ಶುಕ್ರವಾರ, ಮಾರ್ಚ್ 5, 2021
29 °C

‘ಆಪರೇಷನ್‌ ಕಮಲ’ ಆಡಿಯೊದಲ್ಲಿ ಹೆಸರು, ಹುದ್ದೆಗೆ ಕಳಂಕ: ರಮೇಶ್‌ ಕುಮಾರ್‌ ಭಾವುಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆಪರೇಷನ್‌ ಕಮಲ’ದ ಆಡಿಯೊದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿದ್ದರಿಂದ ನೊಂದುಕೊಂಡ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಸದನದಲ್ಲೇ ಸೋಮವಾರ ಭಾವುಕರಾದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಬಜೆಟ್‌ ಮಂಡನೆಗೆ ಅರ್ಧ ಗಂಟೆ ಮುನ್ನ ಮುಖ್ಯಮಂತ್ರಿ ಅವರು ‘ಆಪರೇಷನ್‌ ಆಡಿಯೊ’ದ ಬಗ್ಗೆ ‍ಪತ್ರ ನೀಡಿದರು. ಇದರಿಂದಾಗಿ ಶುಕ್ರವಾರ ಚರ್ಚೆಗೆ ಅವಕಾಶ ನೀಡಲು ಆಗಲಿಲ್ಲ. ಆಡಿಯೊವನ್ನು ನಾನು ಕೇಳಿದ್ದೇನೆ. ನನಗೆ ₹50 ಕೋಟಿ ಕೊಟ್ಟಿದ್ದೇವೆ ಎಂದಿದ್ದಾರೆ. ಈ ಹಣ ಎಲ್ಲಿ ಕೊಟ್ಟರು, ಹೇಗೆ ಕೊಟ್ಟರು ಎಂಬುದು ಗೊತ್ತಾಗಬೇಕಿದೆ. ಎರಡು ದಿನಗಳಿಂದ ನನ್ನ ಸ್ಥಿತಿ ಏನಾಗಿರಬಹುದು ಎಂಬುದನ್ನು ನೀವೇ ಊಹಿಸಿ’ ಎಂದರು.

‘1994–99ರಲ್ಲಿ ಸ್ಪೀಕರ್‌ ಆಗಿದ್ದೆ. ಆಗ ಹಿರಿಯ ಮಹಿಳೆಯೊಬ್ಬರು ಅರ್ಜಿ ಹಿಡಿದುಕೊಂಡು ಬಂದಿದ್ದರು. ಅವರ ಪತಿ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಮೃತಪಟ್ಟಿದ್ದರು. ಅವರ ಮಗನಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಲಾಗಿತ್ತು. ಅವರೂ ಮೃತಪಟ್ಟರು. ಬಳಿಕ ಅವರ ತಂಗಿಗೆ ಕೆಲಸ ನೀಡಲಾಗಿತ್ತು. ಅವರೂ ನಿಧನರಾದರು. ಮತ್ತೊಬ್ಬ ಮಗಳಿಗೆ ಕೆಲಸ ನೀಡುವಂತೆ ಮನವಿ ಮಾಡಿದರು. ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ನಿಯಮಾವಳಿಗಳ ಪ್ರಕಾರ, ಮದುವೆಯಾಗಿ ಗಂಡನ ಮನೆಗೆ ಹೋದ ಯುವತಿಗೆ ಉದ್ಯೋಗ ನೀಡಲು ಅವಕಾಶ ಇಲ್ಲ. ನನ್ನ ಬದುಕು ಹಾಗೂ ಮನಸ್ಸು ಜನರ ಸಮಸ್ಯೆಗಳ ಕಡೆಯೇ ಇರುತ್ತದೆ’ ಎಂದು ಹೇಳಿಕೊಂಡರು.

‘ನಾನು ಸರ್ಕಾರಿ ಮನೆ ಪಡೆದಿಲ್ಲ. ನಗರದ ದೊಮ್ಮಲೂರಿನ ಅಮರಜ್ಯೋತಿ ಬಡಾವಣೆಯ ಎರಡು ಕೊಠಡಿಗಳಿರುವ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಅವರು ಕೊಟ್ಟ ದುಡ್ಡು ಕೂಡಿಡಲು ಅಲ್ಲಾದರೂ ಜಾಗ ಇರಬೇಕಲ್ಲ! ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಲ್ಲಿ ಫಲಕವನ್ನೂ ಹಾಕಿಲ್ಲ. ಈಗ ನನಗೆ ಏಕೆ ಶಿಕ್ಷೆ, ಇದು ನ್ಯಾಯನಾ’ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಆಪರೇಷನ್‌ ಆಡಿಯೊ ಪ್ರಕರಣ: ಎಸ್‌ಐಟಿಗೆ?

‘ಅವಕಾಶವಾದಿ ರಾಜಕಾರಣಕ್ಕಿಂತ ಮರಣವೇ ಲೇಸು ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಅವರ ಕಾಲು ಉಗುರಿನ ದೂಳು ಅಲ್ಲ. ಅವರು ನನಗೆ ಆದರ್ಶಪ್ರಾಯರು’ ಎಂದರು. ‘₹50 ಕೋಟಿ ಪಡೆದ ಆರೋಪ ಹೊತ್ತುಕೊಂಡು ಹೆಂಡತಿ ಮಕ್ಕಳಿಗೆ ಹೇಗೆ ಮುಖ ತೋರಿಸಲಿ. ಈಗ ಕಸದ ಬುಟ್ಟಿಯನ್ನು ಹೊತ್ತು ಮನೆಗೆ ಹೇಗೆ ಹೋಗಲಿ’ ಎಂದೂ ನೋವಿನಿಂದ ಪ್ರಶ್ನಿಸಿದರು.

‘ಈ ಪ್ರಕರಣವನ್ನು ವಿಧಾನಸಭಾಧ್ಯಕ್ಷರು ಗಂಭೀರವಾಗಿ ತೆಗೆದುಕೊಳ್ಳಬಾರದು. ಆತುರದ ನಿರ್ಧಾರ ತೆಗೆದುಕೊಳ್ಳಬಾರದು’ ಎಂದು ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು. ‘ಪ‍್ರಚೋದನೆ ನೀಡಿ ಇಲ್ಲಿಂದ ಕಳುಹಿಸಬಹುದು ಎಂದು ಭಾವಿಸಬೇಡಿ. ನಾನು ಈ ಸ್ಥಾನದಿಂದ ಹೋಗುವುದಿಲ್ಲ’ ಎಂದು ರಮೇಶ್‌ ಕುಮಾರ್‌ ಚಟಾಕಿ ಹಾರಿಸಿದರು. ವಿಧಾನಸಭಾಧ್ಯಕ್ಷರು ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಸಚಿವ ಡಿ.ಕೆ.ಶಿವಕುಮಾರ್‌, ಶಾಸಕರಾದ ಎಚ್‌.ಕೆ.ಪಾಟೀಲ, ಎಸ್‌.ಸುರೇಶ್‌ ಕುಮಾರ್, ಎ.ಟಿ.ರಾಮಸ್ವಾಮಿ ವಿನಂತಿಸಿದರು.

‘ನಾನು ವಿಧಾನಸಭಾಧ್ಯಕ್ಷರಾಗಬೇಕು ಎಂದು ಹೇಳಿದವರು ಸಿದ್ದರಾಮಯ್ಯ ಅವರು. ಆದರೆ, ಈಗ ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ ಅವರು ಮೌನವಾಗಿದ್ದಾರೆ. ನನ್ನನ್ನು ಬಾವಿಗೆ ದೂಡಿ ಆಳ ಎಷ್ಟಿದೆ ಎಂಬುದನ್ನು ನೋಡುತ್ತಿದ್ದಾರಾ. ನನ್ನ ಬಗ್ಗೆ ನಿಮಗೆ ಅನುಮಾನವಾ’ ಎಂದು ರಮೇಶ್‌ ಕುಮಾರ್‌ ಪ್ರಶ್ನಿಸಿದರು. ‘ನಿಮ್ಮ ಬಗ್ಗೆ ಎಳ್ಳಷ್ಟೂ ಅನುಮಾನ ಇಲ್ಲ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಸಭಾಧ್ಯಕ್ಷರಿಗೆ ಸೀಮಿತವಾಗಿ ಪ್ರಕರಣದ ತನಿಖೆ ನಡೆಯಲಿ. ಒಂದು ವೇಳೆ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು ಎಂಬ ಆಸೆಯಿದ್ದರೆ ಆಡಳಿತ ಪಕ್ಷದವರು ನೋಟಿಸ್‌ ನೀಡಲಿ. ಆಡಳಿತ ಪಕ್ಷದವರು ಯಾರಿಗೆ ಯಾವ ಆಮಿಷ ಒಡ್ಡಿದ್ದಾರೆ ಎಂಬುದನ್ನು ನಾವು ಹೇಳುತ್ತೇವೆ. ಈ ಹಿಂದೆ ಸಭಾಧ್ಯಕ್ಷರಾಗಿದ್ದ ಕೆ.ಜಿ.ಬೋಪಯ್ಯ ಅವರಿಗೆ ಸದಸ್ಯರು ಏನೆಲ್ಲ ಹೇಳಿದ್ದರು ಎಂಬುದನ್ನು ನಾವೂ ಪ್ರಸ್ತಾಪ ಮಾಡುತ್ತೇವೆ’ ಎಂದು ಮಾಧುಸ್ವಾಮಿ ಹೇಳಿದರು.

ಕಳ್ಳ ಕಳ್ಳ ಅಂತಾರೆ: ಶಿವಕುಮಾರ್‌

ಈ ಹಿಂದೆ ಶಾಸಕರ ಕಾಲಿಗೆ ಜನರು ಬೀಳುತ್ತಿದ್ದರು. ನಾನು ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಶಾಸಕರ ಈಗಿನ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಬೇಕಿದೆ. ಇಡೀ ದಿನ ಟಿ.ವಿ.ಗಳಲ್ಲಿ ತೋರಿಸುತ್ತಾರೆ. ಅವರಿಗೆ ಬೇಲ್‌ ಆಯಿತು, ಇವರಿಗೆ ಜೈಲು ಆಯಿತು. ಕಳ್ಳ ಕಳ್ಳ ಕಳ್ಳ... ಅಂತಾರೆ. ನಿಮ್ಮ ಆದೇಶ ದೊಡ್ಡ ಇತಿಹಾಸ ಆಗಬೇಕು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಮೌನಕ್ಕೆ ಶರಣಾದ ಬಿಎಸ್‌ವೈ

ಅವಕಾಶ ಸಿಕ್ಕಾಗಲೆಲ್ಲ ಸರ್ಕಾರವನ್ನು ಕಟು ಶಬ್ದಗಳಿಂದ ಟೀಕಿಸುತ್ತಿದ್ದ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಮೌನಕ್ಕೆ ಶರಣಾಗಿದ್ದರು. ಇಡೀ ದಿನದ ಕಲಾಪದಲ್ಲಿ ಒಂದು ಸಲವಷ್ಟೇ ಮಾತನಾಡಿದರು. ಸದನದಲ್ಲಿ ಆಡಿಯೊ ಚರ್ಚೆ ವೇಳೆ ಪಕ್ಷವನ್ನು ಸಮರ್ಥಿಸಿಕೊಳ್ಳುವ ಹೊಣೆಯನ್ನು ಜೆ.ಸಿ.ಮಾಧುಸ್ವಾಮಿ ಅವರಿಗೆ ವಹಿಸಿ ಸುಮ್ಮನಾದರು.

ಯಡಿಯೂರಪ್ಪ ‘ಆಪರೇಷನ್‌ ಕಮಲ’ ಆಡಿಯೊದ ರೂವಾರಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಇದು ನಕಲಿ ಆಡಿಯೊ ಎಂದು ಯಡಿಯೂರಪ್ಪ ಆರಂಭದಲ್ಲಿ ಪ್ರತಿಕ್ರಿಯಿಸಿದ್ದರು. ‘ಆ ಧ್ವನಿ ನನ್ನದೇ’ ಎಂದು ಅವರು ಭಾನುವಾರ ಒಪ್ಪಿಕೊಂಡಿದ್ದರು. ಸದನದಲ್ಲಿ ಆಡಿಯೊ ಚರ್ಚೆ ವೇಳೆ ಪಕ್ಷವನ್ನು ಸಮರ್ಥಿಸಿಕೊಳ್ಳುವ ಹೊಣೆಯನ್ನು ಜೆ.ಸಿ.ಮಾಧುಸ್ವಾಮಿ ಅವರಿಗೆ ವಹಿಸಿ ಸುಮ್ಮನಾದರು. ಪ್ರಕರಣದ ಸಮಗ್ರ ತನಿಖೆ ಆಗಬೇಕು ಎಂದು ಆಡಳಿತ ಪಕ್ಷದವರು ಒತ್ತಾಯಿಸಿದಾಗ, ‘ಇದಕ್ಕೆಲ್ಲ ಒಪ್ಪಿಕೊಳ್ಳಬೇಡಿ. ಮಾತನಾಡಿ’ ಎಂದು ಸದಸ್ಯರು ಕಿವಿಮಾತು ಹೇಳಿದರು.

‘ಆಡಿಯೊದಲ್ಲಿರುವ ಸಂಭಾಷಣೆ ನನ್ನದು ಎಂಬುದಾಗಿ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ‘ಆ ಸಂಭಾಷಣೆ ನನ್ನದಲ್ಲ’ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

’ಆಡಿಯೊ’ದಲ್ಲಿ ಸಭಾಧ್ಯಕ್ಷರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ದೇವದುರ್ಗದ ಶಾಸಕ ಶಿವನಗೌಡ ನಾಯಕ್ ಸಹ ಮೌನವಾಗಿ ಇದ್ದರು. ಸ್ವಲ್ಪ ಹೊತ್ತು ರಮೇಶ್‌ ಕುಮಾರ್‌, ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರ ಮಾತುಗಳನ್ನು ಆಲಿಸುತ್ತಾ ಕುಳಿತರು. ಬಳಿಕ ಸದನದಿಂದ ಹೊರಕ್ಕೆ ಹೋದರು. 

ಬೈಸಿಕೊಂಡ ಶಾಸಕರು

ಇಬ್ಬರು ಶಾಸಕರು ತಮ್ಮ ಪಕ್ಷದ ನಾಯಕರಿಂದ ಬೈಸಿಕೊಂಡ ಪ್ರಕರಣ ಸೋಮವಾರ ನಡೆಯಿತು.

ಆಡಿಯೊ ಬಗ್ಗೆ ಸದನದಲ್ಲಿ ಗಂಭೀರವಾಗಿ ಚರ್ಚೆ ನಡೆಯುತ್ತಿತ್ತು. ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾತನಾಡುತ್ತಿದ್ದರು. ಆಗ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಕಡತವೊಂದನ್ನು ಹಿಡಿದುಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿಗೆ ಬಂದರು. ಇದನ್ನು ಕಂಡು ಕೋಪಗೊಂಡ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ‘ನಡಿ ಇಲ್ಲಿಂದ ನಡಿ’ ಎಂದು ಜೋರಾಗಿ ಗದರಿದರು. ಸಂಗಮೇಶ್ವರ ಲಗುಬಗೆಯಿಂದ ಹಿಂದಿನ ಸೀಟಲ್ಲಿ ಕುಳಿತರು.

ಇತ್ತ ಬಿಜೆಪಿ ಪಾಳಯದಲ್ಲಿ ಬೈಯಿಸಿಕೊಳ್ಳುವ ಸರದಿ ಬಸವರಾಜ ಬೊಮ್ಮಾಯಿ ಅವರದ್ದಾಗಿತ್ತು.  ಮಧ್ಯಾಹ್ನ ಒಂದು ಗಂಟೆ ವೇಳೆಗೆ ಸದನಕ್ಕೆ ಹಾಜರಾದ ಬಸವರಾಜ  ಅವರನ್ನು ಕಂಡ ಯಡಿಯೂರಪ್ಪ, ‘ತಡವಾಗಿ ಬಂದಿದ್ದು ಏಕೆ. ಬೇಗ ಬರಬೇಕು ಎಂಬುದು ಗೊತ್ತಿಲ್ಲವೇ. ನಾವು ಇಷ್ಟು ಕಷ್ಟದಲ್ಲಿರುವಾಗ ಈ ರೀತಿ ಮಾಡುವುದೇ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಎಸ್‌ವೈ ಅಸಮಾಧಾನ

ಸೋಮವಾರದ ಕಲಾಪ ಮುಂದೂಡಿದ ಬಳಿಕ ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯ ಕಚೇರಿಯಲ್ಲಿ ಶಾಸಕರ ಸಭೆ ನಡೆಸಿದರು.

‘ಆಡಿಯೊ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಮೈತ್ರಿ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಅಧೀನದ ಸಂಸ್ಥೆಯಿಂದ ತನಿಖೆ ನಡೆಸಿದರೆ ಪಕ್ಷಕ್ಕೆ ಪ್ರತಿಕೂಲವಾಗಲಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಅವರು ಸೂಚಿಸಿದರು.

‘ಸೋಮವಾರದ ಕಲಾಪದ ಚರ್ಚೆಯಲ್ಲಿ ನಮ್ಮ ಪಕ್ಷದ ಬೆರಳೆಣಿಕೆಯಷ್ಟೇ ಶಾಸಕರು ಪಾಲ್ಗೊಂಡಿದ್ದರು. ಇದು ಸರಿಯಲ್ಲ. ಮಂಗಳವಾರದ ಚರ್ಚೆಯಲ್ಲಿ ಹೆಚ್ಚಿನ ಶಾಸಕರು ಪಾಲ್ಗೊಂಡು ನಿಲುವು ಬದಲಾವಣೆಗೆ ಒತ್ತಡ ಹೇರಬೇಕು’ ಎಂದೂ ತಾಕೀತು ಮಾಡಿದರು ಎಂದು ಗೊತ್ತಾಗಿದೆ.

‘ವ್ಯಭಿಚಾರ ಸರಿ; ಮಾತು ತಪ್ಪು’!

ಸೋಮವಾರ ಮಧ್ಯಾಹ್ನ ನಂತರದ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಗದ್ದಲ ಉಂಟು ಮಾಡಿದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ‘ವ್ಯಭಿಚಾರ ಮಾಡುವುದು ಸರಿ. ಆ ಬಗ್ಗೆ ಮಾತನಾಡುವುದು ತಪ್ಪು ಎಂಬಂತಿದೆ ಬಿಜೆಪಿ ಸದಸ್ಯರ ವಾದ’ ಎಂದು ಚುಚ್ಚಿದರು.

ಆಗ ಬಿಜೆಪಿಯ ಬಸವರಾಜ ಬೊಮ್ಮಾಯಿ, ‘ಆಡಿಯೊ ಪ್ರಕರಣದಲ್ಲಿ ಸರ್ಕಾರವೇ ತೀರ್ಮಾನಕ್ಕೆ ಬಂದುಬಿಟ್ಟಿದೆ. ಇದೀಗ ಅವರೇ ತನಿಖೆ ಮಾಡುವುದು ಹೇಗೆ’ ಎಂದು ಪ್ರಶ್ನಿಸಿದರು. ಸದನದಲ್ಲಿ ಗದ್ದಲ ಹೆಚ್ಚುತ್ತಿದ್ದಂತೆ ಕಲಾಪವನ್ನು ಸಭಾಧ್ಯಕ್ಷರು ಅರ್ಧ ಗಂಟೆ ಮುಂದೂಡಿದರು.

ಮತ್ತೆ ಕಲಾಪ ಆರಂಭಗೊಂಡರೂ ಬಿಜೆಪಿ ಸದಸ್ಯರು ತಮ್ಮ ಬೇಡಿಕೆಯಿಂದ ಹಿಂದೆಸರಿಯಲು ನಿರಾಕರಿಸಿದರು. ಈ ವೇಳೆ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್‌, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ದೂರವಾಣಿ ಕದ್ದಾಲಿಕೆ ಪ್ರಕರಣ ಪ್ರಸ್ತಾಪಿಸಿದರು. ತಕ್ಷಣ ಎದ್ದು ನಿಂತ ಬೊಮ್ಮಾಯಿ, ‘ಆ ಪ್ರಕರಣದಲ್ಲಿ ನ್ಯಾಯಾಂಗ ವಿಚಾರಣೆ ನಡೆದಿದೆ. ಅದೇ ರೀತಿಯ ಆಡಿಯೊ ಪ್ರಕರಣವನ್ನೂ ನ್ಯಾಯಾಂಗ ವಿಚಾರಣೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು.

ಆಗ ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ, ‘ವಿಧಾನಪರಿಷತ್‌ ಸ್ಥಾನ ನೀಡಲು ವಿಜಯಪುರದ ವಿಜುಗೌಡ ಪಾಟೀಲ ಅವರಿಂದ ಕುಮಾರಸ್ವಾಮಿ 2014ರಲ್ಲಿ ಹಣ ಕೇಳಿದ ಪ್ರಕರಣದ ಬಗ್ಗೆಯೂ ತನಿಖೆ ಆಗಬೇಕು’ ಎಂದು ಒತ್ತಾಯಿಸಿ, ಸಭಾಧ್ಯಕ್ಷರಿಗೆ ಸಿ.ಡಿ ಒಂದನ್ನು ಹಸ್ತಾಂತರಿಸಿದರು. ಈ ವೇಳೆ, ಮತ್ತೆ ಗದ್ದಲ ನಡೆದಾಗ ಸಭಾಧ್ಯಕ್ಷರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

***

ಈ ಧ್ವನಿಸುರುಳಿ ನಕಲಿ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆಯೂ ಸಮಗ್ರ ತನಿಖೆ ಆಗಬೇಕು

–ಕೆ.ಎಸ್‌.ಈಶ್ವರಪ್ಪ, ಬಿಜೆಪಿ ಶಾಸಕ

ಹುಚ್ಚುಚ್ಚಾಗಿ ಮಾತನಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು

–ಎಸ್‌.ಸುರೇಶ್‌ಕುಮಾರ್‌,  ಬಿಜೆಪಿ ಶಾಸಕ

ಶಾಸಕರಾಗಿ ಆಯ್ಕೆಯಾದವರು ನಡುವೆ ರಾಜೀನಾಮೆ ನೀಡಿದರೆ ಅವರನ್ನು ಅನರ್ಹಗೊಳಿಸಬೇಕು. ಅಂತಹ ಕಾನೂನು ತರಬೇಕು

–ಸಾ.ರಾ. ಮಹೇಶ್‌, ಪ್ರವಾಸೋದ್ಯಮ ಸಚಿವ

ವಿಧಾನಸಭಾಧ್ಯಕ್ಷರ ಮೇಲೆ ಬಂದಿರುವ ಆರೋಪಗಳಿಗೆ ಮಾತ್ರ ನಮ್ಮ ಒಪ್ಪಿಗೆ ಇದೆ. ಇತರ ವಿಚಾರಗಳಿಗೆ ನಮ್ಮ ಸಹಮತ ಇಲ್ಲ. ಸರ್ಕಾರದ ಮೇಲೆ ನಂಬಿಕೆ ಇಲ್ಲ 

 –ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಶಾಸಕ

ಸದನದ ಗೌರವ ಎತ್ತಿ ಹಿಡಿಯಬೇಕಿದೆ. ಹೀಗಾಗಿ, ಆಡಿಯೊದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು 

–ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ 
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು