ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್‌ ಎಫ್‌ಎಂನ 'ಬೆಂಗಳೂರು ಹಾಡು' ಹಿಂದಿಮಯ: ಕನ್ನಡಿಗರ ಆಕ್ರೋಶ, ಸಿಎಂ ಅಸಮಾಧಾನ

Last Updated 4 ಫೆಬ್ರುವರಿ 2019, 10:52 IST
ಅಕ್ಷರ ಗಾತ್ರ

ಬೆಂಗಳೂರು: ರೆಡ್‌ ಎಫ್‌ಎಂ ರೇಡಿಯೊ ನಿರ್ಮಾಣ ಮಾಡಿರುವ ’ನಮ್ಮೂರು ನಮ್ಮೂರು ಇದುವೇ ನಮ್ಮ ಬೆಂಗಳೂರು’ ಎಂಬವಿಡಿಯೊ ಹಾಡು ಇದೀಗ ವಿವಾದಕ್ಕೆ ಗುರಿಯಾಗಿದೆ.

ಇದುನಮ್ಮ ‘ಬೆಂಗಳೂರು ಹಾಡು’ ಎಂದು ರೆಡ್‌ ಎಫ್‌ಎಂ ಹೆಮ್ಮೆಯಿಂದ ಹೇಳಿಕೊಂಡಿದೆ. ಆದರೆ ಸಾಹಿತ್ಯ ಮಾತ್ರ ಸಂಪೂರ್ಣವಾಗಿ ಹಿಂದಿಯಲ್ಲಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.

’ನಮ್ಮೂರು ನಮ್ಮೂರು ಇದುವೇ ನಮ್ಮ ಬೆಂಗಳೂರು" ಹಾಡಿನ ಸಾಹಿತ್ಯ ಹಿಂದಿ ಭಾಷೆಯಲ್ಲಿ ಇರುವುದು ಯಾಕೆ? ಬೆಂಗಳೂರು ಕರ್ನಾಟಕದ ರಾಜಧಾನಿಯಾಗಿದ್ದು ಕನ್ನಡವೇ ಮುಖ್ಯ ಭಾಷೆಯಾಗಿದ್ದರೂ ಸಾಹಿತ್ಯವನ್ನು ಹಿಂದಿಯಲ್ಲಿ ರಚಿಸಿದ್ದು ಯಾಕೆ? ಉದ್ದೇಶ ಪೂರ್ವಕವಾಗಿಉತ್ತರ ಭಾರತದ ಭಾಷೆ ಮತ್ತು ಸಂಸ್ಕೃತಿಯನ್ನು ಮಿಳಿತ ಮಾಡಿರುವುದು ಯಾಕೆ? ಎಂದು ಕನ್ನಡಿಗರು ಮಾತ್ರವಲ್ಲದೆ ಬೇರೆ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ನೆಲೆಸಿರುವವರು ಆಕ್ರೋಶವ್ಯಕ್ತಪಡಿಸಿದ್ದಾರೆ. ಅಲ್ಲದೇಕನ್ನಡವೇ ಮೊದಲು ಎಂದು ಹೇಳಿದ್ದಾರೆ.

ಈ ಹಾಡಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಟ ರಮೆಶ್‌ ಆರವಿಂದ್‌ ಹಾಗೂ ಐಪಿಎಸ್‌ ಅಧಿಕಾರಿ ಡಿ. ರೂಪಾ, ನಟಿ ಕೃಷಿ ತಪಂದಾ, ವಸ್ತ್ರ ವಿನ್ಯಾಸಕಾರ ಪ್ರಸಾದ್‌ ಬಿದ್ದಪ್ಪ ಅವರನ್ನು ತೋರಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ "ನಮ್ಮೂರು ನಮ್ಮೂರು ಇದುವೇ ನಮ್ಮ ಬೆಂಗಳೂರು" ಎಂಬ ಮಾತಿನೊಂದಿಗೆ ಹಾಡುಆರಂಭವಾಗುತ್ತದೆ.

(ಯುಟ್ಯೂಬ್‌ನಿಂದ ಹಾಡು ತೆಗೆಯಲಾಗಿದೆ)

2 ನಿಮಿಷ 12ಸೆಕೆಂಡ್‌ಗಳ ಈ ವಿಡಿಯೊ ಹಾಡಿನಲ್ಲಿ ಹಿಂದಿ ಭಾಷೆ ಬಳಕೆ ಮಾತ್ರವಲ್ಲದೇ, ನಗರದ ಸಂಚಾರ ದಟ್ಟಣೆ, ವಿದ್ಯುತ್‌ ಕಣ್ಣಾಮುಚ್ಚಾಲೆ ಬಗ್ಗೆ ವ್ಯಂಗ್ಯ ಮಾಡಿರುವುದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಫೆಬ್ರುವರಿ 1ರಂದು ರೆಡ್‌ ಎಫ್‌ಎಂ ಈ ಹಾಡನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದೆ. ಇಲ್ಲಿಯವರೆಗೂ 2900 ಜನರು ವೀಕ್ಷಣೆ ಮಾಡಿದ್ದಾರೆ. ಕೇವಲ 65 ಜನ ಮಾತ್ರ ಈ ಹಾಡನ್ನು ಲೈಕ್ ಮಾಡಿದ್ದು, 650ಕ್ಕೂ ಹೆಚ್ಚು ಜನರು ಡಿಸ್‌ಲೈಕ್‌ ಮಾಡಿದ್ದಾರೆ. ಸುಮಾರು 280ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು, ಬಹುತೇಕ ಎಲ್ಲರೂಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡವೇ ಮೊದಲು, ಕನ್ನಡಕ್ಕೆ ಆದ್ಯತೆ ಎಂದು ಹೇಳುವ ಮೂಲಕ ರೆಡ್‌ ಎಫ್‌ಎಂ ನಡೆಯನ್ನು ಖಂಡಿಸಿದ್ದಾರೆ.

(ಫೇಸ್‌ಬುಕ್‌ನಲ್ಲಿ ಕೆಲವರು ಅದೇ ವಿಡಿಯೊ ಹಂಚಿಕೊಂಡು, ಆಕ್ರೋಶ ವ್ಯಕ್ತಪಡಿಸಿದ್ದಾರೆ)

ಸಿಎಂ ಕುಮಾರಸ್ವಾಮಿ ಅಸಮಾಧಾನ...

"ನಮ್ಮೂರು ನಮ್ಮೂರು ಇದುವೇ ನಮ್ಮ ಬೆಂಗಳೂರು" ಎಂದು ನಾನು ಹೇಳಿದ್ದು, ಇದನ್ನು ಬಳಸಿ ಖಾಸಗಿ ರೇಡಿಯೋ ಸಂಸ್ಥೆ ತಮಗೆ ಬೇಕಾದ ಹಾಗೆ ಒಂದು ಹಾಡನ್ನು ರಚಿಸಿಕೊಂಡಿರುವುದನ್ನು ನಾನು ಗಮನಿಸಿದ್ದೇನೆ. ಈ ಹಾಡಿನಲ್ಲಿರುವುದು ನನ್ನ ಅಥವಾ ನಮ್ಮ ಸರ್ಕಾರದ ಅಭಿಪ್ರಾಯವಲ್ಲ. ಕನ್ನಡಿಗರೇ ಕಟ್ಟಿ, ಕನ್ನಡಿಗರೇ ಬೆಳೆಸಿರುವ ಬೆಂಗಳೂರು ನಮ್ಮ ಹೆಮ್ಮೆಯ ಕನ್ನಡ ನಾಡಿನ ರಾಜಧಾನಿ. ಇಲ್ಲಿ ಕನ್ನಡವೇ ಮೊದಲು, ಕನ್ನಡವೇ ಸರ್ವಸ್ವ. ನಾನು ಕೂಡ ಸುಲಲಿತವಾಗಿ ಕನ್ನಡ ಒಂದೇ ಭಾಷೆಯನ್ನು ಮಾತನಾಡಬಲ್ಲ ಓರ್ವ ಸಾಮಾನ್ಯ ಕನ್ನಡಿಗ ಅಷ್ಟೇ.. ಎಂದು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಡನ್ನು ಮಾರ್ಪಡಿಸಿ: ಐಪಿಎಸ್‌ ಅಧಿಕಾರಿ ಡಿ.ರೂಪಾ

ಪ್ರಿಯ ರೆಡ್‌ ಎಫ್‌ಎಂ, ಬೆಂಗಳೂರಿನ ಬಗ್ಗೆ ನಿಮ್ಮದೆ ಕಲ್ಪನೆ ಹೊಂದಿರಲು ನೀವು ಸ್ವತಂತ್ರರು. ಆದರೆ ಬೆಂಗಳೂರು ಕುರಿತಾದ ಈ ಹಾಡು ಕನ್ನಡಿಗರ ಭಾವನೆಗೆ ಮತ್ತು ಅಭಿಮಾನಕ್ಕೆ ದಕ್ಕೆ ಉಂಟು ಮಾಡಲಿದೆ ಎಂದು ನನಗೆ ಅನ್ನಿಸುತ್ತದೆ. ಈ ಸೂಕ್ಷ್ಮತೆಗಳನ್ನು ಅರಿತು, ಈ ಹಾಡನ್ನು ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾರ್ಪಡು ಮಾಡುವಿರೆಂದು ಭಾವಿಸುವೆ ಎಂದು ಡಿ.ರೂಪಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT