ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವಕ್ಕಾಗಿ ಬಾಂಗ್ಲಾ ನಿರಾಶ್ರಿತರ ಕಾತರ

ಅಖಂಡ ಭಾರತದವರು; ಆದರೂ ಅತಂತ್ರ ಸ್ಥಿತಿಯಲ್ಲಿ ಬದುಕು
Last Updated 9 ಜನವರಿ 2020, 19:45 IST
ಅಕ್ಷರ ಗಾತ್ರ

ರಾಯಚೂರು: ‘ಭಾರತ ಸರ್ಕಾರವು ಪ್ರತ್ಯೇಕ ಬಾಂಗ್ಲಾದೇಶ ಮಾಡಿದ್ದಲ್ಲದೆ, ಬಾಂಗ್ಲಾ ವ್ಯಾಪ್ತಿಯಲ್ಲಿದ್ದ ನಮ್ಮನ್ನು 1970ರಲ್ಲಿ ಭಾರತಕ್ಕೆ ಕರೆತಂದು ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿತು. ಆದರೆ, ನಾವು ಅಖಂಡ ಭಾರತದ ಪ್ರಜೆಗಳಾಗಿದ್ದರೂ ಪರಕೀಯರಂತೆ ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ. ಪೌರತ್ವ ಇಲ್ಲದ ಕಾರಣ ನಮಗೆ ಸರ್ಕಾರದ ಯೋಜನೆಗಳ ಲಾಭ ಸಿಗುತ್ತಿಲ್ಲ’ ಎಂಬುದು ಬಾಂಗ್ಲಾ ನಿರಾಶ್ರಿತರ ಅಳಲು.

ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಬಾಂಗ್ಲಾ ನಿರಾಶ್ರಿತರ ನಾಲ್ಕು ಕ್ಯಾಂಪ್‌ಗಳಿವೆ. ಅಲ್ಲಿಗೆ ಭೇಟಿ ನೀಡಿ ಮಾತನಾಡಿಸಿದಾಗ, ಪೌರತ್ವ (ತಿದ್ದಪಡಿ) ಕಾನೂನು ಜಾರಿ ಅವರಲ್ಲಿ ನವೋಲ್ಲಾಸ ಮೂಡಿಸಿರುವುದು ಗಮನಕ್ಕೆ ಬಂತು.

ನೆರೆ ದೇಶಗಳ ವಲಸಿಗ ಹಿಂದುಗಳಿಗೆಲ್ಲ ಪೌರತ್ವ ನೀಡುವುದಾಗಿ ಕೇಂದ್ರದ ಗೃಹ ಸಚಿವರು ಡಿಸೆಂಬರ್‌ 12ರಂದು ಪ್ರಕಟಿಸುತ್ತಿದ್ದಂತೆ, ಈ ಕ್ಯಾಂಪ್‌ಗಳಲ್ಲಿ ಸಂಭ್ರಮ ಮನೆಮಾಡಿತ್ತು. ಪರಸ್ಪರ ಬಣ್ಣ ಎರಚಿ, ಸಿಹಿ ಹಂಚಿದ್ದರು.

ಪೌರತ್ವ ಪ್ರಮಾಣಪತ್ರ ಪಡೆಯುವ ನಿರೀಕ್ಷೆಯಲ್ಲಿ ಅವರೆಲ್ಲ ಇದ್ದಾರೆ.ಇದಕ್ಕೆ ಪೂರಕವಾಗಿ ಕೊಪ್ಪಳದ ಸಂಸದ ಸಂಗಣ್ಣ ಕರಡಿ ಅವರು ಪ್ರಧಾನಿಗೆ ಈಚೆಗೆ ಪತ್ರ ಬರೆದು, ಪೌರತ್ವ ಪ್ರಮಾಣಪತ್ರ ವಿತರಣೆಗೆ ಬರುವಂತೆ ಆಹ್ವಾನಿಸಿದ್ದಾರೆ. ಆದರೆ, ಇನ್ನೂ ಪ್ರತಿಕ್ರಿಯೆ ಶುರುವಾಗಿಲ್ಲ.

‘ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಈಗಿನ ಬಾಂಗ್ಲಾ ಪ್ರದೇಶದಲ್ಲಿದ್ದ ನಮ್ಮ ಪೂರ್ವಜರು ಕೂಡಾ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಇದರ ಪರಿಣಾಮ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ, ಅಲ್ಲಿದ್ದ ನಮಗೆ ಬರಲಿಲ್ಲ. ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕೊಯ್ಲು ಮಾಡಿಕೊಂಡು ಹೋಗುತ್ತಿದ್ದ ಮುಸ್ಲಿಮರು ಮನೆಯಲ್ಲಿದ್ದ ಸಾಮಗ್ರಿಗಳನ್ನೂ ದೋಚುತ್ತಿದ್ದರು. ಜೊತೆಗೆ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದರು’ಎಂದು ‘ಅಖಿಲ ಭಾರತ ಬಂಗಾಲಿ ನಿರಾಶ್ರಿತರ ಸಮನ್ವಯ ಸಮಿತಿ’ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಸೇನ್‌ ರಪ್ತಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಎಲ್ಲದರಿಂದ ತಪ್ಪಿಸಿಕೊಳ್ಳಲು ಭಾರತ ಸರ್ಕಾರವೇ ಅಲ್ಲಿಂದ ನಮ್ಮ ಹಿರಿಯರನ್ನು 1970ರಲ್ಲಿ ಕರೆದುಕೊಂಡು ಬಂದಿದೆ’ ಎಂದು ಮಾಹಿತಿ ನೀಡಿದರು.

ಬಾಂಗ್ಲಾದಿಂದ ಬಂದಿರುವ ಬಹುತೇಕ ನಿರಾಶ್ರಿತರು ದಲಿತ ಹಿಂದೂಗಳು. ನಮಶೂದ್ರ, ಪೋದ, ಪೌಂಡ್ರ, ರಾಜವಂಶಿ ಉಪಜಾತಿಗಳಿಗೆ ಸೇರಿದವರು. ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ನೆಲೆಸಿರುವ ಬಾಂಗ್ಲಾ ನಿರಾಶ್ರಿತರಿಗೆ ಎಸ್‌.ಸಿ. ಮೀಸಲಾತಿ ಸೌಲಭ್ಯ ಇದೆ. ಆದರೆ, ಕರ್ನಾಟಕದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಈ ಉಪಜಾತಿಗಳ ಹೆಸರು ಸೇರ್ಪಡೆಯಾಗಿಲ್ಲ. ಇದರಿಂದ ಶಿಕ್ಷಣ ಹಾಗೂ ಇತರ ಉದ್ದೇಶಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ಪ್ರಮಾಣಪತ್ರ ಪಡೆಯಲು ಅವರು ಹರಸಾಹಸ ಪಡಬೇಕು.

‘ಕೇಂದ್ರ ಸರ್ಕಾರವು ಪೌರತ್ವ ನೀಡಿದರೆ, ದೇಶದ 18 ರಾಜ್ಯಗಳಲ್ಲಿ ನೆಲೆಸಿರುವ ನಾಲ್ಕು ಕೋಟಿ ಬಾಂಗ್ಲಾ ನಿರಾಶ್ರಿತರು ಮುಖ್ಯವಾಹಿನಿಗೆ ಸೇರುವರು. ಒಡಿಶಾ, ಬಂಗಾಳ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ನಿರಾಶ್ರಿತರು ಇದ್ದಾರೆ. ಅಲ್ಲಿ ಜಾಗ ಸಾಲದಿದ್ದಾಗ, ನಾಲ್ಕೂ ಕ್ಯಾಂಪ್‌ಗಳನ್ನು ಮಾತ್ರ ಸಿಂಧನೂರಿನಲ್ಲಿ ಸರ್ಕಾರ ಮಾಡಿಕೊಟ್ಟಿದೆ. ಆರಂಭದಲ್ಲಿ 727 ಕುಟುಂಬಗಳು 5,300 ಜನರು ಸಿಂಧನೂರಿಗೆ ಬಂದಿದ್ದರು. ಪ್ರತಿ ಕುಟುಂಬಕ್ಕೂ 5 ಎಕರೆ ಜಮೀನು, 1 ಗುಡಿಸಲು ಸಹಿತ ನಿವೇಶನವನ್ನು ಸರ್ಕಾರ ಕೊಟ್ಟಿದೆ’ ಎಂದು ಅವರು ವಿವರಿಸಿದರು.

‘ಸದ್ಯ ಕ್ಯಾಂಪ್‌ಗಳಲ್ಲಿರುವ ಒಟ್ಟು ಜನಸಂಖ್ಯೆ 20 ಸಾವಿರ. 1970ರ ನಂತರದಲ್ಲೂ ಏನೂ ಸೌಲಭ್ಯ ಸಿಗದಿದ್ದರೂ ಬಾಂಗ್ಲಾದಿಂದ ಕ್ಯಾಂಪ್‌ಗಳತ್ತ ವಲಸೆ ಬಂದಿದ್ದಾರೆ. ರಸ್ತೆ, ಹಳ್ಳಕೊಳ್ಳ, ಬೀದಿಗಳಲ್ಲಿ ಮನೆ ಮಾಡಿಕೊಂಡು, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ’ ಎಂದು ಪ್ರಸೇನ್‌ ತಿಳಿಸಿದರು.

***

ಎಲ್ಲರಿಗೂ ಸಿಗುವ ನಾಗರಿಕ ಸೌಲಭ್ಯಗಳು ನಮಗೂ ಸಿಗಬೇಕು. ಆ ಕೆಲಸವನ್ನು ಇಂದಿನ ಕೇಂದ್ರ ಸರ್ಕಾರ ಮಾಡುತ್ತಿರುವುದರಿಂದ ನಮಗೆ ಪುನರ್‌ಜನ್ಮ ಬಂದಂತಾಗಿದೆ
–ಪ್ರಸೇನ್‌ ರಪ್ತಾನ್‌,ಅಖಿಲ ಭಾರತ ಬಂಗಾಲಿ ನಿರಾಶ್ರಿತರ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ

ಇಂದಿರಾಗಾಂಧಿ ಹೇಳಿದ ಮಾತಿನಿಂದ ನಾವೆಲ್ಲ ಬಾಂಗ್ಲಾಬಿಟ್ಟು ಬಂದಿದ್ದೇವೆ.50 ವರ್ಷ ಆದ್ರೂ ನಾಗರಿಕತ್ವದ ಸಮಸ್ಯೆ ಪರಿಹಾರ ಮಾಡಲಿಲ್ಲ. ಈಗ ಮೋದಿ ಅವರು ಪೌರತ್ವ ಕೊಡುತ್ತೇವೆ ಎಂದಿದ್ದುಖುಷಿ ತಂದಿದೆ.
-ಗೆನೋದಾಸಿ ಮಂಡಲ್, ಆರ್‌.ಎಚ್‌.ಕ್ಯಾಂಪ್‌ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT