ಶುಕ್ರವಾರ, ನವೆಂಬರ್ 15, 2019
22 °C
ತ್ರಿಸದಸ್ಯ ಪೀಠದ ಮುಂದೆ ಇಂದು ವಿಚಾರಣೆ l ಇಕ್ಕಟ್ಟಿನಲ್ಲಿ ಬಿಜೆಪಿ

‘ಸುಪ್ರೀಂ’ಗೆ ಆಡಿಯೊ: ರಾಗ ಬದಲಿಸಿದ ಸಿಎಂ, ಅನರ್ಹರಿಗೆ ಭೀತಿ

Published:
Updated:

ನವದೆಹಲಿ/ಬೆಂಗಳೂರು: ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆ ಒಳಗೊಂಡ ಆಡಿಯೊವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದೇ ಎಂಬುದನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿರುವುದು ಅನರ್ಹ ಶಾಸಕರನ್ನು ಚಿಂತೆಗೀಡುಮಾಡಿದೆ.

ಮಂಗಳವಾರ ಬೆಳಿಗ್ಗೆ 10.30ಕ್ಕೆ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ. ರಮಣ ನೇತೃತ್ವದ ದ್ವಿಸದಸ್ಯ ಪೀಠದ ಎದುರು ಸೋಮವಾರ ಮೌಖಿಕವಾಗಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಪರ ವಕೀಲ ಕಪಿಲ್‌ ಸಿಬಲ್‌, ಆಡಿಯೊ ಕುರಿತು ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥದ ಹಂತಕ್ಕೆ ಬಂದಿರುವಾಗಲೇ ಹೊಸ ವಿವಾದ ಸೃಷ್ಟಿಯಾಗಿರುವುದರಿಂದ ತಮ್ಮ ಭವಿಷ್ಯವೇನು ಎಂಬ ಚಿಂತೆ ಅನರ್ಹ ಶಾಸಕರನ್ನು ಕಾಡಲಾರಂಭಿಸಿದೆ. ಈ ಸಂಬಂಧ ಅನರ್ಹ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಮಾತುಕತೆ ನಡೆಸಿದರು.

ಆಡಿಯೊ ಸೋರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಯನ್ನೂ ಹಮ್ಮಿಕೊಂಡಿತ್ತು.

ಕಪಿಲ್‌ ಸಿಬಲ್‌ ಮನವಿ: ಸುಪ್ರೀಂ ಕೋರ್ಟ್‌ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಕಪಿಲ್‌ ಸಿಬಲ್‌, ಸ್ಪೀಕರ್‌ ಆದೇಶ ಪ್ರಶ್ನಿಸಿ ಅನರ್ಹರು ಸಲ್ಲಿಸಿರುವ ಅರ್ಜಿಯಲ್ಲಿ ‘ಬಿಜೆಪಿಗೂ ನಮ್ಮ ರಾಜೀನಾಮೆಗೂ ಸಂಬಂಧವಿಲ್ಲ ಎಂದು ಹೇಳಿರುವುದು ಸತ್ಯಕ್ಕೆ ದೂರವಾದ ಸಂಗತಿ. ಯಡಿಯೂರಪ್ಪ ಅವರ ಹೇಳಿಕೆಯು ಶಾಸಕರನ್ನು ಸೆಳೆದಿರುವುದಕ್ಕೆ ಪುಷ್ಟಿ ನೀಡಿದೆ. ಹಾಗಾಗಿ, 17 ಜನ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ನೀಡಿರುವ ಆದೇಶ ಸರಿ ಇದೆ’ ಎಂದು ಹೇಳಿದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಶಾಸಕರನ್ನು ಮುಂಬೈನಲ್ಲಿ ಇರಿಸಿದ್ದರು ಎಂದು ಯಡಿಯೂರಪ್ಪ ಹೇಳಿದ್ದಾರೆ. ಅದನ್ನೇ ಸಾಕ್ಷ್ಯ ಎಂದು ಪರಿಗಣಿಸಬೇಕು. ಅನರ್ಹರ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠವನ್ನು ಮತ್ತೆ ರಚಿಸಬೇಕು’ ಎಂದು ಸಿಬಲ್ ಕೋರಿದರು.

ತೀರ್ಪು ವಿಳಂಬ ಸಾಧ್ಯತೆ: ಆಡಿಯೊ ಸೋರಿಕೆ ಬೆಳವಣಿಗೆಯು ಉಪಚುನಾವಣೆಗೆ ಸನ್ನದ್ಧವಾಗಿರುವ 15 ಅನರ್ಹ ಶಾಸಕರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಸ್ಪೀಕರ್‌ ಆದೇಶದ ಸಿಂಧುತ್ವ ಪ್ರಶ್ನಿಸಿ ಕಳೆದ ಜುಲೈ 29 ಹಾಗೂ ಆಗಸ್ಟ್ 1ರಂದು ಸಲ್ಲಿಕೆಯಾಗಿರುವ ರಿಟ್‌ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 25ರಂದು ತೀರ್ಪು ಕಾದಿರಿಸಿದೆ. ಇನ್ನೇನು ತೀರ್ಪು ಪ್ರಕಟವಾಗಲಿದೆ ಎಂಬ ಸಂದರ್ಭದಲ್ಲಿ ಆಡಿಯೊ ಗದ್ದಲ ಎದ್ದಿರುವುದು ಅನರ್ಹರ
ನಿದ್ದೆಗೆಡಿಸಿದೆ.

ಕಾಂಗ್ರೆಸ್‌ನ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್‌ ಮತ್ತೆ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದ್ದರಿಂದ ತೀರ್ಪು ಹೊರಬರುವುದು ಮತ್ತಷ್ಟು ವಿಳಂಬವಾಗಲಿದೆ. ಚುನಾವಣೆಯ ಅಧಿಸೂಚನೆಗೆ ಮುನ್ನ, ನವೆಂಬರ್‌ ಮೊದಲ ವಾರವೇ ತೀರ್ಪು ಬರಬಹುದು ಎಂಬ ಅನರ್ಹರ ನಿರೀಕ್ಷೆ ಹುಸಿಯಾಗಿದೆ.

ಹಿನ್ನಡೆ ಆಗದು: ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ‘ಅನರ್ಹರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೊವನ್ನು ಕಾಂಗ್ರೆಸ್‌ ಸಾಕ್ಷ್ಯವಾಗಿ ನೀಡಿದ್ದರೂ ಪ್ರಕರಣಕ್ಕೆ ಯಾವುದೇ ಹಿನ್ನಡೆಯಾಗುವುದಿಲ್ಲ’ ಎಂದಿದ್ದಾರೆ.

ಈ ಮಧ್ಯೆ ಹೊಸಕೋಟೆಯಲ್ಲಿ ಸೋಮವಾರ ಮುಖ್ಯಮಂತ್ರಿ ಬಿಎಸ್‌ವೈ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಬಚ್ಚೇಗೌಡ ಮತ್ತು ಅವರ ಪುತ್ರ ಶರತ್‌ ಬಚ್ಚೇಗೌಡ ಗೈರಾಗಿದ್ದರು.

‘ಸಚಿವರೇ ಲೀಕ್ ಮಾಡಿರಬಹುದು’
‘ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಸಭೆಯಲ್ಲಿ ಮಾತನಾಡಿರುವ ಆಡಿಯೊವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಸಾಧ್ಯತೆ ಇದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಆರೋಪಿಸಿದರು.

‘ಬಿಜೆಪಿ ಸಭೆಯಲ್ಲಿ ಯಡಿಯೂರಪ್ಪ ಸತ್ಯವನ್ನೇ ಹೇಳಿದ್ದಾರೆ. ಅನರ್ಹ ಶಾಸಕರನ್ನು ಹೋಟೆಲ್‌ನಲ್ಲಿ ಇರಿಸಿದ್ದೂ ಅಲ್ಲದೇ, ಭದ್ರತೆಯನ್ನೂ ಅಮಿತ್‌ ಶಾ ಅವರೇ ಒದಗಿಸಿದ್ದರು ಎನ್ನುವ ಸತ್ಯ ಹೊರಬಂದಿದೆ’ ಎಂದರು.

‘ನಾನು ನೇರ ರಾಜಕಾರಣ ಮಾಡಿದವನು. ರಾಜಕೀಯದಲ್ಲಿ ಹಿಂದೊಂದು, ಮುಂದೊಂದು ಮಾಡಿ ಗೊತ್ತಿಲ್ಲ. ಡರ್ಟಿ ಪಾಲಿಟಿಕ್ಸ್‌ ಮಾಡಿಲ್ಲ. ಸಂಸದೆ ಶೋಭಾ ಅವರೇ ಡರ್ಟಿ ಪಾಲಿಟಿಕ್ಸ್‌ ಮಾಡುತ್ತಾರೆ’ ಎಂದು ಕಿಡಿಕಾರಿದರು.

‘ಅನರ್ಹರಿಗೂ ನಮಗೂ ಸಂಬಂಧ ಇಲ್ಲ’
‘ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಅವರು ಎಲ್ಲಿಗಾದರೂ ಹೋಗಲಿ, ಯಾವ ಪಕ್ಷವನ್ನಾದರೂ ಸೇರಿಕೊಳ್ಳಲಿ. ಬೇಕಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

 ‘ಈ ಆಡಿಯೊ ಇಟ್ಟುಕೊಂಡು ಸುಪ್ರೀಂಕೋರ್ಟ್‌ನಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆಡಿಯೊ ತೋರಿಸಿ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರ ಮುಖಂಡರು ಆರೋಪ ಮಾಡಿದ ರೀತಿಯಲ್ಲಿ ನಾನು ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ’ ಎಂದರು.

ಎಲ್ಲರೂ ಕಾಲಜ್ಞಾನಿಗಳೇ: ಮುನಿರತ್ನ ಲೇವಡಿ
ಬಿಜೆಪಿ ಸರ್ಕಾರ ಇವತ್ತು ಬೀಳತ್ತೆ, ಇನ್ನು ಎರಡು ತಿಂಗಳಿಗೆ ಬೀಳುತ್ತೆ ಅಂತ ಹೇಳುವ ಮೂಲಕ ಎಲ್ಲರೂ ಕಾಲಜ್ಞಾನಿಗಳಾಗಿಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯಗೆ ಅನರ್ಹ ಶಾಸಕ ಮುನಿರತ್ನ ಲೇವಡಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)