ಮಂಗಳವಾರ, ಜೂಲೈ 7, 2020
27 °C
ಸತತ ಮಳೆ, ಬಹುತೇಕ ಕಟ್ಟೆಗಳು ಭರ್ತಿ, ಮುಂದಿನ ವರ್ಷ ಇರದು ನೀರಿಗೆ ಕೊರತೆ

ಬಂಡೀಪುರ ಕೆರೆಗಳಿಗೆ ಭರಪೂರ ನೀರು

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಕೇರಳ ಭಾಗ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಸತತ ಮಳೆಯಾಗುತ್ತಿರುವ ಪರಿಣಾಮ ಕಾಡಿನಲ್ಲಿ ಇರುವ ಬಹುತೇಕ ಕೆರೆಕಟ್ಟೆಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದು, ಮುಂದಿನ ಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ನೀರಿನ ಸಮಸ್ಯೆಯಾಗದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಈ ಬಾರಿ ಮುಂಗಾರು ಪೂರ್ವ  ಹಾಗೂ ಮುಂಗಾರು ಆರಂಭದಲ್ಲಿ ಮಳೆ ಕೊರತೆ ಉಂಟಾಗಿತ್ತು. ಹಾಗಾಗಿ, ಕೆರೆಗಳು ಭರ್ತಿಯಾಗದಿರುವ ಆತಂಕ ಎದುರಾಗಿತ್ತು.  

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ, ರಾಜ್ಯದ ಗಡಿಭಾಗ ಕೆಕ್ಕನಗಳ್ಳ, ಬಂಡೀಪುರದಲ್ಲಿ ಹದಿನೈದು ದಿನಗಳಿಂದ ಸತತವಾಗಿ ತುಂತುರು ಮಳೆಯಾಗುತ್ತಿದೆ. ಅದಕ್ಕೂ ಮೊದಲು ಸತತ ಮೂರ್ನಾಲ್ಕು ದಿನಗಳ ಜೋರಾಗಿ ಮಳೆಯಾಗಿತ್ತು. ಹೀಗಾಗಿ ಕೆರೆ ಕಟ್ಟೆಗಳಿಗೆ ಭರ‍ಪೂರ ನೀರು ಹರಿದು ಬಂದಿದ್ದು, ಬಹುತೇಕ ಭರ್ತಿಯಾಗಿವೆ.

1,020 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 320 ಕೆರೆಗಳಿವೆ. ಇವುಗಳಲ್ಲಿ ಸುಮಾರು 150ಕ್ಕೂ ಹೆಚ್ಚು ದೊಡ್ಡ ಕೆರೆಗಳಿದೆ. ಒಟ್ಟು ಕೆರೆಗಳ ಪೈಕಿ 180ಕ್ಕೂ ಹೆಚ್ಚಿನ ಕೆರೆಗಳು ಭರ್ತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದರು. 

ಕಾಡಿನಲ್ಲಿರುವ ತಾವರೆಕಟ್ಟೆ, ಮಂಗಲ ಕೆರೆ, ಗೋಪಾಲಸ್ವಾಮಿ ಬೆಟ್ಟ ಬಳಿ ಇರುವ ಹಿರಿಕೆರೆ, ಸೊಳ್ಳಿಕಟ್ಟೆ, ಹುಲಿಕೆರೆ ಮುಂತಾದ ಕೆರೆಗಳು ತುಂಬಿ ಕೊಡಿ ಬಿದ್ದಿವೆ ಎಂದು ಬೀಟ್ ಸಿಬ್ಬಂದಿ ಮಾಹಿತಿ ನೀಡಿದರು.

‘ಬತ್ತಿದ ಕೆರೆಗಳಿಗೆ ಕೊಳವೆ ಬಾವಿಗಳಿಂದ ಸೋಲಾರ್ ಪಂಪ್ ಮೂಲಕ ನೀರು ತುಂಬಿಸಲಾಗುತ್ತಿದೆ. ಬಂಡೀಪುರದ ಎಲ್ಲಾ ವಲಯದಲ್ಲಿ 45 ಕೊಳವೆಬಾವಿ ಕೊರೆದು ಸೋಲಾರ್ ಪಂಪ್ ಅಳವಡಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

‘ಎಲ್ಲಾ ಕೆರೆಗಳಲ್ಲಿ ನೀರು ಇರುವುದರಿಂದ ಸಫಾರಿಯಲ್ಲಿ ಪ್ರಾಣಿಗಳ ದರ್ಶನವಾಗುತ್ತಿದೆ. ಕೆರೆಗಳ ಬಳಿ ಆನೆ, ಹುಲಿ, ಕಾಡೆಮ್ಮೆ, ಚಿರತೆ, ಜಿಂಕೆ ಹೆಚ್ಚಾಗಿ ಕಂಡು ಬರುತ್ತಿದೆ. ಕಾಡಿನ ಕೆರೆಗಳಲ್ಲಿ ನೀರು ಇರುವುದರಿಂದ ಆನೆಗಳು ಗ್ರಾಮದ ಕೆರೆಗಳಿಗೆ ಬರುವುದು ಕಡಿಮೆಯಾಗಿದೆ’ ಎಂದು ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು