ಬುಧವಾರ, ನವೆಂಬರ್ 20, 2019
25 °C

ಬಿಎಸ್‌ವೈ ಮಾತಿಗೆ ಸಹಮತ: ಬಸವರಾಜ ಹೊರಟ್ಟಿ

Published:
Updated:

ಹುಬ್ಬಳ್ಳಿ: ‘ಅನರ್ಹ ಶಾಸಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೈತಿಕ ಜವಾಬ್ದಾರಿಯಿಂದ ಆಡಿರುವ ಮಾತಿಗೆ ನನ್ನ ಸಹಮತ ಇದೆ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

‘ಅನರ್ಹ ಶಾಸಕರಿಗೆ ಮಾತುಕೊಟ್ಟಂತೆ ನಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅವರ ನಂಬಿಕೆಗೆ ದ್ರೋಹ ಮಾಡುವುದು ಸರಿಯಲ್ಲ ಎಂಬ ಯಡಿಯೂರಪ್ಪ ಹೇಳಿಕೆಗೆ ನನ್ನ ಬೆಂಬಲ ಇದೆ. ಹಾಗಂತ, ಆಪರೇಷನ್‌ ಕಮಲವನ್ನು ಬೆಂಬಲಿಸುತ್ತಿಲ್ಲ; ಅದು ಮುಗಿದುಹೋದ ವಿಷಯ’ ಎಂದು ತಿಳಿಸಿದರು.

ದೇವೇಗೌಡ ತೀರ್ಮಾನಿಸಬೇಕು: ಬಿಜೆಪಿಗೆ ಬೆಂಬಲ ನೀಡುವ ಕುರಿತು ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ಕುಮಾರಸ್ವಾಮಿ ಅವರ ಇಂತಹ ಹೇಳಿಕೆಯಿಂದ ಬಿಜೆಪಿಯನ್ನು ಉತ್ತೇಜಿಸಿದಂತಾಗುತ್ತದೆ. ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ಇದುವರೆಗೂ ಯಾವುದೇ ಚರ್ಚೆಯಾಗಿಲ್ಲ. ಈ ವಿಷಯದಲ್ಲಿ ಯಾರು ಏನೇ ಹೇಳಿದರೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು.

ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಸೇರಿದಂತೆ ಮೂರೂ ಪಕ್ಷದ ಬಹುತೇಕ ಶಾಸಕರಿಗೆ ಮಧ್ಯಂತರ ಚುನಾವಣೆ ಬೇಡವಾಗಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)