾವಿರಕ್ಕೆ ದರ ಇಳಿಸಿ ಮಾರಾಟ ಮಾಡಲಾಗುತ್ತದೆ. ತರಕಾರಿ, ಹಣ್ಣುಗಳ ವಿಷಯದಲ್ಲಂತೂ ಬೇಕಾಬಿಟ್ಟಿ ದರ ಇಳಿಸಿ, ರೈತನಿಗೆ ಬೆಳೆ ಕೊಯ್ಯಿಸಿದ ಖರ್ಚು ದಕ್ಕದ ಸ್ಥಿತಿಗೆ ದೂಡಲಾದ ನಿದರ್ಶನಗಳೂ ಇವೆ. 

ಬಿಳಿಚೀಟಿ

ಎಪಿಎಂಸಿಯಲ್ಲಿ ಉತ್ಪನ್ನವೊಂದು ಖರೀದಿಯಾದ ಮೇಲೆ ಎಷ್ಟು ಮೊತ್ತಕ್ಕೆ, ಎಷ್ಟು ಟನ್/ ಕ್ವಿಂಟಲ್ ಖರೀದಿ ಮಾಡಲಾಗಿದೆ ಎಂದು ರೈತರಿಗೆ ವ್ಯಾಪಾರಿ ಬರೆದುಕೊಡುವ ಚೀಟಿಗೆ ಬಿಳಿಚೀಟಿ ಎನ್ನಲಾಗುತ್ತದೆ. ಅಧಿಕೃತತೆಯೇ ಇರುವುದಿಲ್ಲ. ವಿಶ್ವಾಸದ ಮೇಲೆ ಇದು ನಡೆಯುತ್ತದೆ. ಅನೇಕ ಬಾರಿ ಬಿಳಿಚೀಟಿಯಲ್ಲಿ ಬರೆದುಕೊಟ್ಟಷ್ಟು ಮೊತ್ತ ರೈತರಿಗೆ ಸಿಗುವುದೇ ಇಲ್ಲ. ಕೆಲವೊಮ್ಮೆ ಸರ್ಕಾರಕ್ಕೆ ಕಟ್ಟಬೇಕಾದ ಶುಲ್ಕವನ್ನು  ತಪ್ಪಿಸಲು 100 ಕ್ವಿಂಟಲ್ ವ್ಯಾಪಾರವಾಗಿದ್ದಲ್ಲಿ 10 ಕ್ವಿಂಟಲ್ ಎಂದು ತಪ್ಪಾಗಿ ನಮೂದಿಸುವುದು ಇದೆ. ಹೀಗೆ ರೈತರನ್ನೂ ವಂಚಿಸಲಾಗುತ್ತದೆ ಎಂಬ ದೂರುಗಳೂ ಇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು