ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿಗೆ ಶುಭಾಶಯ ಕೋರಿದ ನಾಡಿನ ಗಣ್ಯರಿಂದ ಶರಣ ತತ್ವ ಸ್ಮರಣೆ

Last Updated 26 ಏಪ್ರಿಲ್ 2020, 5:38 IST
ಅಕ್ಷರ ಗಾತ್ರ

ಬೆಂಗಳೂರು: ನಾಡಿನಾದ್ಯಂತ ಇಂದು ಬಸವ ಜಯಂತಿ ಆಚರಿಸಲಾಗುತ್ತಿದೆ. ಜನರು ತಮ್ಮ ಮನೆಗಳಲ್ಲಿಯೇ ಕುಳಿತು ವಿಶ್ವಗುರು ಬಸವಣ್ಣನವರ ಸ್ಮರಣೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ ನಾಡಿನ ಹಲವು ಗಣ್ಯರು ಬಸವ ಜಯಂತಿ ಶುಭಾಶಯ ಕೋರಿ ಟ್ವೀಟ್ ಮಾಡುವ‌ ಮೂಲಕ ಶರಣ ತತ್ವಗಳನ್ನು ನೆನಪಿಸಿಕೊಂಡಿದ್ದಾರೆ.

ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ನ್ಯಾಯದ ಮಾದರಿಯನ್ನು ತೋರಿಸಿಕೊಟ್ಟವರು ಬಸವಣ್ಣ ಎಂದು ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, 'ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ನ್ಯಾಯದ ಮಾದರಿಯನ್ನು - ಸಂಸತ್ತಿನ ಪರಿಕಲ್ಪನೆಯನ್ನು ತೋರಿಸಿಕೊಟ್ಟವರು ಬಸವಣ್ಣ. ಅವರ ವಚನಗಳು ಕೇವಲ ಬೋಧನೆಯಲ್ಲ, ಅವು ಕ್ರಾಂತಿ ಗೀತೆಗಳು. ಅವರು ತೋರಿದ ದಾರಿಯಲ್ಲಿ ಸಾಗಿದರೆ ಕಲ್ಯಾಣ ರಾಜ್ಯದ ಕನಸು ನನಸಾದೀತು' ಎಂದು ಹೇಳುವ ಮೂಲಕ ಕನ್ನಡ ಜನತೆಗೆ ಬಸವ ಜಯಂತಿಯ ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನೇ ನಿನ್ನೆ-ಇಂದು-ನಾಳೆಯೂ ನನ್ನ ಕೈಹಿಡಿದು ನಡೆಸುವ ವೈಚಾರಿಕ ಗುರು ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಬಡವರು,‌ ಶೋಷಿತರು, ಜಾತಿ ತಾರತಮ್ಯದಿಂದ ನರಳಿದವರು, ಮಹಿಳೆಯರು ಹೀಗೆ ಅನ್ಯಾಯಕ್ಕೀಡಾದ ಸಮುದಾಯದ ಪರವಾಗಿ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನೇ ನಿನ್ನೆ-ಇಂದು-ನಾಳೆಯೂ ನನ್ನ ಕೈಹಿಡಿದು ನಡೆಸುವ ವೈಚಾರಿಕ ಗುರು. ಬಸವ ಜಯಂತಿಯ ದಿನ ಆ ಚೇತನಕ್ಕೆ ಭಕ್ತಿಯ ನಮನಗಳು' ಎಂದಿದ್ದಾರೆ.

ಅಣ್ಣ ಬಸವಣ್ಣನವರ ಬದುಕು, ತತ್ವ, ವಚನ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಆಗಲಿ ಎಂದಿರುವ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, 'ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು. 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಬದುಕು, ತತ್ವ, ವಚನ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಆಗಲಿ' ಎಂದು ಟ್ವೀಟಿಸಿದ್ದಾರೆ.


12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ-ಧಾರ್ಮಿಕ ಕ್ರಾಂತಿ ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, 'ವಿಶ್ವದ ಮೊದಲ ಪ್ರಜಾಪ್ರಭುತ್ವ "ಅನುಭವ ಮಂಟಪ" ಜಾರಿಗೆ ತಂದಂತಹ ಜಗಜ್ಯೋತಿ ಕ್ರಾಂತಿಕಾರಿ ಬಸವಣ್ಣನವರಿಗೆ ಹೃತ್ಪೂರ್ವಕ ನಮನಗಳು' ಎಂದು ಹೇಳಿದ್ದಾರೆ.

ಬಸವ ಜಯಂತಿಗೆ ಶುಭಾಶಯ ಕೋರಿರುವ ಆರೋಗ್ಯ ಸಚಿವ ಶ್ರೀರಾಮುಲು, ಅನುಭವ ಮಂಟಪವೆಂಬ ಪ್ರಜಾತಾಂತ್ರಿಕ ಸದನದ ಸ್ಥಾಪಕನಿಗೆ ಶಿರಬಾಗಿ ಶರಣು ಎಂದು ಹೇಳಿದ್ದಾರೆ.

ಬಸವ ಜಯಂತಿ ಪ್ರಯುಕ್ತ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಮುಖಂಡರಾದ ಎಂ.ಬಿ. ಪಾಟೀಲ್‌, ಈಶ್ವರ್‌ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್‌, ನಾಡಿನ ಜನರಿಗೆ ಶುಭಾಶಯ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT