ಶುಕ್ರವಾರ, ಜೂನ್ 5, 2020
27 °C
ಹೆಚ್ಚುತ್ತಿರುವ ಕೋವಿಡ್‌–ಬಿಎಸ್‌ವೈ ಆತಂಕ

ಅನುಮತಿಗೆ ಕಾಯದೇ ವೈದ್ಯರ ನೇಮಿಸಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

BSY

ಬೆಂಗಳೂರು: ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳ ಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯ ವೈದ್ಯರ ಅಗತ್ಯವಿರುವುದರಿಂದ ಸರ್ಕಾರದ ಅನುಮತಿಗೆ ಕಾಯದೇ ತಕ್ಷಣವೇ ವೈದ್ಯರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದರು.

ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್‌ ಸಂಖ್ಯೆ ಹೆಚ್ಚುತ್ತಿರುವ ಕಾರಣ ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಶುಕ್ರವಾರ ಸಭೆ ನಡೆಸಿದರು.

ನಿವೃತ್ತ ವೈದ್ಯರನ್ನೂ ನೇಮಿಸಿಕೊಳ್ಳಬಹುದು. ಯಾರನ್ನೇ ನೇಮಿಸಿಕೊಂಡರೂ ಅವರಿಗೆ ಒಳ್ಳೆಯ ವೇತನ ಕೊಡಬೇಕು. ಇದಕ್ಕೆ ಕಡತ ಸಿದ್ಧ ಮಾಡಿಕೊಂಡು ಸರ್ಕಾರದ ಅನುಮತಿ ಪಡೆಯಬೇಕು ಎಂದೆಲ್ಲ ತಡ ಮಾಡಬೇಡಿ. ಮೊದಲು ವೈದ್ಯರನ್ನು ನೇಮಿಸಿಕೊಳ್ಳಿ ಬಳಿಕ ಕಡತವನ್ನು ಕಳುಹಿಸಿ ಎಂದು ಸೂಚಿಸಿದರು.

ಈ ವೈದ್ಯರ ಸೇವೆಯನ್ನು ಕೋವಿಡ್‌ ಮುಗಿಯುವವರೆಗೆ ಬಳಸಿಕೊಳ್ಳಿ. ಅಲ್ಲದೆ, ಕೋವಿಡ್‌ ಹೆಚ್ಚುತ್ತಿರುವ ಕಾರಣ ಪ್ರತಿಯೊಂದ ಆಸ್ಪತ್ರೆಯಲ್ಲಿ ಹಾಸಿಗೆ ಸಂಖ್ಯೆಯನ್ನು 50 ರಷ್ಟು ಹೆಚ್ಚಿಸಬೇಕು. 100 ಹಾಸಿಗೆ ಇರುವ ಕಡೆಗಳಲ್ಲಿ 150ಕ್ಕೆ ಏರಿಸಿ. ರೋಗಿಗಳು ಭರ್ತಿ ಆದ ಮೇಲೆ ಹಾಸಿಗೆಗಳ ಪ್ರಮಾಣ ಹೆಚ್ಚಿಸಲು ಓಡಾಡಬೇಡಿ ಎಂದು ಕಟ್ಟಪ್ಪಣೆ ಮಾಡಿದರು. ಹೊರ ರಾಜ್ಯಗಳಿಂದ ಬರುತ್ತಿರುವವರಿಂದ ಕೋವಿಡ್‌ ಸಂಖ್ಯೆ ಹೆಚ್ಚುತ್ತಿದೆ. ಗಡಿಗಳನ್ನು ಕಟ್ಟುನಿಟ್ಟಾಗಿ ಬಂದ್‌ ಮಾಡಬೇಕು. ಮೇ 31 ರವರೆಗೆ ಯಾರನ್ನೂ ರಾಜ್ಯದೊಳಗೆ ಬಿಡಬೇಡಿ ಎಂದರು.

ಕೋವಿಡ್‌ ನಿರ್ವಹಣೆಗೆ ವಿಶೇಷ ವಿಭಾಗ

ಕೋವಿಡ್‌ ನಿರ್ವಹಣೆಗೆ ಪ್ರತ್ಯೇಕ ವಿಭಾಗವೊಂದನ್ನು ಆರಂಭಿಸಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂಬ ಸಲಹೆ ಸಭೆಯಲ್ಲಿ ಕೇಳಿ ಬಂದಿತು.

ಹಲವು ಇಲಾಖೆಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಈಗ ಕೋವಿಡ್‌ ನಿರ್ವಹಣೆ ಕಾರ್ಯದಲ್ಲಿಯೇ ತೊಡಗಿದ್ದಾರೆ. ಜೂನ್‌ ಬಳಿಕ ಅವರವರ ಇಲಾಖೆಗಳ  ಕೆಲಸವನ್ನು ಆರಂಭಿಸಬೇಕು. ಇಲ್ಲವಾದಲ್ಲಿ ಇಲಾಖೆಗಳ ಕೆಲಸ ಸ್ಥಗಿತವಾಗುತ್ತದೆ. ಆದ್ದರಿಂದ ಕೋವಿಡ್‌ ನಿರ್ವಹಣೆಗೇ ಪ್ರತ್ಯೇಕ ವಿಭಾಗ ತೆರೆದು ವಿವಿಧ ಇಲಾಖೆಗಳ ಸಮನ್ವಯಗೊಳಿಸಿ ಕಾರ್ಯ ನಿರ್ವಹಿಸುವಂತಾಗಬೇಕು ಎಂಬ ಸಲಹೆ ನೀಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು