ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಮೇಯರ್ ಆಯ್ಕೆಗೆ ನಾಳೆಯೇ ಚುನಾವಣೆ

ಸ್ಥಾಯಿ ಸಮಿತಿಗಳು, ಮೇಯರ್, ಉಪ ಮೇಯರ್ ಸ್ಥಾನಕ್ಕೆ ಒಟ್ಟಿಗೇ ಚುನಾವಣೆ ನಡೆಸಲು ಚುನಾವಣಾಧಿಕಾರಿ ನಿರಾಕರಣೆ
Last Updated 30 ಸೆಪ್ಟೆಂಬರ್ 2019, 11:48 IST
ಅಕ್ಷರ ಗಾತ್ರ

ಬೆಂಗಳೂರು:ಮೇಯರ್ ಮತ್ತು ಉಪಮೇಯರ್ ಆಯ್ಕೆಗೆ ಅ.1 ರಂದೇ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಹರ್ಷ ಗುಪ್ತ ಸ್ಪಷ್ಟಪಡಿಸಿದರು.

ಇದರ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳ ಆಯ್ಕೆಗೂ ಚುನಾವಣೆ ನಡೆಯಲಿದೆ. ಇನ್ನುಳಿದ 8 ಸ್ಥಾಯಿಸಮಿತಿಗಳಿಗೆ ಡಿಸೆಂಬರ್‌ನಲ್ಲಿಚುನಾವಣೆ ನಡೆಯಲಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಬಿಎಂಪಿ ಮೇಯರ್ ಚುನಾವಣೆಯನ್ನು ಮುಂದೂಡಿಕೆ ಮಾಡಿ ನಗರಾಭಿವೃದ್ಧಿ ಇಲಾಖೆ ಸೋಮವಾರ ಆದೇಶ ಮಾಡಿತ್ತು. ಆದರೆ ಚುನಾವಣಾ ಅಧಿಕಾರಿಹರ್ಷ ಗುಪ್ತ ದಿನಾಂಕ ಮುಂದೂಡಲು ನಿರಾಕರಿಸಿದರು.

ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಬಿಜೆಪಿಯಲ್ಲಿ ಗೊಂದಲ ಉಂಟಾಗಿರುವುದರಿಂದ ಚುನಾವಣೆಯನ್ನೇ ಮುಂದೂಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎನ್ನಲಾಗುತ್ತಿದೆ.

45 ದಿನ ಚುನಾವಣೆ ಮುಂದೂಡುವಂತೆ ಮನವಿ ಮಾಡಿಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಯನ್ನು ನಡೆಸಿಕೊಡುವ ಉಸ್ತುವಾರಿ ಹೊಂದಿರುವ ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತ ಅವರಿಗೆ ಸರ್ಕಾರ ಈ ಹಿಂದೆಯೇ ಪತ್ರ ಬರೆದಿತ್ತು.

ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಏಳು ಮಂದಿ ಆಕಾಂಕ್ಷಿಗಳಿದ್ದಾರೆ. ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಡುವೆ ಶೀತಲ ಸಮರ ನಡೆಯುತ್ತಿದೆ.

ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ ಐವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ಯಡಿಯೂರಪ್ಪ ರಚಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದ ನಳಿನ್ ಕುಮಾರ್ ಕಟೀಲ್, 'ಪಕ್ಷವು ಯಾವುದೇ ಸಮಿತಿಯನ್ನು ರಚಿಸಿಲ್ಲ' ಎಂದು ತಿಳಿಸಿದ್ದರು.

ಒಂದು ವೇಳೆ ಸಮಿತಿ ಅಂತಿಮಗೊಳಿಸಿದ ಅಭ್ಯರ್ಥಿಗೆ ಪಕ್ಷವು ಟಿಕೆಟ್ ನೀಡದೇ ಇದ್ದಲ್ಲಿ ಪಕ್ಷದ ನಿರ್ಧಾರದ ವಿರುದ್ಧ ಸೆಡ್ಡು ಹೊಡೆಯಲು ಬಿಜೆಪಿಯ ಶಾಸಕರು ಹಾಗೂ ಕಾರ್ಪೊರೇಟ್‌ಗಳ ಒಂದು ಬಣ ಸಜ್ಜಾಗಿದೆ. ಮೇಯರ್ ಸ್ಥಾನವು ಈ ಬಾರಿಯೂ ಬಿಜೆಪಿಯಿಂದ ಕೈತಪ್ಪಿ ಹೋದರೆ ಪಕ್ಷವು ಭಾರಿ ಮುಜುಗರಕ್ಕೆ ಒಳಪಡಬೇಕಾಗುತ್ತದೆ. ಹಾಗಾಗಿ, ಅಕ್ಟೋಬರ್ 1ರಂದು ನಿಗದಿಯಾಗಿದ್ದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯನ್ನೇ ಮುಂದೂಡುವಂತೆ ಕೆಲವು ಶಾಸಕರು ಹಾಗೂ ಬಿಜೆಪಿಯ ಪಾಲಿಕೆ ಸದಸ್ಯರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

ಈ ಹಿಂದೆ, ಸೆಪ್ಟೆಂಬರ್ 27 ರಂದು ಚುನಾವಣೆ ನಿಗದಿಯಾಗಿತ್ತು. ಸ್ಥಾಯಿ ಸಮಿತಿಗಳಿಗೂ ಮೇಯರ್ ಚುನಾವಣೆಯ ದಿನದಂದೇ ಮತದಾನ ನಡೆಸುವ ವಿಚಾರದಲ್ಲಿ ಗೊಂದಲ ಉಂಟಾದ ಕಾರಣ ಮೇಯರ್ ಚುನಾವಣೆಯನ್ನು ಅ.1ಕ್ಕೆ ಮುಂದೂಡಲಾಗಿತ್ತು. ಬಳಿಕ 8 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹೈಕೋರ್ಟ್ ಮೊರೆ ಹೋಗಿದ್ದರು. ಸ್ಥಾಯಿ ಸಮಿತಿಗಳ ಅಧಿಕಾರ ಅವಧಿ ಇನ್ನೂ ಎರಡು ತಿಂಗಳು ಇರುವುದರಿಂದ ಈಗಲೇ ಚುನಾವಣೆ ನಡೆಸದಂತೆ ಹೈಕೋರ್ಟ್ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT