ಸೋಮವಾರ, ಮಾರ್ಚ್ 30, 2020
19 °C
ಕೆಪಿಎಂಇ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳ ನೋಂದಣಿ l ಚಿಕಿತ್ಸೆ ಪ್ಯಾಕೇಜ್‌ಗಳ ದರ ಪರಿಷ್ಕರಣೆ

ಖಾಸಗಿ ಆಸ್ಪತ್ರೆಗಳಲ್ಲಿ ‘ಆಯುಷ್ಮಾನ್’ ಆರೋಗ್ಯ

ವರುಣ್‌ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೈದ್ಯಕೀಯ ಚಿಕಿತ್ಸಾ ಪ್ಯಾಕೇಜ್‌ಗಳ ದರಗಳನ್ನು ಪರಿಷ್ಕರಿಸುವ ಜತೆಗೆ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯಡಿ (ಕೆಪಿಎಂಇ) ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಸೇವೆಗಳನ್ನು ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳಿಗೂ ವಿಸ್ತರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. 

ಈ ಹಿಂದೆ ‘ಯಶಸ್ವಿನಿ’ ಯೋಜನೆಯಡಿ ಫಲಾನುಭವಿಗಳು ನೋಂದಾಯಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳಿ, ನೇರವಾಗಿ ಅಗತ್ಯ ಚಿಕಿತ್ಸೆಗಳನ್ನು ಪಡೆಯಬಹುದಿತ್ತು. ಬಡ–ಮಧ್ಯಮ ವರ್ಗದ ಇನ್ನಷ್ಟು ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆ ಉಚಿತವಾಗಿ ಸಿಗಬೇಕೆಂಬ ಉದ್ದೇಶದಿಂದ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.  ಆದರೆ, ರಾಜ್ಯದಲ್ಲಿ ಈ ಯೋಜನೆಯಡಿ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಅಷ್ಟಾಗಿ ಆಸಕ್ತಿ ತೋರಿಲ್ಲ. ಇದರಿಂದಾಗಿ ಫಲಾನುಭವಿಗಳು ಚಿಕಿತ್ಸೆ ಪಡೆಯಲು ಸಮಸ್ಯೆ ಎದುರಿಸುವಂತಾಗಿದೆ.

ಮಾರಣಾಂತಿಕ ಕಾಯಿಲೆಗಳ ವ್ಯಾಪ್ತಿಯಲ್ಲಿ ಬರುವ ತೃತೀಯ ಹಂತದ (ರೋಗದ ತೀವ್ರತೆ ನಿರ್ಧರಿಸುವುದು) 900 ಚಿಕಿತ್ಸಾ ವಿಧಾನಗಳು ಸೇರಿದಂತೆ ಒಟ್ಟು 1,650 ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಆದರೆ, ಪ್ರತಿ ಚಿಕಿತ್ಸೆಗೂ ‌ದರ ನಿಗದಿಪಡಿಸಿದ ಪರಿಣಾಮ ಖಾಸಗಿ ಆಸ್ಪತ್ರೆಗಳು ರೆಫರಲ್ ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಅದೇ ರೀತಿ, ಬೆರಳಣಿಕೆಯಷ್ಟು ಆಸ್ಪತ್ರೆಗಳು ಮಾತ್ರ ಯೋಜನೆಯಡಿ ಹೆಸರು ನೋಂದಾಯಿಕೊಂಡಿವೆ. ಇದರ ಪರಿಣಾಮ ಒಂದು ವರ್ಷದಲ್ಲಿ ರಾಜ್ಯದಲ್ಲಿ ಕೇವಲ 40 ಮಂದಿ ಮಾತ್ರ ₹ 3 ಲಕ್ಷ ಮೇಲ್ಪಟ್ಟ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ.

ಆಸ್ಪತ್ರೆಗಳ ಸಂಪರ್ಕ: ಕೆಪಿಎಂಇ ಕಾಯ್ದೆಯಡಿ ನೋಂದಾಯಿಸಲ್ಪಟ್ಟ 30 ಹಾಗೂ ಅದಕ್ಕಿಂತ ಹೆಚ್ಚಿನ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ಆದ್ಯತೆ ನೀಡಲಾಗಿದ್ದು, ಖಾಸಗಿ ಆಸ್ಪತ್ರೆಗಳನ್ನು ಆರೋಗ್ಯಾಧಿಕಾರಿಗಳು ಸಂಪರ್ಕಿಸಲು ಪ್ರಾರಂಭಿಸಿದ್ದಾರೆ. 

‘ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಯಡಿ ನೋಂದಾಯಿಸಲು ಮುಂದಾಗಿದ್ದು, ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ. ಶಿಫಾರಸು ಮಾಡಿದ (ರೆಫರಲ್‌) ರೋಗಿಗಳಿಗೆ ಎಲ್ಲೆಡೆ ಸುಲಭವಾಗಿ ಚಿಕಿತ್ಸೆ ಲಭಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆಗಳ ಮುಖ್ಯಸ್ಥರಿಗೆ ಯೋಜನೆಯ ಬಗ್ಗೆ ಮನವರಿಕೆ ಮಾಡಿಸಲು ಜಿಲ್ಲಾವಾರು ಪ್ರಾದೇಶಿಕ ಸಲಹೆಗಾರರು ಮತ್ತು ಜಿಲ್ಲಾ ಸಂಯೋಜಕರಿಗೆ ಸೂಚಿಸಲಾಗಿದೆ’ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕ ಡಾ. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ–ಅಂಶಗಳು
1,483
: ಕೆಪಿಎಂಇ ಕಾಯ್ದೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು
405: ಯೋಜನೆಯಡಿ ಚಿಕಿತ್ಸೆ ಒದಗಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳು
371: ಯೋಜನೆಯಡಿ ಚಿಕಿತ್ಸೆ ಒದಗಿಸುತ್ತಿರುವ ಖಾಸಗಿ ಆಸ್ಪತ್ರೆಗಳು
1.05 ಕೋಟಿ: ಯೋಜನೆಗಳ ಫಲಾನುಭವಿ ಕುಟುಂಬಗಳ ಸಂಖ್ಯೆ

ಪ್ಯಾಕೇಜ್ ದರದ ಪರಿಷ್ಕರಣೆ
ಯೋಜನೆಯಡಿ 1,650 ಸೇವೆಗಳು ದೊರೆಯಲಿದೆ.  ಸುಟ್ಟಗಾಯಗಳಿಗೆ ₹ 1.87 ಲಕ್ಷ, ಹೃದಯ ಶಸ್ತ್ರಚಿಕಿತ್ಸೆ ₹ 95 ಸಾವಿರ, ಸಾಮಾನ್ಯ ಶಸ್ತ್ರಚಿಕಿತ್ಸೆಗೆ ₹ 82 ಸಾವಿರ, ನರರೋಗ ಸಂಬಂಧಿ ಶಸ್ತ್ರಚಿಕಿತ್ಸೆಗೆ ₹ 56 ಸಾವಿರ ಗರಿಷ್ಠ ಮೊತ್ತ ನಿಗದಿಪಡಿಸಲಾಗಿದೆ. ಇದೇ ರೀತಿ, ಬೇರೆ ಕಾಯಿಲೆಗಳಿಗೂ ಚಿಕಿತ್ಸೆಯ ಗಂಭೀರತೆ ಹಾಗೂ ವಿಧಾನಗಳ ಅನುಸಾರ ದರಗಳ ನಿಗದಿಪಡಿಸಲಾಗಿದೆ. ಈ ದರಗಳ ಬಗ್ಗೆ ಖಾಸಗಿ ಆಸ್ಪತ್ರೆಗಳು ಅಸಮಾಧಾನ ವ್ಯಕ್ತಪಡಿಸಿದ್ದವು.

‘ಕೆಪಿಎಂಇ ಕಾಯ್ದೆಯ ಸೆಕ್ಷನ್ 13 ಅಡಿ ಚಿಕಿತ್ಸಾ ದರ ಪರಿಷ್ಕರಣೆಗೆ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಯೋಜನೆಯಲ್ಲಿ ಶೇ 60 ರಷ್ಟು ಕೇಂದ್ರ ಸರ್ಕಾರದ ಪಾಲಿದ್ದು, ಹೊಸದಾಗಿ ಆರೋಗ್ಯ ಸೌಲಭ್ಯ ಪ್ಯಾಕೇಜ್ ಸಿದ್ಧಪಡಿಸಿದೆ. ಆದ್ದರಿಂದ ಎರಡನ್ನೂ ಹೊಂದಾಣಿಕೆ ಮಾಡಿ, ದರ ಪರಿಷ್ಕರಿಸಲಾಗುತ್ತದೆ’ ಎಂದು ಡಾ.ಮಂಜುನಾಥ್ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು