ಭಾನುವಾರ, ಏಪ್ರಿಲ್ 5, 2020
19 °C

ದೊರೆಸ್ವಾಮಿ ಕುರಿತ ಯತ್ನಾಳ್‌ ಹೇಳಿಕೆ ಪ್ರತಿಧ್ವನಿ: ಗದ್ದಲಕ್ಕೆ ಕಲಾಪ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ನೀಡಿರುವ ಹೇಳಿಕೆಯು ಸೋಮವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಗದ್ದಲ, ವಾಕ್ಸಮರಕ್ಕೆ ಕಾರಣವಾಗಿ ಕಲಾಪ ಬಲಿಯಾಯಿತು.

ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಧರಣಿ ನಡೆಸಿ, ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಧಾನಸಭೆಯಲ್ಲಿ ಗದ್ದಲದ ಮಧ್ಯೆಯೇ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ಎಂಟು ಮಸೂದೆಗಳನ್ನು ಮಂಡಿಸಲಾಯಿತು.

ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ವಿಷಯ ಪ್ರಸ್ತಾಪಿಸಲು ಮುಂದಾದರು. ‘ಪೂರ್ವಭಾವಿಯಾಗಿ ನೋಟಿಸ್‌ ನೀಡದೇ ಯಾವುದೇ ವಿಷಯ ಪ್ರಸ್ತಾಪಿಸಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ನೋಟಿಸ್‌ ಕೊಡಿ, ಅನುಮತಿ ನೀಡುವ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅದನ್ನು ಒಪ್ಪದ ಸಿದ್ದರಾಮಯ್ಯ, ‘ಶಾಸಕ ಯತ್ನಾಳ್‌ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಮತ್ತು ಕೀಳುಮಟ್ಟದ ಹೇಳಿಕೆ ಕೊಟ್ಟಿದ್ದಾರೆ. ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ನಿಮ್ಮ ವಿಶೇಷ ಅಧಿಕಾರ ಬಳಸಿ ಅವಕಾಶ ನೀಡಬಹುದು’ ಎಂದು ಸಭಾಧ್ಯಕ್ಷರ ಮನವರಿಕೆಗೆ ಯತ್ನಿಸಿದರು.

‘ಮೊದಲು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಮುಖ್ಯಮಂತ್ರಿಯವರು ಉತ್ತರ ನೀಡಲಿ. ಅಷ್ಟರೊಳಗೆ ನೋಟಿಸ್‌ ಕಳಿಸಿದರೆ ಪರಿಶೀಲಿಸುತ್ತೇನೆ’ ಎಂದು ಸಭಾಧ್ಯಕ್ಷರು ಹೇಳಿದರು.

‘ನೋಟಿಸ್ ನೀಡದೇ ವಿಷಯ ಪ್ರಸ್ತಾಪಕ್ಕೆ ಅವಕಾಶವಿಲ್ಲ. ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವುದು ಬೇಡ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸಭಾಧ್ಯಕ್ಷರ ಉತ್ತರದಿಂದ ತೃಪ್ತರಾಗದ ವಿಪಕ್ಷಗಳ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದರು. ದಿನದ ಕಲಾಪ ಮುಗಿಯುವರೆಗೂ ಜಾಗ ಬಿಟ್ಟು ಕದಲಲ್ಲಿಲ್ಲ.

‘ಬಿಜೆಪಿಯವರು ಬ್ರಿಟಿಷರ ಏಜೆಂಟ್‌’
ಬಿಜೆಪಿ ಮತ್ತು ಸಂಘ ಪರಿವಾರದವರು ಬ್ರಿಟಿಷರ ಏಜೆಂಟರು, ಅವರಿಗೆ ಧಿಕ್ಕಾರ, ಸಂವಿಧಾನ ಹಾಳು ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ, ಭಾರತ್‌ ಮಾತಾಕೀ ಜೈ ಎಂದು ಕಾಂಗ್ರೆಸ್‌ ಸದಸ್ಯರು ಘೋಷಣೆ ಹಾಕಿದರು. ಸದನದಲ್ಲಿ ಹಾಜರಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ನಗುತ್ತಲೇ ಎಲ್ಲವನ್ನು ನೋಡುತ್ತಿದ್ದರು. ಕಾಂಗ್ರೆಸ್ ಶಾಸಕರು ಮತ್ತು ನಾಯಕರಿಗೆ ಯತ್ನಾಳ್‌ ಕೈಮುಗಿದು ಶುಭಾಶಯ ವಿನಿಮಯ ಮಾಡಿಕೊಂಡರು.

**
ಯತ್ನಾಳ್‌ ದೇಶ ದ್ರೋಹ ಮತ್ತು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರನ್ನು ಸದನ ಮುಗಿಯುವವರೆಗೆ ಹೊರಗಿಡಬೇಕು.
–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

**

ಕಾಂಗ್ರೆಸ್‌ನವರು ನೋಟಿಸ್‌ ನೀಡಿದ ತಕ್ಷಣವೇ ಚರ್ಚೆಗೆ ಅವಕಾಶ ನೀಡುತ್ತೇವೆ. ಅದಕ್ಕೆ ತಕ್ಕ ಉತ್ತರವನ್ನೂ ನಮ್ಮವರು ನೀಡಲಿದ್ದಾರೆ. ಕಲಾಪಕ್ಕೆ ಅಡ್ಡಿ ಪಡಿಸುವುದು ಶೋಭೆ ತರುವುದಿಲ್ಲ.
–ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

**

ನಾನು ನೀಡಿರುವ ಹೇಳಿಕೆಗಳಿಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಸತ್ಯವೇನಿದೆಯೋ ಅದನ್ನೇ ಹೇಳಿದ್ದೇನೆ. ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
–ಬಸನಗೌಡ ಪಾಟೀಲ ಯತ್ನಾಳ್‌, ವಿಜಯಪುರ ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು